

ಶಿವು ತೂಬಗೆರೆ
ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಶಾಮೀಲಾದ ಕೆಲವು ಸ್ಥಳೀಯ ಜನಪ್ರತಿನಿಧಿಗಳ ಭ್ರಷ್ಟಾಚಾರಕ್ಕೆ ಕೈಗನ್ನಡಿಯಂತಿದ್ದ ತೂಬಗೆರೆಯ ಮೆಟ್ರಿಕ್‌ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಕಟ್ಟಡ ಕಡೆಗೂ ನೆಲಸಮಗೊಂಡಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಮತ್ತೊಮ್ಮೆ ಕೋಟ್ಯಂತರ ರೂ.ಅನುದಾನ ಮಂಜೂರಾಗಿದೆ. ಆದರೆ ಈ ಅನುದಾನಕ್ಕಾದರೂ ಭ್ರಷ್ಟಾಚಾರದ ಮಸಿ ಅಂಟಿಕೊಳ್ಳದಿರಲಿ ಎಂಬುದು ವಿದ್ಯಾರ್ಥಿಗಳ ಪ್ರಾರ್ಥನೆಯಾಗಿದೆ.
ತೂಬಗೆರೆಯಲ್ಲಿ ನಿರ್ಮಾಣವಾಗಿದ್ದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ಕಟ್ಟಡ ನಿರ್ಮಾಣಗೊಂಡ 17 ವರ್ಷಕ್ಕೆ ಶಿಥಿಲಗೊಂಡಿತ್ತು. ಕಟ್ಟಡದ ಗೋಡೆಗಳಲ್ಲಿ ಬಿರುಕು ಕಾಣಸಿಕೊಂಡು ಮಳೆಗಾಲದಲ್ಲಿ ಸೋರುವಂತಾಯಿತು. ಅಷ್ಟೇ ಅಲ್ಲದೆ ಕಟ್ಟಡದ ಒಂದು ಭಾಗ ಕುಸಿಯುವ ಸ್ಥಿತಿಗೆ ತಲುಪಿತ್ತು. ಕೇವಲ 17 ವರ್ಷಕ್ಕೆ ಕಟ್ಟಡ ಇಂಥ ದುಸ್ಥಿತಿಗೆ ಬರಲು ಇದರ ಹಿಂದೆ ನಡೆದಿರುವ ಭ್ರಷ್ಟಾಚಾರ ಎಷ್ಟಿರಬಹುದೆಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿತ್ತು.
ಹೊಸ ಕಟ್ಟಡಕ್ಕೆ 2 ಕೋಟಿ ರೂ.ಅನುದಾನ: ಶಿಥಿಲಗೊಂಡ ಕಟ್ಟಡ ಕುಸಿಯಬಹುದು ಎಂಬುದರ ಬಗ್ಗೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸರ್ಕಾರದ ಗಮನಕ್ಕೆ ತಂದಿತ್ತು. ಹಾಗೆಯೇ ಹೊಸ ಕಟ್ಟಡ ನಿರ್ಮಾಣ ಕುರಿತು ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಹಸಿರು ನಿಶಾನೆ ತೋರಿಸಿರುವ ಸರ್ಕಾರ ಹೊಸ ಕಟ್ಟಡ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ ಮಂಜೂರು ಮಾಡಿದೆ, ಮೊದಲ ಹಂತವಾಗಿ ಜಿಲ್ಲಾಡಳಿತಕ್ಕೆ 1 ಕೋಟಿ ರೂ. ಬಿಡುಗಡೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಶಿಥಿಲಗೊಂಡ ಕಟ್ಟಡ ನೆಲಸಮಗೊಳಿಸಿ, ಹೊಸ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ.
ದಾಖಲೆಗಳೇ ಇಲ್ಲ!: ತೂಬಗೆರೆಯಲ್ಲಿನ ದೇವರಾಜ ಅರಸು ಹಿಂದುಳಿದ ಕಲ್ಯಾಣ ಬಾಲಕರ ವಿದ್ಯಾರ್ಥಿನಿಲಯ ಕಟ್ಟಡ ಕಾಮಗಾರಿ ಬಗ್ಗೆ ಇಲಾಖೆಯಲ್ಲಿ ಸ್ಪಷ್ಟ ದಾಖಲೆಗಳೇ ಇಲ್ಲ ಎಂಬ ಮಾತು ಕೇಳಿಬರುತ್ತಿವೆ. ಯಾವ ವರ್ಷದಲ್ಲಿ ನಿರ್ಮಾಣವಾಯಿತು, ಗುತ್ತಿಗೆ ಪಡೆದವರು ಯಾರು, ಮೇಲುಸ್ತುವಾರಿ ಅಧಿಕಾರಿಗಳು ಯಾರು ಎಂಬುದರ ಬಗ್ಗೆ ದಾಖಲೆಗಳ ಹುಡುಕಾಟ ನಡೆದಿದೆ.
