

ತುಮಕೂರು : ಮೌಖಿಕ ಒಪ್ಪಂದದಂತೆ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ (ಟೂಡಾ) ಅಧ್ಯಕ್ಷ ಸ್ಥಾನವನ್ನು ಹತ್ತೇ ತಿಂಗಳಿಗೆ ತ್ಯಜಿಸಬೇಕಿದ್ದ ಬಿ.ಎಸ್.ನಾಗೇಶ್ (ಬಾವಿಕಟ್ಟೆ ನಾಗೇಶ್) ವರ್ಷವಾದರೂ ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ಇರುವುದು ಪಕ್ಷನಿಷ್ಠರು ಹಾಗೂ ಸಂಘ ಪರಿವಾರದ ಮುಖಂಡರ ಕಣ್ಣು ಕೆಂಪಾಗಿಸಿದೆ.
2019ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಅದಾದ ವರ್ಷದ ಬಳಿಕ ಸ್ಥಳೀಯ ಪ್ರಾಧಿಕಾರ, ಸಂಸ್ಥೆಗಳಿಗೆ ಪಕ್ಷಕ್ಕೆ ದುಡಿದಿದ್ದ ಕಾರ್ಯಕರ್ತರನ್ನು ನೇಮಿಸಲಾಯಿತು. ಅದರಂತೆ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಪಾಲಿಕೆಗೆ ಐವರು ನಾಮನಿರ್ದೇಶನ ಮಾಡಲಾಯಿತು. ಈ ವೇಳೆ ಟೂಡಾಕ್ಕೆ ಮೂವರು ಪ್ರಬಲ ಆಕಾಂಕ್ಷಿಗಳಿದ್ದು ಅಧಿಕಾರ ಹಂಚಿಕೆ ಸೂತ್ರ ಅನುಸರಿಸಿ ಮೊದಲ ಅವಧಿಗೆ ಬಿ.ಎಸ್.ನಾಗೇಶ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಯಿತು.
10-10-10 ತಿಂಗಳ ‘ಸೂತ್ರ’: ಸ್ಥಳೀಯ ಸಂಸ್ಥೆ ಹಾಗೂ ಪ್ರಾಧಿಕಾರಕ್ಕೆ ನೇಮಕ ಮಾಡುವ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷನಿಷ್ಠರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಧಿಕಾರ ಹಂಚಿಕೆ ‘ಸೂತ್ರ’ಕ್ಕೆ ಮೊರೆ ಹೋದರು. ಹಾಗಾಗಿ, ಟೂಡಾ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿಯಲ್ಲೂ ಮೌಖಿಕವಾಗಿ ಸೂತ್ರದಂತೆ ಅಧಿಕಾರ ಹಂಚಲಾಯಿತು. ಈ ಹಿನ್ನೆಲೆಯಲ್ಲಿ ಸರ್ಕಾರದ 30 ತಿಂಗಳ ಅವಧಿಯಲ್ಲಿ ಟೂಡಾ ಅಧ್ಯಕ್ಷ ಸ್ಥಾನಕ್ಕೆ 10-10-10 ತಿಂಗಳಂತೆ ಮೂವರು ಪ್ರಬಲ ಆಕಾಂಕ್ಷಿಗಳನ್ನು ನೇಮಿಸುವ ಒಪ್ಪಂದಕ್ಕೆ ಬರಲಾಗಿದ್ದು ಮೊದಲ ಅವಧಿಗೆ ಆಗಸ್ಟ್ 2020ರಲ್ಲಿ ನಾಗೇಶ್ ಅವರನ್ನು ನೇಮಿಸಲಾಯಿತು.
ಈ ವೇಳೆ ನಡೆದ ರಾಜಕೀಯ ಪ್ರಹಸನದಲ್ಲಿ ಬ್ರಾಹ್ಮಣ ಸಮುದಾಯದ ಜಿ.ಕೆ.ಶ್ರೀನಿವಾಸ್ ಅವರನ್ನು ಮೊದಲ ಅವಧಿಗೆ ನೇಮಿಸಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದರಾದರೂ ಕೊನೇ ಕ್ಷಣದಲ್ಲಿ ಪ್ರಬಲ ಲಿಂಗಾಯತ ಸಮುದಾಯದ ನಾಗೇಶ್ ತಮಗೆ ಅವಕಾಶ ಕೊಡುವಂತೆ ಶಾಸಕರು, ಸಂಸದರ ಪಟ್ಟು ಹಿಡಿದು ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಅಂತಿಮವಾಗಿ ಪಕ್ಷದ ವರಿಷ್ಠರು ಮನವೊಲಿಕೆ ಬಳಿಕ ಶ್ರೀನಿವಾಸ್ ಹಿಂದೆ ಸರಿದಿದ್ದರು.
