

ಉಡುಪಿ: ಮಲ್ಪೆ ಶಿಪ್ ಯಾರ್ಡ್ ಮುಂದಿನ ದಿನಗಳಲ್ಲಿ ಹಡಗು ಮತ್ತು ಟಗ್ ನಿರ್ಮಾಣದಲ್ಲಿ ಮುಂಚೂಣಿ ಸ್ಥಾನ ಪಡೆಯಲಿದ್ದು, ಕಳೆದ 2 ವರ್ಷಗಳಲ್ಲಿ 16ಕ್ಕೂ ಅಧಿಕ ಮೀನುಗಾರಿಕಾ ದೋಣಿಗಳು, ಅತ್ಯುತ್ತಮ ಗುಣಮಟ್ಟದ 2 ಟಗ್ಗಳನ್ನು ನಿರ್ಮಿಸಲಾಗಿದೆ. ಬ್ಯಾಟರಿ ಚಾಲಿತ ಗ್ರೀನ್ ಟಗ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಕೊಚ್ಚಿನ್ ಶಿಪ್ ಯಾರ್ಡ್ ಅಡಳಿತ ನಿರ್ದೆಶಕ ಮಧು ಎಸ. ನಾಯರ್ ಹೇಳಿದರು.
ಬುಧವಾರ ಮಲ್ಪೆಯ ಉಡುಪಿ-ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ನಲ್ಲಿ ಅದಾನಿ ಗ್ರೂಪ್ ಕಂಪನಿ ಓಷನ್ ಸ್ಪಾರ್ಕಲ್ ಲಿಮಿಟೆಡ್ಗಾಗಿ ನಿರ್ಮಿಸಿದ 62 ಟಿ ಬೊಲ್ಲಾರ್ಡ್ ಪುಲ್ ಟಗ್ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಂಪೆನಿಯಲ್ಲಿ ಸದ್ಯ 400 ಮಂದಿ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ 800ಕ್ಕೂ ಅಧಿಕ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. 6 ಸಾವಿರಕ್ಕೂ ಅಧಿಕ ಮಂದಿಗೆ ಪರೋಕ್ಷ ಉದ್ಯೋಗಗಳು ಲಭಿಸಲಿವೆ. ಸ್ಥಳಿಯ ಐಟಿಐ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕಂಪೆನಿಯ ಸಿಎಸ್ಆರ್ ನಿಧಿ ಬಳಕೆ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಮಾತನಾಡಿ, ಮಲ್ಪೆ ಶಿಪ್ಯಾರ್ಡ್ ಬೆಳವಣಿಗೆಯಿಂದ ಉಡುಪಿಯಲ್ಲಿ ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗಲಿವೆ. ಹಳೆಯ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಿಎಸ್ಆರ್ ನಿಧಿ ನೀಡಿ ಸಹಕರಿಸಬೇಕು ಎಂದರು.
ಯುಸಿಎಸ್ಎಲ್ನ ಸಿಇಒ ಹರಿಕುಮಾರ್ ಮಾತನಾಡಿ, ಹೈಸ್ಪೀಡ್ ಗಸ್ತು ದೋಣಿಗಳು ಮತ್ತು ಇಂಟರ್ಸೆಪ್ಟರ್ ಬೋಟ್ಗಳನ್ನು ತಯಾರಿಸಲು ಭಾರತೀಯ ಕೋಸ್ಟ್ ಗಾರ್ಡ್ ನಮಗೆ ಅನುಮೋದನೆ ನೀಡಿದೆ. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ವೈ) ಅಡಿಯಲ್ಲಿ ಯುಸಿಎಸ್ಎಲ್ ಆಳ ಸಮುದ್ರ ಮೀನುಗಾರಿಕೆ ಹಡಗುಗಳನ್ನು ತಯಾರಿಸಲು ಕೇರಳ ರಾಜ್ಯವು 10 ಹಡಗುಗಳಿಗೆ ಆರ್ಡರ್ ಮಾಡಿದೆ. 5 ಬೋಟ್ಗಳನ್ನು ಈಗಾಗಲೇ ವಿತರಿಸಲಾಗಿದೆ. ಉಳಿದ ಐದು ವಿತರಣೆಗೆ ಸಿದ್ಧವಾಗಿದೆ ಎಂದು ಹೇಳಿದರು.
ಓಷನ್ ಸ್ಪಾರ್ಕಲ್ ಲಿಮಿಟೆಡ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜಯ್ ಕುಮಾರ್ ಕೇವಲ್ರಮಣಿ ಹಾಗೂ ರಿತು ಸಂಜಯ್ ಕುಮಾರ್ ಕೇವಲ್ರಮಣಿ , ಕೊಚ್ಚಿನ್ ಶಿಪ್ಯಾರ್ಡ್ ನಿರ್ದೇಶಕ (ತಾಂತ್ರಿಕ) ಬಿಜೋಯ್ ಭಾಸ್ಕರ್, ಮುಖ್ಯ ಹಣಕಾಸು ಅಧಿಕಾರಿ ಶಂಕರ್ ನಟರಾಜ್, ಕರಾವಳಿ ಭದ್ರತಾ ಪಡೆ ಪೊಲೀಸ್ ವರಿಷ್ಠ್ಠಾಧಿಕಾರಿ ಅಂಶು ಕುಮಾರ್ ಉಪಸ್ಥಿತರಿದ್ದರು.
ಟಗ್ ವಿಶೇಷತೆ: ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ (ಯುಸಿಎಸ್ಎಲ್) ಮಲ್ಪೆಯಲ್ಲಿರುವ ಶಿಪ್ ಬಿಲ್ಡಿಂಗ್ ಯಾರ್ಡ್ನಲ್ಲಿ ಶಿಪ್ಪಿಂಗ್ ಮತ್ತು ಹಾರ್ಬರ್ ಸೇವೆಗಳಿಗಾಗಿ 49.84 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ 62 ಟನ್ ಬೊಲ್ಲಾರ್ಡ್ ಪುಲ್ ಟಗ್ ಬಂದರುಗಳಲ್ಲಿ ಈ ಟಗ್ ಉದ್ದವಾದ ಹಡಗುಗಳನ್ನು (ಸುಮಾರು 250 ರಿಂದ 300 ಮೀಟರ್ ಉದ್ದ) ಕಡಿಮೆ ತ್ರಿಜ್ಯದಲ್ಲಿ ತಿರುಗಿಸಲು ಸಹಾಯ ಮಾಡುತ್ತದೆ. ಟಗ್ 33 ಮೀಟರ್ಗಳ ಉದ್ದ, 11.9 ಮೀಟರ್ಗಳ ಅಗಲ ಮತ್ತು 5.40 ಮೀಟರ್ ಆಳವಿದೆ. ಬಂದರುಗಳಲ್ಲಿ ಅಗ್ನಿಶಾಮಕ ದಳವಾಗಿ ಕಾರ್ಯನಿರ್ವಹಿಸುತ್ತದೆ. ಸಾಲ್ವೇಜ್ ಟೋವಿಂಗ್ಗೆ ಉಪಯೋಗಿಯಾಗಿದೆ. ಅದರ 80 ಪ್ರತಿಶತ ಭಾಗಗಳನ್ನು ಭಾರತದಲ್ಲಿಯೇ ತಯಾರಿಸಲಾಗಿದೆ.