ಕೈ, ಬಾಯಿ ಹಾಕದಿದ್ದರೆ ಸಾಕು: ಈಗಾಗಲೇ ಕೋಟ್ಯಂತರ ರೂ.ವೆಚ್ಚದ ಕಟ್ಟಡ ನೆಲಸಮಗೊಂಡಿರುವುದು ಕಣ್ಣಮುಂದೆಯೇ ಇದೆ. ಈಗ ಮತ್ತೊಮ್ಮೆ ಅದೇ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಈ ಅನುದಾನಕ್ಕೆ ಯಾರೂ ಕೈ, ಬಾಯಿ ಹಾಕದಿದ್ದರೆ ಗುಣಮಟ್ಟದ ಕಾಮಗಾರಿ ನಡೆಯಲು ಸಾಧ್ಯವಾಗುತ್ತದೆ. ಇಲ್ಲವಾದರೆ ಈ ಕಟ್ಟಡಕ್ಕೂ ಹಿಂದಿನ ಕಟ್ಟಡದ ಪರಿಸ್ಥಿತಿಯೇ ಎದುರಾಗಲಿದೆ ಎಂದು ಸ್ಥಳೀಯರು ಭವಿಷ್ಯ ನುಡಿಯುತ್ತಿದ್ದಾರೆ.
ಮಣ್ಣು ಪರೀಕ್ಷೆ ಆಗಿರಲಿಲ್ಲವೇ?: ಈ ಹಿಂದೆ ಜೌಗು ಪ್ರದೇಶವಾಗಿದ್ದ ತಿಪ್ಪೆಗುಂಡಿ ಜಾಗದಲ್ಲಿ ಹಾಸ್ಟೆಲ್ ನಿರ್ಮಿಸಲಾಗಿತ್ತು ಎನ್ನಲಾಗಿದೆ. ಈ ಜಾಗ ಕಟ್ಟಡ ನಿರ್ಮಾಣಕ್ಕೆ ಯೋಗ್ಯವೇ, ಮಣ್ಣಿನ ಪರೀಕ್ಷೆ ಆಗಿದೆಯೇ, ಕಟ್ಟಡ ನಿರ್ಮಾಣಕ್ಕೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಅನುಸರಿಸಲಾಗಿದೆಯೇ ಎಂಬುದಕ್ಕೆ ಯಾವುದೇ ದಾಖಲೆ ಇಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಕಟ್ಟಡ ನಿರ್ಮಾಣಕ್ಕೂ ಮೊದಲು ಇವೆಲ್ಲ ಮಾನದಂಡ ಬಳಸುವರೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ವರದಿ ಪರಿಣಾಮ: ೆ.7ರಂದು ‘ಹಾಸ್ಟೆಲ್ ಮಕ್ಕಳಿಗೆ ಶಾಲೆಯಲ್ಲೇ ವಾಸ್ತವ್ಯ’! ಶೀರ್ಷಿಕೆಯಡಿ ವಿಜಯವಾಣಿ ವರದಿ ಮಾಡಿತ್ತು. ಶಿಥಿಲಗೊಂಡ ಕಟ್ಟಡದಿಂದ ಸ್ಥಳಾಂತರಗೊಂಡ ಮಕ್ಕಳು ಶಾಲೆಯ ಕಟ್ಟಡವೊಂದರಲ್ಲಿ ವಾಸ ಮಾಡುತ್ತಿರುವ ಬಗ್ಗೆ ಪ್ರಕಟವಾದ ವರದಿಗೆ ಸ್ಪಂದಿಸಿದ ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.
ಶಿಥಿಲಗೊಂಡಿರುವ ಕಟ್ಟಡ ಮಕ್ಕಳ ವಾಸ್ತವ್ಯಕ್ಕೆ ಯೋಗ್ಯವಲ್ಲ ಎಂಬ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಸ್ಥಳದ ಮಣ್ಣಿನ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ವೈಜ್ಞಾನಿಕವಾಗಿ ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು.
ಬಡ ಮಕ್ಕಳ ಶೈಕ್ಷಣಿಕ ಭವಿಷ್ಯ ರೂಪಿಸಲು ಸರ್ಕಾರ ರೂಪಿಸಿರುವ ಯೋಜನೆಗಳು ಹೇಗೆಲ್ಲಾ ಮಣ್ಣು ಪಾಲಾಗುತ್ತವೆ ಎಂಬುದಕ್ಕೆ ಇಲ್ಲಿ ನೆಲಸಮಗೊಳಿಸಲಾಗಿದ್ದ ಕಟ್ಟಡವೇ ಸಾಕ್ಷಿ, ಹೊಸ ಕಟ್ಟಡ ನಿರ್ಮಾಣದಲ್ಲಾದರೂ ಗುಣಮಟ್ಟ ಕಾಯ್ದುಕೊಂಡರೆ ಶೈಕ್ಷಣಿಕ ಭವಿಷ್ಯ ರೂಪಿಸಿಕೊಳ್ಳಲು ಬರುವ ವಿದ್ಯಾರ್ಥಿಗಳ ಬದುಕು ಹಸನಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟವರು ಬದ್ಧತೆ ತೋರಬೇಕಿದೆ.