ಅಂಬೇಡ್ಕರ್ ಭವನ ಉದ್ಘಾಟನೆ ಯಾವಾಗ?: ತೂಬಗೆರೆಯಲ್ಲಿ ಪಾಳು ಬೀಳುತ್ತಿದೆ ಕಟ್ಟಡ

1
Published on

ತೂಬಗೆರೆ: ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಅಂಬೇಡ್ಕರ್ ಭವನಕ್ಕೆ ನಾಲ್ಕು ವರ್ಷದಿಂದ ಉದ್ಘಾಟನೆ ಭಾಗ್ಯ ದೊರೆತಿಲ್ಲ.
50 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿರುವ ಭವನ ಸಾರ್ವಜನಿಕರ ಬಳಕೆಗೆ ಇಲ್ಲದಂತಾಗಿದೆ.


2017ರಲ್ಲಿ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿತ್ತು. ಕಟ್ಟಡ ನಿರ್ಮಾಣ ಹೊಣೆ ಹೊತ್ತ ಜಿಲ್ಲಾ ನಿರ್ಮೀತಿ ಕೇಂದ್ರ, ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಬೀಗ ಹಾಕಿ ಹೋದವರು ಇಂದಿಗೂ ಇತ್ತ ಕಡೆ ತಲೆ ಹಾಕಿಲ್ಲ. ಜಿಲ್ಲೆಯಲ್ಲಿ ನಿರ್ಮಿತಿ ಕೇಂದ್ರದವರು ನಿರ್ಮಿಸಿದ ಬಹಳಷ್ಟು ಕಟ್ಟಡಗಳ ಪರಿಸ್ಥಿತಿ ಇದೇ ಆಗಿದೆ ಎಂಬುದು ಸಾರ್ವಜನಿಕರ ಆರೋಪ.


ಪಾಳು ಬೀಳುತ್ತಿದೆ: ನೂತನ ಕಟ್ಟಡ ಉದ್ಘಾಟನೆಯಿಲ್ಲದೆ ಪಾಳು ಬಿದ್ದಿದೆ. ಕಟ್ಟಡದ ಸುತ್ತಮುತ್ತ ಗಿಡ-ಗಂಟಿಗಳು ಬೆಳೆದು ಸರಿಸೃಪಗಳ ಆವಾಸ ಸ್ಥಾನವಾಗಿದೆ. ಸಂಜೆಯಾಗುತ್ತಲೇ ಮದ್ಯವ್ಯಸನಿಗಳು ಈ ಜಾಗವನ್ನು ಅಡ್ಡೆಯಾಗಿ ಬಳಸಿಕೊಳ್ಳುತ್ತಿದ್ದಾರೆ. ಅಕ್ರಮ ಚಟುವಟಿಕೆಗಳಿಗೆ ಈ ಜಾಗ ಬಳಕೆಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಜನಪ್ರತಿನಿಧಿಗಳ ಗಮನಿಸಬೇಕು: ತೂಬಗೆರೆ ಹೊಸ ಬಡಾವಣೆ ಪಕ್ಕದಲ್ಲಿ ಭವನ ನಿರ್ಮಾಣವಾಗಿದೆ. ಈ ಕಟ್ಟಡ ಸೇರಿ ನಮ್ಮೂರಿನ ಅನೇಕ ಸರ್ಕಾರಿ ಕಟ್ಟಡಗಳಿಗೆ ಉದ್ಘಾಟನೆ ಭಾಗ್ಯ ದೊರೆತಿಲ್ಲ. ಕಟ್ಟಡದ ಸುತ್ತ ಗಿಡ-ಗಂಟಿಗಳು ಬೆಳೆದಿವೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಸುಳಿಯುವುದೇ ಇಲ್ಲ. ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಆದಷ್ಟು ಬೇಗ ಕಟ್ಟಡದ ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಭವನ ಉದ್ಘಾಟನೆಗೆ ಯಾವ ಸಮಸ್ಯೆ ಇದೆ ಎಂಬುದರ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು, ಅಧಿಕಾರಿಗಳ ನಿರ್ಲಕ್ಷ್ಯವಾಗಿದ್ದರೆ, ಹಿರಿಯ ಅಧಿಕಾರಿಗಳ ಗಮನ ಸೆಳೆದು ಉದ್ಘಾಟನೆಗೆ ಕ್ರಮಕೈಗೊಳ್ಳಲಾಗುವುದು.
| ನಿಸರ್ಗ ನಾರಾಯಣಸ್ವಾಮಿ ಶಾಸಕ

ಸರ್ಕಾರಿ ಕಟ್ಟಡಗಳು ಅಧಿಕಾರಿಗಳ ಬೇಜವಾಬ್ದಾರಿಯಿಂದ ಉದ್ಘಾಟನೆ ಆಗುತ್ತಿಲ್ಲ, ನಾಲ್ಕು ವರ್ಷ ಕಳೆದರೂ ಅಂಬೇಡ್ಕರ್ ಭವನಕ್ಕೆ ಮುಕ್ತಿ ಸಿಕ್ಕಿಲ್ಲ. ಜನರ ತೆರಿಗೆ ಹಣವನ್ನು ಹೇಗೆಲ್ಲ ಹಾಳು ಮಾಡಬಹುದು ಎಂಬುದಕ್ಕೆ ಇಲ್ಲಿನ ಅಧಿಕಾರಿಗಳ ಕಾರ್ಯವೈಖರಿ ನೋಡಿ ತಿಳಿಯಬೇಕು. ಇಂಥ ಪ್ರಕರಣಗಳು ಈ ಭಾಗದಲ್ಲಿ ಸಾಮಾನ್ಯವಾಗಿವೆ.

| ಮುನಿರಾಜು ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net