

ಅರಕೇರಾ: ಕ್ಷಯರೋಗ ಸೋಂಕಿತರು ವೈದ್ಯರು ನೀಡುವ ಔಷಧ, ಪೌಷ್ಟಿಕ ಆಹಾರ ಸೇವಿಸುವುದರ ಜತೆಗೆ ಮಾನಸಿಕವಾಗಿ ಧೈರ್ಯವಾಗಿದ್ದರೆ ಬಹುಬೇಗ ಗುಣಮುಖರಾಗಬಹುದು ಎಂದು ಆಡಳಿತ ವೈದ್ಯಾಧಿಕಾರಿ ಮಹಾದೇವ ಹೊಸಮನಿ ಹೇಳಿದರು.
ರಾಮದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ, ಕ್ಷಯರೋಗ ನಿರ್ಮೂಲನೆ ವಿಭಾಗದಿಂದ ಆಯೋಜಿಸಿದ್ದ 100 ದಿನಗಳ ಟಿಬಿ ಪತ್ತೆ ಅಭಿಯಾನ ಹಾಗೂ ಆರೋಗ್ಯ ತಪಾಸಣೆ ಶಿಬಿರದಲ್ಲಿ ಶನಿವಾರ ಮಾತನಾಡಿದರು.
ಕ್ಷಯ ಸೋಂಕಿತರು ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯಬೇಕು. ನಿಗದಿತ ಅವಧಿವರೆಗೆ ಔಷಧ ಸೇವಿಸಿದರೆ ಕಾಯಿಲೆ ಮುಕ್ತರಾಗಬಹುದು. ಒಂದು ವೇಳೆ ರೋಗಿ ಕಾರಣಾಂತರಗಳಿಂದ ಚಿಕಿತ್ಸೆ ಸ್ಥಗಿತಗೊಳಿಸಿದರೆ ಅಪಾಯ ತಪ್ಪಿದ್ದಲ್ಲ ಎಂದು ತಿಳಿಸಿದರು.
ಶಿಬಿರದಲ್ಲಿ ವೃದ್ಧರು, ಮಧುಮೇಹಿಗಳು, ಧೂಮಪಾನಿಗಳು, ಅಪೌಷ್ಟಿಕ ಮಕ್ಕಳು, ಕಾರ್ಮಿಕರು, ಅತಿ ಕಡಿಮೆ ತೂಕದ ಯುವಕ-ಯುವತಿಯರು, ಕ್ಷಯರೋಗಿಗಳ ಸಂಪರ್ಕ ಹೊಂದಿದ ಜನರನ್ನು ಟಿಬಿ ತಪಾಸಣೆಗೆ ಒಳಪಡಿಸಲಾಯಿತು. ಕ್ಷಯ ಲಕ್ಷಣಗಳು ಇರುವ ರೋಗಿಗಳಿಗೆ ಕಫ ಪರೀಕ್ಷೆ ಮತ್ತು ಕ್ಷಯ ಲಕ್ಷಣಗಳು ಇಲ್ಲದ 82 ಜನರಿಗೆ ಎಕ್ಸರೇ ಪರೀಕ್ಷೆ ಮಾಡಲಾಯಿತು. ಅಲ್ಲದೆ ಫ್ಲೋರೊಸಿಸ್, ಮಾನಸಿಕ ಆರೋಗ್ಯ ತಪಾಸಣೆ, ಮಧುಮೇಹ, ರಕ್ತದೊತ್ತಡ, ಎಚ್‌ಐವಿ ಪರೀಕ್ಷೆ ಮಾಡಲಾಯಿತು.
ಜಿಲ್ಲಾ ಮಾನಸಿಕ ರೋಗ ತಜ್ಞ ಡಾ.ಮನೋಹರ ಪತ್ತಾರ, ಮೂಳೆ ತಜ್ಞ ಡಾ.ಮಹೇಂದ್ರಕುಮಾರ, ಫ್ಲೋರೊಸಿಸ್ ಜಿಲ್ಲಾ ಸಂಯೋಜಕ ಗುರುಪ್ರಸಾದ, ಅರುಣ ಕುಲಕರ್ಣಿ, ತಾಲೂಕು ಕ್ಷಯ ಮೇಲ್ವಿಚಾರಕರಾದ ಭೀಮೇಶ ನಾಯಕ, ರವಿ ಶುಕ್ಲಾ, ಮಹೇಶ ನಾಯಕ, ಜಾಫರ್, ಪ್ರಶಾಂತ, ಬಸವ, ಸುನಂದಾ, ರಂಗಮ್ಮ ಇತರರಿದ್ದರು.