ನುಡಿದಂತೆ ನಡೆದ ಕೈ ಸರ್ಕಾರ

congress meeting
Published on

ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಬಣ್ಣನೆ

ಬೂತ್‌ಮಟ್ಟದಲ್ಲಿ ಪಕ್ಷ ಸಂಘಟಿಸಲು ಸೂಚನೆ


ವಿಜಯವಾಣಿ ಸುದ್ದಿಜಾಲ ತೂಬಗೆರೆ
ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ. ಕೊಟ್ಟ ಮಾತಿನಂತೆ ಗ್ಯಾರಂಟಿಗಳನ್ನು ಜಾರಿಗೆ ತಂದಿದೆ ಎಂದು ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಹೇಳಿದರು.
ಹೋಬಳಿಯ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಅನ್ನಭಾಗ್ಯ, ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಶಕ್ತಿ ಯೋಜನೆ, ಗೃಹಲಕ್ಷ್ಮೀ ಯೋಜನೆ, ಗೃಹ ಜ್ಯೋತಿ ಯೋಜನೆ ಚಾಲನೆ ನೀಡಿದ್ದು, ಪದವೀಧರರಿಗೆ 2000 ರೂ. ನೀಡುವ ಭರವಸೆಯನ್ನು ಶೀಘ್ರವೇ ಈಡೇರಿಸಲಾಗುವುದು. ಈ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದರು.
ಆದರೆ,ಈ ಹಿಂದಿನ ಬಿಜೆಪಿ ಸರ್ಕಾರ ನುಡಿದಂತೆ ನಡೆಯದೆ ಜನರನ್ನು ವಂಚಿಸಿ, ಭ್ರಷ್ಟಾಚಾರದಲ್ಲಿ ತೊಡಗಿತ್ತು ಎಂದ ಅವರು, ಭ್ರಷ್ಟರನ್ನು ಶೀಘ್ರ ಜೈಲಿಗೆ ಅಟ್ಟಲಾಗುವುದು ಎಂದರು.
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರದ ಯೋಜನೆಗಳ ಬಗ್ಗೆ ಮನೆಮನೆ ಪ್ರಚಾರ ಮಾಡಬೇಕು. ನಾನೂ ಕೂಡ ಪ್ರತಿ ಬೂತ್‌ಮಟ್ಟದಲ್ಲಿ ಪಕ್ಷ ಸಂಘಟಿಸಲು ತೊಡಗಿಸಿಕೊಳ್ಳುತ್ತೇನೆ ಎಂದರು.

ಬಿಸ್ಲೇರಿಗಿಂತಲೂ ಎತ್ತಿನಹೊಳೆ ನೀರು ಉತ್ತಮ ಒಂದೂವರೆ ವರ್ಷದಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿ ಪೂರ್ಣಗೊಳಿಸಿ, ಈ ಭಾಗದ ಎಲ್ಲ ಗ್ರಾಮಗಳಿಗೂ ನೀರು ಪೂರೈಸಲಾಗುವುದು. ಬಿಸ್ಲೆರಿಗಿಂತಲೂ ಎತ್ತಿನಹೊಳೆ ನೀರು ಉತ್ತಮವಾಗಿರುತ್ತದೆ ಎಂದ ಮೊಯ್ಲಿ, ಯೋಜನೆ ಪೂರ್ಣಗೊಂಡರೆ ಈ ಭಾಗದಲ್ಲಿ 50 ಅಡಿ ಕೊಳವೆಬಾವಿ ಕೊರೆದರೂ ನೀರು ಸಿಗುವಂತಾಗುತ್ತದೆ ಎಂದರು

ಬಿಜೆಪಿಯಿಂದ ಸುಳ್ಳು ಪ್ರಚಾರ ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಲಾಗಿತ್ತು. ಬೆಂಗಳೂರಿಗೆ ಎಲೆಕ್ಟ್ರಾನಿಕ್ ಸಿಟಿ ಹೆಸರು, ಕೆಂಪೇಗೌಡ ಜಯಂತಿ ಆಚರಣೆಗೆ ಚಾಲನೆ, ಕೆಂಪೇಗೌಡ ವಿಮಾನ ನಿಲ್ದಾಣ ಅಭಿವೃದ್ಧಿಗೆ ನಮ್ಮ ಆಡಳಿತ ಅವಧಿಯಲ್ಲಿ ಸಾಕಷ್ಟು ಕೊಡುಗೆ ನೀಡಲಾಗಿದೆ ಎಂದ ವೀರಪ್ಪ ಮೊಯ್ಲಿ, ಕಾಂಗ್ರೆಸ್ ಅವಧಿಯಲ್ಲಿ ಆಗಿರುವ ಕೆಲಸಗಳನ್ನು ಬಿಜೆಪಿ ಸರ್ಕಾರ ಮಾಡಿದೆ ಎಂದು ಕಮಲ ಪಾಳಯದ ನಾಯಕರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net