ಭತ್ತದ ಬೆಳೆಗೆ ಕೊಳವೆ ರೋಗ, 9 ಎಕರೆ ಫಸಲು ನಾಶಪಡಿಸಿದ ಯರಡೋಣ ರೈತ

Tuberculosis of paddy crop
ಕೊಳವೆ ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾರಟಗಿ ತಾಲೂಕಿನ ಯರಡೋಣದ ರೈತ ಭತ್ತದ ಬೆಳೆ ನಾಶಪಡಿಸುತ್ತಿರುವುದು.
Published on

ಕಾರಟಗಿ: ಭತ್ತದ ಬೆಳೆಗೆ ಕೊಳವೆ ರೋಗದ ಕಾಟ ಹೆಚ್ಚಾಗಿದ್ದು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮನನೊಂದು ತಾಲೂಕಿನ ಯರಡೋಣ ಗ್ರಾಮದ ರೈತ 9 ಎಕರೆ ಬೆಳೆ ನಾಶಪಡಿಸಿದ್ದಾರೆ.

ಈಗಾಗಲೇ ತಾಲೂಕಿನಲ್ಲಿ ಗಾಳಿ, ಮಳೆ ಹೊಡೆತಕ್ಕೆ ಭತ್ತದ ಬೆಳೆ ನೆಲಕಚ್ಚಿದೆ. ಸಿದ್ದಾಪುರ ಹಾಗೂ ಕಾರಟಗಿ ಹೋಬಳಿ ವ್ಯಾಪ್ತಿಯಲ್ಲಿ 2 ಸಾವಿರ ಹೆಕ್ಟೇರ್‌ಗೂ ಅಧಿಕ ಬೆಳೆ ಹಾನಿಗೊಳಗಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸರ್ವೇ ಕಾರ್ಯ ನಡೆಸಿದ್ದಾರೆ. ಇದರ ಮಧ್ಯೆಯೇ ಈಗ ಬೆಳೆಗಳಿಗೆ ಕೊಳವೆ, ಎಲೆ ಚುಕ್ಕೆ ರೋಗ ಕಾಣಿಸಿಕೊಂಡು ರೈತರನ್ನು ಚಿಂತೆಗೀಡು ಮಾಡಿವೆ.

ಕೆಲ ದಿನಗಳಿಂದ ಮೊಡ ಕವಿದ ವಾತಾವರಣವಿದ್ದು, ಏಕಾಏಕಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಿದೆ. ಕ್ರಿಮಿನಾಶಕ, ರಸಗೊಬ್ಬರ ಸಿಂಪಡಿಸಿದರೂ ರೋಗ ಹತೋಟಿಗೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಾರಟಗಿ ಗ್ರಾಮದ ರೈತ ಬರೋಬ್ಬರಿ 9 ಎಕರೆ ಬೆಳೆನ್ನು ನಾಶ ಮಾಡಿದ್ದಾರೆ.

ಗ್ರಾಮದ ಆರಾಧ್ಯದೈವ ಮುರುಡ ಬಸವೇಶ್ವರ ದೇವಸ್ಥಾನದ ಜಮೀನನ್ನು ಗುತ್ತಿಗೆ ಪಡೆದು ಬೆಳೆ ಬೆಳೆದಿದ್ದ ರೈತ, ಪ್ರತಿ ಎಕರೆಗೆ ಬೆಳೆ ನಿರ್ವಹಣೆ, ಕ್ರಿಮಿನಾಶಕ ಖರೀದಿಗೆ ಸಾವಿರಾರು ರೂ. ವ್ಯಯಿಸಿದ್ದಾರೆ. ಇದೀಗ ಬೆಳೆ ರೋಗಕ್ಕೆ ತುತ್ತಾದ್ದರಿಂದ ನಾಶಪಡಿಸಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಇದೇರೀತಿ ಈಳಿಗನೂರು, ಬೂದಗುಂಪಾ, ತಿಮ್ಮಾಪುರ ಸೇರಿ ಇತರೆಡೆ 200 ಎಕರೆಗೂ ಹೆಚ್ಚಿನ ಬೆಳೆ ಕೊಳವೆ ರೋಗಕ್ಕೆ ತುತ್ತಾಗಿದೆ. ಸರ್ಕಾರ ಶೀಘ್ರವೇ ನೆರವಿಗೆ ಧಾವಿಸಬೇಕು ಎನ್ನುವುದು ಅನ್ನದಾತರ ಆಗ್ರಹವಾಗಿದೆ.

ಗುತ್ತಿಗೆ ಪಡೆದು 9 ಎಕರೆ ಜಮೀನಿನಲ್ಲಿ ಭತ್ತದ ಬೆಳೆ ಬೆಳೆಯಲಾಗಿತ್ತು. ಆದರೆ, ಬೆಳೆಗೆ ಕಾಣಿಸಿಕೊಂಡ ಕೊಳವೆ ರೋಗ, ಕ್ರಿಮಿನಾಶಕ ಹಾಗೂ ರಸಗೊಬ್ಬರ ಸಿಂಪಡಿಸಿದರೂ ಹತೋಟಿಗೆ ಬರಲಿಲ್ಲ. ಹೀಗಾಗಿ 9 ಎಕರೆ ಬೆಳೆ ಟ್ರಾೃಕ್ಟರ್‌ನಿಂದ ನಾಶಪಡಿಸಿದ್ದೇನೆ. ಇದರಿಂದ ಲಕ್ಷಾಂತರ ರೂ. ನಷ್ಟವಾಗಿದೆ. ರೈತಾಪಿ ವರ್ಗ ಸಂಕಷ್ಟದಲ್ಲಿದ್ದು, ಸರ್ಕಾರ ನೆರವಿಗೆ ಧಾವಿಸಬೇಕಿದೆ.

ಶರಣಪ್ಪ ಸುಗ್ಗೆನಹಳ್ಳಿ

ಬೆಳೆ ನಾಶ ಮಾಡಿದ ರೈತ, ಯರಡೋಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net