ಕರೊನಾ ನೆಪ: ಕರೊನಾ ನೆಪವೊಡ್ಡಿ ಮೌಖಿಕ ಒಪ್ಪಂದದಂತೆ ಪಕ್ಷದ ಮುಖಂಡರಿಗೆ ಕೊಟ್ಟಿದ್ದ ವಾಗ್ಧಾನ ಮುರಿದು ವರ್ಷವಾದರೂ ಇನ್ನೂ ಅಧಿಕಾರ ತ್ಯಾಗ ಮಾಡಲು ನಾಗೇಶ್ ಹಿಂದೇಟು ಹಾಕುತ್ತಿರುವುದು ಉಳಿದ ಆಕಾಂಕ್ಷಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಟೂಡಾ ಪ್ರಬಲ ಆಕಾಂಕ್ಷಿ ಜಿ.ಕೆ.ಶ್ರೀನಿವಾಸ್ ಈಗಾಗಲೇ ಸಂಘ ಪರಿವಾರದ ಮುಖಂಡರ ಜತೆ ಶಾಸಕ ಜ್ಯೋತಿಗಣೇಶ್, ಸಂಸದ ಜಿ.ಎಸ್.ಬಸವರಾಜು ಅವರನ್ನು ಭೇಟಿ ಮಾಡಿ ಒತ್ತಡ ಹೇರಿದ್ದಾರೆ. ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್‌ಜೀ ಅವರಿಗೂ ಈ ವಿಷಯ ಮುಟ್ಟಿಸಲಾಗಿದ್ದು ಇನ್ನಾದರೂ ಪಕ್ಷನಿಷ್ಠರಿಗೆ ಅಧಿಕಾರ ಭಾಗ್ಯ ಸಿಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.
ಕಮಲಮ್ಮಗೂ ಭರವಸೆ : ತಿಗಳ ಸಮುದಾಯದ ಪ್ರಬಲ ಮುಖಂಡರಾದ ನಗರಸಭೆ ಮಾಜಿ ಅಧ್ಯಕ್ಷೆ ಕಮಲಮ್ಮ ಅವರಿಗೂ ಟೂಡಾ ಅಧ್ಯಕ್ಷ ಸ್ಥಾನ ಕೊಡುವ ಭರವಸೆಯನ್ನು ಶಾಸಕರು, ಸಂಸದರು ನೀಡಿದ್ದರು. 13 ತಿಂಗಳು ಅಧಿಕಾರ ಅನುಭವಿಸಿರುವ ನಾಗೇಶ್ ಅಧಿಕಾರದಿಂದ ಕೆಳಗಿಳಿಯಲು ಮನಸು ಮಾಡದೇ ಇರುವುದರಿಂದ ಶ್ರೀನಿವಾಸ್, ಕಮಲಮ್ಮಗೆ ಸೇವೆ ಸಲ್ಲಿಸಲು ಹೆಚ್ಚಿನ ಅವಧಿ ಸಿಗುವುದು ಕಷ್ಟ ಸಾಧ್ಯ.
ಸದಸ್ಯರು ಬದಲಾಗ್ತಾರಾ? : ಟೂಡಾ ಅಧ್ಯಕ್ಷ ನೇಮಕ ಬಳಿಕ ಸಮಿತಿಗೆ ಜೆ.ಜಗದೀಶ್, ಎಂ.ಎನ್.ವೀಣಾ, ಟಿ.ಎಲ್.ಪ್ರತಾಪ್ ಕುಮಾರ್,ಡಿ.ಶಿವಕುಮಾರ್ ಹಾಗೂ ಹನುಮಂತಪ್ಪ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ಈಗ ಅಧ್ಯಕ್ಷರನ್ನು ಬದಲಾವಣೆ ಮಾಡಿದರೆ ಸಮಿತಿಗೆ ಹೊಸ ಸದಸ್ಯರನ್ನು ನೇಮಿಸುವ ಸಾಧ್ಯತೆ ಇದ್ದು ಇನ್ನಷ್ಟು ಕಾರ್ಯಕರ್ತರಿಗೆ ಅಧಿಕಾರ ಭಾಗ್ಯ ಒಲಿದುಬರಲಿದೆ.