ಮೈಸೂರು: ಪ್ರಧಾನಿ ನರೇಂದ್ರ ಮೋದಿ ಉಳಿದುಕೊಂಡಿದ್ದ ಹೋಟೆಲ್ ಬಿಲ್ ಪಾವತಿ ವಿಷಯ ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದೆ.
ಕಳೆದ ವರ್ಷ ಪ್ರಧಾನಿ ಮೈಸೂರಿಗೆ ಬಂದಾಗ ವಾಸ್ತವ್ಯ ಹೂಡಿದ್ದ ಹೋಟೆಲ್ ಬಿಲ್ ಬಾಕಿ 80.60 ಲಕ್ಷ ರೂ. ಪಾವತಿಸಿಲ್ಲ. ಜೂನ್ ಒಳಗೆ ಬಾಕಿ ಪಾವತಿಸದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು. ಇನ್ನೂ ವಿಳಂಬವಾದರೆ ಶೇ.18ರ ಬಡ್ಡಿ ಸೇರಿಸಿ 20.09 ಲಕ್ಷ ರೂ. ಪಾವತಿಸಬೇಕು ಎಂದು ಪ್ರಧಾನಿ ಉಳಿದುಕೊಂಡಿದ್ದ ನಗರದ ರ‌್ಯಾಡಿಸನ್ ಬ್ಲೂ ಪ್ಲಾಜಾ ಹಣಕಾಸು ವಿಭಾಗದ ಪ್ರಧಾನ ವ್ಯವಸ್ಥಾಪಕರು ಅರಣ್ಯ ಅಧಿಕಾರಿಗೆ ಮೇ 21ರಂದು ಪತ್ರ ಬರೆದಿದ್ದಾರೆ.
ಹುಲಿ ಯೋಜನೆಗೆ 50 ವರ್ಷ ತುಂಬಿದ್ದರ ನೆನಪಿಗಾಗಿ ಕೇಂದ್ರ ಹಾಗೂ ರಾಜ್ಯ ಅರಣ್ಯ ಇಲಾಖೆಯಿಂದ ಮೂರು ದಿನಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ತಗಲುವ 3 ಕೋಟಿ ರೂ. ವೆಚ್ಚವನ್ನು ಕೇಂದ್ರ ಭರಿಸುವುದಾಗಿ ಭರವಸೆ ನೀಡಿತ್ತು. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ), ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (ಎಂಒಇಇ) 2023ರ ಏಪ್ರಿಲ್ 9 ರಿಂದ 11 ರವರೆಗೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿತ್ತು.
ಪ್ರಧಾನಿ ಬರುವುದು ಖಚಿತವಾಗುತ್ತಿದ್ದಂತೆ ಕಾರ್ಯಕ್ರಮಗಳನ್ನು ಹೆಚ್ಚಿಸುವಂತೆ ಅಧಿಕಾರಿಗಳು ಆಯೋಜಕರಿಗೆ ಸೂಚಿಸಿದ್ದರು. ಹೀಗಾಗಿ 3 ಕೋಟಿ ರೂ. ಇದ್ದ ವೆಚ್ಚ 6.33 ಕೋಟಿ ರೂ.ಗೆ ಏರಿಕೆ ಅಗಿತ್ತು. ಮೋದಿ ಅವರು ನಗರದ ರ‌್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಉಳಿದುಕೊಂಡು, ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಂಡೀಪುರ ಅರಣ್ಯ ಪ್ರದೇಶದಲ್ಲಿ ಸಫಾರಿ ನಡೆಸಿ ವನ್ಯಜೀವಿ ಫೋಟೋಗಳನ್ನು ಕ್ಲಿಕ್ಕಿಸಿದ್ದರು.
ಕಾರ್ಯಕ್ರಮ ಮುಗಿದ ಬಳಿಕ ವೆಚ್ಚ ಹೆಚ್ಚಾಗಿದ್ದರಿಂದ ಎನ್‌ಟಿಸಿಎ ಅಧಿಕಾರಿಗಳು, ಪ್ರಧಾನಿ ಉಳಿದುಕೊಂಡಿದ್ದ ವೆಚ್ಚವನ್ನು ರಾಜ್ಯಗಳೇ ಭರಿಸಬೇಕು. ಹೋಟೆಲ್ ಬಿಲ್ ರಾಜ್ಯ ಸರ್ಕಾರ ಪಾವತಿಸಿದರೆ, ಉಳಿದ ಹಣವನ್ನು ನಾವು ಕೊಡುವುದಾಗಿ ಹೇಳಿ 3 ಕೋಟಿ ರೂ. ಬಿಡುಗಡೆ ಮಾಡಿದೆ. ಉಳಿದ 3.33 ಕೋಟಿ ರೂ. ನೀಡಬೇಕಿದೆ.
ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿಗಳು) ಅವರು ಎನ್‌ಟಿಸಿಎ ಪ್ರಧಾನ ಉಪ ನಿರೀಕ್ಷಕರಿಗೆ 2023ರ ಸೆಪ್ಟೆಂಬರ್ 29 ರಂದು ಬಾಕಿ ನೀಡುವಂತೆ ಪತ್ರ ಬರೆದಿದ್ದಾರೆ. ಎನ್‌ಟಿಸಿಎ ಅಧಿಕಾರಿಗಳು 2024ರ ಫೆಬ್ರವರಿ 12ರಂದು ಪತ್ರ ಬರೆದು ಪ್ರಧಾನ ಮಂತ್ರಿ ಉಳಿದುಕೊಂಡಿದ್ದ ಹೋಟೆಲ್ ವೆಚ್ಚವನ್ನು ರಾಜ್ಯ ಸರ್ಕಾರ ಪಾವತಿಸಬೇಕು ಎಂದು ಸೂಚಿಸಿದೆ.
ಕೇಂದ್ರದ ಈ ಪತ್ರದ ಬಗ್ಗೆ ಅರಣ್ಯ ಅಧಿಕಾರಿಗಳು, ರಾಜ್ಯ ಸರ್ಕಾರಕ್ಕೆ ಪತ್ರ ಬರೆದಾಗ, ಚುನಾವಣಾ ನೀತಿ ಸಂಹಿತೆ ಇದ್ದುದ್ದರಿಂದ ನಮ್ಮ ರಾಜ್ಯದ ಜನಪ್ರತಿನಿಧಿಗಳು ಭಾಗವಹಿಸಿರಲಿಲ್ಲ. ಹಾಗಾಗಿ ಹಣ ನೀಡಲು ಬರುವುದಿಲ್ಲ ಎನ್ನುವ ಉತ್ತರ ನೀಡಿದ್ದರೆನ್ನಲಾಗಿದೆ. ಈ ಹಗ್ಗಜಗ್ಗಾಟ ಕಳೆದ ಒಂದು ವರ್ಷದಿಂದ ನಡೆಯುತ್ತಿದೆ.
ಈಗ ಹೋಟೆಲ್ ಮಾಲೀಕರು, ಪ್ರಧಾನಿ ಉಳಿದುಕೊಂಡಿದ್ದ ಬಾಕಿ ಹಣ ಪಾವತಿಸುವಂತೆ ಕಾರ್ಯಕ್ರಮ ಆಯೋಜಿಸಿದ್ದ ಅಧಿಕಾರಿಗಳನ್ನು ಒಂದು ವರ್ಷದಿಂದ ಕೋರುತ್ತಾ ಬಂದಿದ್ದಾರೆ. ಆದರೆ ಹಣ ಬಿಡುಗಡೆಯಾಗಿಲ್ಲ ಎನ್ನುವ ಉತ್ತರದಿಂದ ಈಗ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್)ಗೆ ಪತ್ರ ಬರೆದು ಕಾನೂನು ಎಚ್ಚರಿಕೆ ನೀಡಿದ್ದಾರೆ.
*ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದ್ದರಿಂದ ರಾಜ್ಯ ಸರ್ಕಾರವು ಪ್ರಧಾನಿ ಉಳಿದುಕೊಂಡಿದ್ದ ಹೋಟೆಲ್ ಬಾಕಿ ಹಣ ನೀಡುವ ಪ್ರಸ್ತಾಪವನ್ನು ತಿರಸ್ಕರಿಸಿದೆ. ಹೀಗಾಗಿ ಹೋಟೆಲ್‌ನವರಿಗೆ ಹಣ ನೀಡಲು ವಿಳಂಬವಾಗಿದೆ. ಇದನ್ನು ಸರ್ಕಾರದ ಗಮನಕ್ಕೂ ತರಲಾಗಿದೆ.
ಡಾ.ಬಸವರಾಜು, ಉಪ ಅರಣ್ಯ ಸಂರಕ್ಷಣಾಧಿಕಾರಿ