ತೂಬಗೆರೆ ಕೆಂಪು ತೊಳೆ ಹಲಸಿನ ಘಮ

tubagere halasu
Published on

ಹೋಬಳಿಯ ಕಾಚಹಳ್ಳಿ ಗ್ರಾಮದ ಹಣ್ಣಿಗೆ ಡಿಮಾಂಡ್

ಖರೀದಿಗೆ ಮುಗಿಬಿದ್ದ ಗ್ರಾಹಕರು


ವಿಜಯವಾಣಿ ಸುದ್ದಿಜಾಲ ತೂಬಗೆರೆ
ತೂಬಗೆರೆಯ ಪ್ರಸಿದ್ಧ ಕೆಂಪುತೊಳೆಯ ಹಲಸಿನ ಹಣ್ಣಿನ ಘಮ ದೊಡ್ಡಬಳ್ಳಾಪುರದಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ. ಲಾಟುಗಟ್ಟಲೆ ಹಲಸಿನ ಹಣ್ಣು ಮಾರುಕಟ್ಟೆಗೆ ಬಂದಿದ್ದು, ಖರೀದಿಗೆ ಜನ ಮುಗಿಬೀಳುತ್ತಿರುವ ದೃಶ್ಯ ಕಂಡುಬರುತ್ತಿದೆ.
ಗ್ರಾಮಾಂತರ ಜಿಲ್ಲೆಯಲ್ಲಿನ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹಲಸಿಗೆ ಎಲ್ಲಿಲ್ಲದ ಬೇಡಿಕೆ ಇದೆ. ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿರುವ ತೂಬಗೆರೆಯ ಕೆಂಪುತೊಳೆಯ ಹಲಸಿಗೆ ಜನ ಬಾಯಿಚಪ್ಪರಿಸುತ್ತಾರೆ. ಪ್ರಸ್ತುತ ಹಲಸಿನ ಕಾಲವಾಗಿದ್ದು, ನೆರೆಯ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಭಾಗದ ಜನ ತೂಬಗೆರೆ ಹಲಸು ಕೊಳ್ಳಲು ದೊಡ್ಡಬಳ್ಳಾಪುರಕ್ಕೆ ಆಗಮಿಸುತ್ತಿದ್ದಾರೆ.
ತೂಬಗೆರೆಯಲ್ಲಿ ವಿಶೇಷ ಮರಗಳು: ತೂಬಗೆರೆ ಹೋಬಳಿಯಲ್ಲಿ ತೂಬಗೆರೆ ಗ್ರಾಮ ಸೇರಿ ಸುತ್ತ ಮುತ್ತಲಿನಲ್ಲಿ ಗ್ರಾಮಗಳಲ್ಲಿ ಈ ವಿಶೇಷ ಹಲಸಿನ ಮರಗಳಿವೆ ಅದರಲ್ಲೂ ‘ಕಾಚ್ಚಹಳ್ಳಿ ಗ್ರಾಮ’ದಲ್ಲಿನ ಕೆಂಪು ತೊಳೆಯ ಹಲಸಿನ ಹಣ್ಣು ಗಮನ ಸೆಳೆಯುತ್ತಿದೆ. ಮರದ ಬುಡದಿಂದಲೇ ಆರಂಭವಾಗಿ ಇಡೀ ಮರವನ್ನೇ ಆವರಿಸಿಕೊಂಡು ಬೆಳೆಯುವ ಹಲಸಿನ ಹಣ್ಣಿನ ಗೊಂಚಲನ್ನು ನೋಡುವುದೇ ಸೋಗಸು ಎಂಬಂತಿರುತ್ತದೆ. ಇಲ್ಲಿನ ಮರಗಳಲ್ಲಿ ಹಳದಿ ಬಣ್ಣದ ತೊಳೆಯ ಹಲಸು, ಕೆಂಪು ಬಣ್ಣದ ಹಲಸು, ಹೆಬ್ಬಲಸು ಸೇರಿ ವಿಧದ ಬಣ್ಣ ರುಚಿಯ ಹಲಸಿನ ಹಣ್ಣುಗಳು ಕಂಡುಬರುವುದು ಇಲ್ಲಿನ ವಿಶೇಷ.
ಹೊರಜಿಲ್ಲೆಗಳಿಗೆ ರಪ್ತು: ನೆರೆಯ ಆಂಧ್ರ ಸೇರಿ ಮಂಗಳೂರು, ಕೋಲಾರ, ಮೈಸೂರು, ಬೆಂಗಳೂರು ಭಾಗಗಳಿಗೆ ಅತಿ ಹೆಚ್ಚಾಗಿ ಇಲ್ಲಿನ ಹಲಸಿನ ಹಣ್ಣು ರಪ್ತಾಗುತ್ತದೆ. ಪ್ರತಿವರ್ಷ ಈ ಕಾಲದಲ್ಲಿ ಸಾವಿರಾರು ಹಣ್ಣುಗಳು ಹೊರ ಭಾಗಗಳಿಗೆ ರ‌್ತಾಗುತ್ತವೆ. ವರ್ಷಕ್ಕೆ ಮೊದಲೇ ಮರಗಳ ಗುತ್ತಿಗೆಪಡೆದವರು ಈ ಕಾಲದಲ್ಲಿ ಬಂದು ಹಣ್ಣು ಕೀಳಿಸಿಕೊಂಡು ಸಾಗಿಸುವುದು ಸಾಮಾನ್ಯವಾಗಿದೆ.


