

ವಿಜಯವಾಣಿ ಸುದ್ದಿಜಾಲ ತೂಬಗೆರೆ
ಉತ್ತಮ ಗುಣಮಟ್ಟ ಮತ್ತು ಅಧಿಕ ಇಳುವರಿಗಾಗಿ ಟೊಮ್ಯಾಟೊ ಬೆಳೆಗೆ ವಿವಿಧ ಹಂತಗಳಲ್ಲಿ ಸರಿಯಾದ ಪ್ರಮಾಣದಲ್ಲಿ ಔಷಧ, ಜೈವಿಕ ಗೊಬ್ಬರ ಹಾಗೂ ಲಘು ಪೋಷಕಾಂಶ ನೀಡಬೇಕು ಎಂದು ಕೃಷಿ ವಿಜ್ಞಾನಿ ಡಾ.ರಾಮೇಗೌಡ ಹೇಳಿದರು.
ಹೋಬಳಿಯ ದೊಡ್ಡರಾಯಪ್ಪನಹಳ್ಳಿಯಲ್ಲಿ ಭಾರತ ಕೃಷಿ ಅನುಸಂಧಾನ ಪರಿಷತ್, ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಿಂದ ಟೊಮ್ಯಾಟೊ ಬೆಳೆಯಲ್ಲಿ ಕ್ಷೇತ್ರ ಪರಿಶೀಲನೆ ಮತ್ತು ಸೇವಂತಿಗೆ ಬೆಳೆಯಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಟೊಮ್ಯಾಟೊ ಬೆಳೆಯ ಬೆಳವಣಿಗೆ ಮತ್ತು ಇಳುವರಿಯನ್ನು ಉತ್ತೇಜಿಸುವ ಸಸ್ಯ ಪ್ರಚೋದಕಗಳ ಕ್ಷೇತ್ರ ಪರಿಶೀಲನೆ ಕೈಗೊಂಡಿದ್ದೇವೆ. ಅದರಂತೆ ರೈತರು ಬೆಳೆಯ ಇಳುವರಿ ಮತ್ತು ರೋಗ ಲಕ್ಷಣ ಕುರಿತಂತೆ ಮಾಹಿತಿ ನೀಡಿದರೆ ಸೂಕ್ತ ಔಷಧೋಪಚಾರಕ್ಕೆ ಅನುಕೂಲವಾಗುತ್ತದೆ. ಜೈವಿಕ ಗೊಬ್ಬರ ಬಳಕೆಯಿಂದ ಟೊಮ್ಯಾಟೊ ಬೆಳೆಯಲ್ಲಿ ಉತ್ತಮ ಗುಣಮಟ್ಟದ ಹಣ್ಣುಗಳು ಮತ್ತು ಅಧಿಕ ಇಳುವರಿಯನ್ನು ಪಡೆಯಬಹುದು ಎಂದು ತಿಳಿಸಿಕೊಟ್ಟರು.
ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ.ಜಿ.ಎಂ.ದರ್ಶಿನಿ ಅವರು, ಸೇವಂತಿಗೆಯಲ್ಲಿ ಕೀಟ ಮತ್ತು ರೋಗಗಳ ಸಮಗ್ರ ನಿರ್ವಹಣೆ ಕುರಿತು ರೈತರಿಗೆ ಮಾಹಿತಿ ನೀಡಿದರು. ಸೇವಂತಿಗೆಯಲ್ಲಿ ಪ್ರಮುಖವಾಗಿ ಕಂಡುಬರುವ ರಸ ಹೀರುವ ಕೀಟಗಳ ಹತೋಟಿಯಲ್ಲಿ ಹಳದಿ ಮತ್ತು ನೀಲಿ ಅಂಟು ಬಲೆಗಳ ಬಳಕೆ ಮತ್ತು ಅಗತ್ಯಕ್ಕನುಸಾರವಾಗಿ ಕೀಟ ಮತ್ತು ರೋಗ ನಾಶಕಗಳ ಸಿಂಪಡಣೆಯಿಂದ ಪರಿಣಾಮಕಾರಿಯಾಗಿ ಸಸ್ಯ ಸಂರಕ್ಷಣೆ ಮಾಡಬಹುದು ಎಂದರು