ಮೈಸೂರು ಜೆಎಸ್‌ಎಸ್ ಕಾಲೇಜು ವಿದ್ಯಾರ್ಥಿಗಳಿಂದ ಕ್ಷಯ ರೋಗ ಜಾಗೃತಿ ಜಾಥಾ

Tuberculosis awareness rally by students of Mysore JSS College
Published on

ಮೈಸೂರು: ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಕಾಲೇಜಿನ ಸೂಕ್ಷ್ಮಶಾಸ್ತ್ರ, ಜೈವಿಕತಂತ್ರಜ್ಞಾನ ವಿಭಾಗ, ಎನ್‌ಎಸ್‌ಎಸ್, ಎನ್‌ಸಿಸಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ‘ಕ್ಷಯರೋಗ ಮುಕ್ತ ಭಾರತ’ ಘೋಷಣೆಯೊಂದಿಗೆ ಶನಿವಾರ ಕ್ಷಯರೋಗ ಜಾಗೃತಿ ಜಾಥಾ ನಡೆಯಿತು.

ಕಾಲೇಜಿನ ಮುಖ್ಯಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಜಾಥಾಗೆ ಚಾಲನೆ ನೀಡಿ ಮಾತನಾಡಿ, ಕ್ಷಯರೋಗವನ್ನು ನಿರ್ಲಕ್ಷ್ಯ ಮಾಡಬಾರದು. ಎದೆನೋವು, ಸುಸ್ತು, ಹಸಿವಾಗದಿರುವುದು, ಹದಿನೈದಕ್ಕಿಂತ ಹೆಚ್ಚು ದಿನ ವಾಸಿಯಾಗದ ಕೆಮ್ಮು ಮತ್ತು ಜ್ವರ, ಸಂಜೆಯಾಗುತ್ತಲೇ ಮೈ ಬಿಸಿ, ದಿನದಿಂದ ದಿನಕ್ಕೆ ಜ್ವರ ಹೆಚ್ಚಾಗುವುದು, ತೂಕ ಕಡಿಮೆಯಾಗುವುದು, ಹಸಿವಾಗದಿರುವುದು, ರಾತ್ರಿವೇಳೆ ಬೆವರುವುದು, ಕಫದ ಜತೆಗೆ ರಕ್ತ ಬರುವುದು ಕ್ಷಯರೋಗದ ಸಾಮಾನ್ಯ ಲಕ್ಷಣಗಳಾಗಿವೆ ಎಂದರು.

ಕ್ಷಯರೋಗ ತಡೆಗಟ್ಟಲು ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರದಿಂದ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಬೇಕು, ಸೋಪಿನಿಂದ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು, ಎಲ್ಲೆಂದರಲ್ಲಿ ಕಫವನ್ನು ಉಗುಳಬಾರದು. ಗಾಳಿ, ಬೆಳಕು ಸರಾಗವಾಗಿ ಬರುವಂತೆ ಮಾಡಲು ಮನೆಗಳ ಕಿಟಕಿ ಬಾಗಿಲುಗಳನ್ನು ತೆರೆದಿಡಬೇಕು. ವೈದ್ಯರು ಸೂಚಿಸಿದ ಔಷಧಗಳನ್ನು ಸರಿಯಾದ ಪ್ರಮಾಣದಲ್ಲಿ ಸೂಕ್ತ ಅವಧಿಗೆ ತೆಗೆದುಕೊಂಡಲ್ಲಿ ಟಿಬಿಯನ್ನು ಗುಣಪಡಿಸಬಹುದು. ಇದರ ಬಗ್ಗೆ ಅರಿವು ಮೂಡಿಸಲು ನಮ್ಮ ಕಾಲೇಜು ಈ ಜಾಥಾವನ್ನು ಹಮ್ಮಿಕೊಂಡಿದೆ ಎಂದರು.

ಜಾಥಾವು ಕಾಲೇಜಿನಿಂದ ಪ್ರಾರಂಭಗೊಂಡು ಸೈಂಟ್ ಮೇರಿಸ್ ವೃತ್ತ, ಚಾಮುಂಡಿ ವೃತ್ತ, ಸಿರಿ ಕಲ್ಚರ್ ವೃತ್ತ, ನಂಜುವಳಿಗೆ ವೃತ್ತ ಆ ಮೂಲಕ ಸಾಗಿ ಕಾಲೇಜು ಆವರಣದಲ್ಲಿ ಮುಕ್ತಾಯಗೊಂಡಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಎಂ. ಪ್ರಭು, ಕೆ.ಆರ್. ಪುರಂ ಪೋಲಿಸ್ ಠಾಣೆಯ ಎಎಸ್‌ಐ ರಾಮಶೆಟ್ಟಿ, ಸೂಕ್ಷ್ಮಜೀವಶಾಸ್ತ್ರ ಹಾಗೂ ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಎಂ. ಸೀಮ, ಪ್ರಾಧ್ಯಾಪಕಿ ಎಸ್. ಉಮಾ, ಎನ್‌ಸಿಸಿ ಅಧಿಕಾರಿ ಡಾ. ಎಲ್. ವಿನಯ್‌ಕುಮಾರ್, ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿ ನಿರಂಜನ್ ಮತ್ತು ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಎನ್. ಸಂತೋಷ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net