ಮುಸ್ಲಿಮರೇ ಇಲ್ಲದ ಊರಲ್ಲಿ ಬಾಬಯ್ಯ ಹಬ್ಬದ ಸಂಭ್ರಮ

tubgere babaiah festival
Published on

ವಿಜಯವಾಣಿ ಸುದ್ದಿಜಾಲ ತೂಬಗೆರೆ
ಹೋಬಳಿಯ ತಿರುಮಗೊಂಡನಹಳ್ಳಿಯಲ್ಲ್ಲಿ ಹಿಂದುಗಳೇ ಬಾಬಯ್ಯನ (ಮೊಹರಂ) ಹಬ್ಬವನ್ನು ಅದ್ದೂರಿಯಾಗಿ ಆಚರಿಸಿ ಭಾವೈಕ್ಯತೆ ಮೆರೆದಿದ್ದಾರೆ. ಒಂದೂ ಮುಸ್ಲಿಂ ಕುಟುಂಬ ಇಲ್ಲದ ಈ ಗ್ರಾಮದಲ್ಲಿ ಮೂರ್ನಾಲ್ಕು ತಲೆಮಾರುಗಳಿಂದ ಗ್ರಾಮಸ್ಥರು ಗ್ರಾಮದ ಅಭ್ಯುದಯಕ್ಕಾಗಿ ಬಾಬಯ್ಯನ ಹಬ್ಬ ಆಚರಿಸಿಕೊಂಡು ಬಂದಿದ್ದಾರೆ.
ಮೊಹರಂ ತರುವಾಯ ಒಂಬತ್ತನೇ ದಿನ ಪಂಜಾಗಳನ್ನು ಪ್ರತಿಷ್ಠಾಪಿಸಿ, ಕೆಂಡ ಚೆಲ್ಲುವ ಆಚರಣೆ ಗ್ರಾಮಸ್ಥರ ಭಕ್ತಿ ಭಾವಕ್ಕೆ ಸಾಕ್ಷಿಯಾಯಿತು. ಹತ್ತನೇ ದಿನವಾದ ಭಾನುವಾರ ಇಡೀ ಗ್ರಾಮವೇ ಸಂಭ್ರಮದಲ್ಲಿ ಮುಳುಗಿತ್ತು. ಪಾಳೆಗಾರ, ವಧು ವರ ಸೇರಿ ವಿವಿಧ ವೇಷಧಾರಿಗಳು ಗ್ರಾಮದ ಪ್ರಮುಖ ಬೀದಿಯಲ್ಲಿ ನೃತ್ಯ ಪ್ರದರ್ಶನ ನೀಡಿದರು.
ಗ್ರಾಮದ ಮುಖಂಡ ನಂಜೇಗೌಡ ಮಾತನಾಡಿ, ಗ್ರಾಮದಲ್ಲಿ ತಲೆ ತಲಾಂತರದಿಂದ ಹಿಂದುಗಳೇ ಮೊಹರಂ ಆಚರಿಸುತ್ತೇವೆ. ಇದರಿಂದ ಗ್ರಾಮಕ್ಕೆ ಒಳ್ಳೆಯದಾಗಿದೆ. ಇಡೀ ಗ್ರಾಮಸ್ಥರು ಪ್ರತಿ ವರ್ಷ ಹಬ್ಬದ ಆಚರಣೆಗೆ ಎದುರು ನೋಡುತ್ತಿರುತ್ತೇವೆ ಎಂದು ಹೇಳಿದರು.
ಮುಖಂಡ ಪುಟ್ಟಪ್ಪ ಮಾತನಾಡಿ, ಮೊಹರಂ ಆಚರಣೆಯನ್ನು ನಮ್ಮೂರಿನ ಜಾತ್ರೆಯಂತೆ ಹೆಚ್ಚು ವಿಜೃಂಭಣೆಯಿಂದ ಆಚರಿಸುತ್ತೇವೆ. ಹರಕೆ ಹೊತ್ತಿರುವವರು ಹಾಗೂ ಸುತ್ತಲಿನ ಗ್ರಾಮಸ್ಥರು ಶ್ರದ್ಧಾಭಕ್ತಿಯಿಂದ ಹಬ್ಬದಲ್ಲಿ ಭಾಗವಹಿಸುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net