ಬಾಯಾರಿದ ತೂಬಗೆರೆ ಕೆರೆ ಒಡಲು

Tubagere lake is never full.
Tubagere lake
Published on

ಎಲ್ಲ ಕೆರೆಗಳು ತುಂಬಿದರೂ ಈ ಕೆರೆ ತುಂಬಿಲ್ಲ

ಜಾಲಿ ಮರಗಳ ತೆರವಿಗೆ ಮೀನಮೇಷ

ವಿಜಯವಾಣಿ ಸುದ್ದಿಜಾಲ ತೂಬಗೆರೆ
ಕಳೆದೆರಡು ವರ್ಷ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಕೆರೆಗಳು ತುಂಬಿ ಕೋಡಿ ಹರಿದವಾದರೂ ತೂಬಗೆರೆಯ ಕೆರೆ ತುಂಬಲೇ ಇಲ್ಲ. ಅಷ್ಟೇ ಅಲ್ಲ, ಎಂಥ ದೊಡ್ಡ ಮಳೆ ಬಿದ್ದರೂ ಕೆರೆ ಒಡಲು ಬಾಯಾರುತ್ತಲೇ ಇರುತ್ತದೆ.
ಕೃಷಿ ಚಟುವಟಿಕೆಗಳಿಗೆ ಪೂರಕವಾಗಿರುವ ಕೆರೆಯ ಅಭಿವೃದ್ಧಿಯನ್ನು ದಶಕಗಳಿಂದಲೂ ಕಡೆಗಣಿಸುತ್ತ ಬರುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ. ಕೆರೆಯಲ್ಲಿ ಹೂಳು ತೆಗೆಯುವ ಪ್ರಹಸನ ನಡೆದುಕೊಂಡೇ ಬರುತ್ತಿದ್ದರೂ ಯಾವುದೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಇದರಿಂದಾಗಿ ಎಷ್ಟೇ ಮಳೆ ನೀರು ಕೆರೆಗೆ ಹರಿದುಬಂದರೂ ನೀರು ಶೇಖರಿಸಿಟ್ಟುಕೊಳ್ಳುವ ಸಾಮರ್ಥ್ಯವಿಲ್ಲದೆ ಕೆರೆ ಸೊರಗುವಂತಾಗಿದೆ.

ಸುಳಿಯದ ಅರಣ್ಯ ಇಲಾಖೆ:ಕೆರೆ ಆವರಿಸಿರುವ ಜಾಲಿಮರಗಳಿಂದ ಕೆರೆ ನೀರು ಶೇಖರಣೆ ಸಾಮರ್ಥ್ಯ ಕಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಜಾಲಿಮರಗಳನ್ನು ತೆರವುಗೊಳಿಸಿ, ಗಿಡ-ಗಂಟಿಗಳನ್ನು ಸ್ವಚ್ಛಗೊಳಿಸುವಂತೆ ಗ್ರಾಮಸ್ಥರು ದಶಕಗಳಿಂದ ಮೊರೆ ಇಡುತ್ತಲೇ ಇದ್ದಾರೆ. ಆದರೆ ಯಾವುದೂ ಕಾರ್ಯಗತವಾಗಿಲ್ಲ. ವರ್ಷದ ಹಿಂದೆ ಮರಗಳನ್ನು ತೆರವುಗೊಳಿಸುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮರಗಳಿಗೆ ನಂಬರ್ ಬರೆದು ಗುರುತು ಹಾಕಿದ್ದರು. ಆದರೆ ಇದುವರೆಗೆ ಇತ್ತ ಕಡೆ ಅಧಿಕಾರಿಗಳು ಸುಳಿದೇ ಇಲ್ಲ.

ಜಾಲಿ ಮರ ತೆರವಿಗೆ ಹಗ್ಗಜಗ್ಗಾಟ: ಜಾಲಿ ಮರ ತೆರವುಗೊಳಿಸುವ ಸಂಬಂಧ ಅರಣ್ಯ ಇಲಾಖೆ ಹಾಗೂ ಪಂಚಾಯಿತಿ ನಡುವೆ ಹಗ್ಗಜಗ್ಗಾಟ ನಡೆಯುತ್ತಲೇ ಇದೆ. ಮರಗಳ ತೆರವಿಗೆ ಪಂಚಾಯಿತಿ ವತಿಯಿಂದ ಕೆಲವೊಂದು ದಾಖಲೆ ನೀಡಬೇಕಿದೆ ಎಂದು ಅರಣ್ಯ ಇಲಾಖೆ ಸಬೂಬು ಹೇಳುತ್ತಿದೆ. ಅರಣ್ಯ ಇಲಾಖೆ ಕೇಳಿದ ಎಲ್ಲ ದಾಖಲೆಗಳನ್ನು ನೀಡಿದ್ದೇವೆ, ಆದರೂ ಅವರು ಮರಗಳ ತೆರವಿಗೆ ಮೀನಮೇಷ ಎಣಿಸುತ್ತಿದ್ದಾರೆ ಎಂಬುದು ಪಂಚಾಯಿತಿ ಆರೋಪ. ಇವರಿಬ್ಬರ ತಿಕ್ಕಾಟದಲ್ಲಿ ಕೆರೆ ಅಭಿವೃದ್ಧಿ ಗ್ರಾಮಸ್ಥರ ಪಾಲಿಗೆ ಮರೀಚಿಕೆಯಾಗಿಯೇ ಉಳಿದಿದೆ.


ನಾನು ಅಧ್ಯಕ್ಷನಾಗಿದ್ದ ವೇಳೆ ಕೆರೆಯಲ್ಲಿರುವ ಎಲ್ಲ ಮರಗಳನ್ನು ತೆರವುಗೊಳಿಸುವ ಸಂಬಂಧ ಅರಣ್ಯ ಇಲಾಖೆಗೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ನೀಡಲಾಗಿದೆ. ಆದರೆ ಇದುವರೆಗೆ ಯಾವುದೂ ಕಾರ್ಯಗತವಾಗಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಕರ್ತವ್ಯದ ಕಡೆ ಗಮನನೀಡಬೇಕಿದೆ.

ಸುರೇಶ್‌ಬಾಬು, ಮಾಜಿ ಅಧ್ಯಕ್ಷ ತೂಬಗೆರೆ ಪಂಚಾಯಿತಿ

ವರ್ಷದ ಹಿಂದೆ ಅರಣ್ಯ ಇಲಾಖೆ ಕೇಳಿದ ಎಲ್ಲ ದಾಖಲೆಗಳನ್ನು ಸಲ್ಲಿಸಲಾಗಿದೆ. ಆದರೂ ಮತ್ತೊಂದು ಬಾರಿ ದಾಖಲೆ ನೀಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದು ಬಾರಿಯೂ ದಾಖಲೆ ನೀಡಲಾಗುವುದು. ತಕ್ಷಣ ಮರಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಲಾಗುವುದು.
ವೆಂಕಟೇಶ್, ಪಿಡಿಒ ತೂಬಗೆರೆ ಪಂಚಾಯಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net