

ವಿಜಯವಾಣಿ ಸುದ್ದಿಜಾಲ ತೂಬಗೆರೆ
ಎಲ್ಲ ಭಾಗ್ಯಕ್ಕಿಂತ ಆರೋಗ್ಯ ಭಾಗ್ಯ ಅಮೂಲ್ಯವಾಗಿದ್ದು, ನಿಗದಿತವಾಗಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ರೋಗಮುಕ್ತ ಜೀವನ ನಡೆಸಬೇಕು ಎಂದು ತೂಬಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಪೂರ್ಣಿಮಾ ಹೇಳಿದರು.
ತೂಬಗೆರೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೆಂಗಳೂರು ಈಸ್ಟ್ ಪಾಯಿಂಟ್ ಆಸ್ಪತ್ರೆಯಿಂದ ಹಮ್ಮಿಕೊಂಡಿದ್ದ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಹಲವು ಕಾರಣಗಳಿಂದ ಮನುಷ್ಯ ಒಂದಲ್ಲ ಒಂದು ಕಾಯಿಲೆಗೆ ತುತ್ತಾಗುವುದು ಸಹಜವಾಗಿದೆ. ರೋಗ ಗುಣಪಡಿಸಲು ಹಳ್ಳಿಯ ಜನರು ದೊಡ್ಡ ದೊಡ್ಡ ಆಸ್ಪತ್ರೆಗೆ ಹೋಗಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಉಚಿತ ತಪಾಸಣಾ ಶಿಬಿರದ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಹಲವು ಕಾಯಿಲೆಗಳನ್ನು ಪ್ರಾರಂಭದಲ್ಲಿ ಪತ್ತೆ ಹಚ್ಚಿದರೆ, ಸುಲಭವಾಗಿ ಗುಣಪಡಿಸಬಹುದು. ಅಂತೆಯೇ, ಪಾಲಕರು ಮಕ್ಕಳ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ಪ್ರತಿ ಮಕ್ಕಳಿಗೂ ಕಣ್ಣಿನ ಪರಿಕ್ಷೆ ಮಾಡಿಸಿ, ನ್ಯೂನತೆ ಕಂಡು ಬರುವ ಮಕ್ಕಳಿಗೆ ಚಿಕಿತ್ಸೆ ಕೊಡಿಸಬೇಕು ಎಂದರು.
ಶಿಬಿರದಲ್ಲಿ ಹೃದಯ ರೋಗ, ಸಾಮಾನ್ಯ ತಪಾಸಣೆ, ಪ್ಲಾಸ್ಟಿಕ್ ಸರ್ಜರಿ, ನರರೋಗ ಶಸಚಿಕಿತ್ಸೆ, ಶಿಶು ತಪಾಸಣೆ, ಕಣ್ಣು ಮತ್ತು ಕಿವಿ, ಮೂಗು, ಗಂಟಲು ತಪಾಸಣೆ, ಸೀ ರೋಗ ಮತ್ತು ಪ್ರಸೂತಿ ತಪಾಸಣೆ, ಕೀಲು ಮತ್ತು ಮೂಳೆ ತಪಾಸಣೆ, ಮೂತ್ರಕೋಶ, ಮೂತ್ರಪಿಂಡ ತಪಾಸಣೆ ಮಾಡಲಾಯಿತು. 285 ಮಂದಿ ಸೌಲಭ್ಯ ಪಡೆದರು.