ತೂಬಗೆರೆಯಲ್ಲಿ 30 ವರ್ಷದಿಂದ ಹಲಸಿನ ವ್ಯಾಪಾರ ಮಾಡುತ್ತಿದ್ದೇನೆ. ಈ ಹಿಂದೆ ಇದ್ದಂತಹ ಸಲು ಪ್ರಸ್ತುತ ದಿನಗಳಲ್ಲಿ ಕಂಡುಬರುತ್ತಿಲ್ಲ, ಆದರೂ ಪರವಾಗಿಲ್ಲ ಎಂಬುಷ್ಟರ ಮಟ್ಟಿಗೆ ಸಲು ದೊರೆಯುತ್ತಿದೆ. 6 ತಿಂಗಳ ಮುಂಚೆಯೆ ರೈತರಿಗೆ ಮುಂಗಡ ಹಣ ನೀಡಿ ಹಸಲಿನ ಹಣ್ಣುಗಳನ್ನು ಬುಕಿಂಗ್ ಮಾಡಿಕೊಂಡಿರುತ್ತೇವೆ. ಕೂಲಿ ದರ, ಸಾಗಾಣಿಕೆ ವೆಚ್ಚವನ್ನು ಸರಿದೂಗಿಸಿಕೊಂಡು ಹಣ್ಣುಗಳಿಗೆ ದರ ನಿಗಧಿಮಾಡುತ್ತೇವೆ.

ಅಶ್ವತ್ಥಪ್ಪ, ವ್ಯಾಪಾರಿ ದೊಡ್ಡಬಳ್ಳಾಪುರ

ರಾಜ್ಯದಲ್ಲೇ ಕಾಚಹಳ್ಳಿ ಹಲಸಿಗೆ ತುಂಬ ಬೇಡಿಕೆ ಇದೆ. 10 ರಾಜ್ಯದ ವಿವಿಧ ಜಿಲ್ಲೆಗಳಿಗೆ ಇಲ್ಲಿನ ಹಲಸನ್ನು ಸರಬರಾಜು ಮಾಡುವ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಎಲ್ಲ ಕಡೆಯಿಂದಲೂ ಗ್ರಾಹಕರಿಂದ ಬೇಡಿಕೆ ಇದೆ. ಹಣ್ಣನ್ನು ತಿನ್ನುವ ಜತೆಗೆ ಈ ಭಾಗದ ಹಣ್ಣುಗಳಿಂದ ತಯಾರಿಸುವ ಚಿಪ್ಸ್, ಪಾನೀಯ, ಜ್ಯಾಮ್ ಸೇರಿ ಹಲವು ವಸ್ತುಗಳಿಗೆ ಭಾರಿ ಬೇಡಿಕೆ ಇದೆ.

ಆಶೋಕ, ರಾಜ್ಯ ಹಲಸು ಬೆಳೆಗಾರರ ಸಂಘದ ಕಾರ್ಯದರ್ಶಿ

ತೂಬಗೆರೆ ಹಲಸಿಗೆ ವಿಶೇಷತೆ ಇದೆ, ಸಾಮಾನ್ಯವಾಗಿ ರಾಜ್ಯದ ಎಲ್ಲ ಕಡೆಗಳಿಗೂ ಇಲ್ಲಿಂದ ಹಲಸು ಸರಬರಾಜು ಆಗುತ್ತದೆ. ಪ್ರತಿ ವರ್ಷ ಏಪ್ರಿಲ್‌ನಿಂದ ಜೂನ್‌ವರೆಗೆ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ
ನಡೆಯುವ ಹಲಸು ಮತ್ತು ಮಾವಿನ ಮೇಳದಲ್ಲಿ ಈ ಭಾಗದ ಹಲಸು ಬೆಳೆಗಾರರು
ಭಾಗವಹಿಸಿ ಹಣ್ಣುಗಳ ಮಾರಾಟ ಮಾಡುತ್ತಾರೆ.
ಲೋಕೇಶ್ ಕಾಚಹಳ್ಳಿ ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net