ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ, ತಿಕೋಟಾ ಭಾಗಕ್ಕೆ ನೀರು ಪೂರೈಸಲು ಆಗ್ರಹ, ರೈತರಿಂದ ಪ್ರತಿಭಟನೆ-ಮನವಿ

TUBACHI BABALESHWARA LIFTT IRRIGATION PROTEST
ತಿಕೋಟಾ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಪ್ರತಿಭಟನೆ ನಡೆಸಿದ ರೈತರು ಸ್ಥಳೀಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಸೋಮನಾಥ ಬಾಗಲಕೋಟ, ಯಾಕೂಬ್ ಜತ್ತಿ, ಜಕ್ಕಪ್ಪ ಎಡವೆ, ಭಾಗೀರಥಿ ತೇಲಿ, ಪ್ರಭಾವತಿ ನಾಟಿಕಾರ ಮತ್ತಿತರರಿದ್ದಾರೆ.
Published on

ವಿಜಯಪುರ: ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯ ಮೂಲಕ ತಿಕೋಟಾ ಭಾಗಕ್ಕೆ ನೀರು ಪೂರೈಸಲು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ತಿಕೋಟಾ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಪ್ರತಿಭಟನೆ ನಡೆಸಿದ ರೈತರು, ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜೆನೆಯಡಿ ನೀರು ಹರಿಸುವುದಕ್ಕೆ ಕೆಲವರು ಅಡ್ಡಿಪಡಿಸುತ್ತಿದ್ದು, ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ರೈತ ಮುಖಂಡ ಯಾಕೂಬ್ ಜತ್ತಿ ಮಾತನಾಡಿ, ತುಬಚಿ-ಬಬಲೇಶ್ವರ ಏತನೀರಾವರಿ ಯೋಜನೆಯಲ್ಲಿ ನಮಗೆ ಹಂಚಿಕೆಯಾದ ನಮ್ಮ ಪಾಲಿನ ನೀರು ನಮಗೆ ನೀಡಬೇಕು. ಆದರೆ, ಜಮಖಂಡಿ ತಾಲೂಕಿನ ಕೆಲವು ದುಷ್ಟ ಶಕ್ತಿಗಳು ಈ ಭಾಗಕ್ಕೆ ನೀರು ಹರಿಸದಂತೆ ವ್ಯವಸ್ಥಿತ ಪಿತೂರಿ ಮಾಡುತ್ತಿದ್ದಾರೆ. ಇಂಥ ದುಷ್ಟ ಶಕ್ತಿಗಳು ಜಮಖಂಡಿ, ಅಥಣಿ ಹಾಗೂ ತಿಕೋಟಾ ತಾಲೂಕಿನ ಕೆಲವು ಗ್ರಾಮಗಳಿಗೆ ಹರಿಯಬೇಕಿರುವ ನೀರನ್ನು ವ್ಯವಸ್ಥಿತ ಪಿತೂರಿ ನಡೆಸಿ ತಡೆಯುತ್ತಿವೆ ಎಂದರು.

ಈ ಹಿಂದೆ ಪಡಸಲಗಿ ಹತ್ತಿರ ನಿರ್ಮಿಸಿದ ಕೆರೆ ತುಂಬುವ ಯೋಜನೆಗೂ ಇದೇ ರೀತಿ ಅಡ್ಡಿ ಪಡಿಸಿ, ಇಡೀ ಯೋಜನೆಯನ್ನೇ ವಿಫಲಗೊಳಿಸಿದ ಜನರೇ ಇಂದು ಮತ್ತೆ ತುಬಚಿ-ಬಬಲೇಶ್ವರ ಯೋಜನೆಗೆ ಅಡ್ಡಿಪಡಿಸುತ್ತಿದ್ದಾರೆ. ನದಿಯಲ್ಲಿ ಹರಿಯುವ ಎಲ್ಲ ನೀರು, ನದಿ ಪಾತ್ರದ ಜನರಿಗೆ ಮಾತ್ರ ಎಂದು ಇವರು ಭಾವಿಸಿದಂತಿದೆ. ಈ ಹಿಂದೆ ಕಾನೂನು ಬಾಹಿರವಾಗಿ ಚಿಕ್ಕಪಡಸಲಗಿ ಬ್ಯಾರೆಜ್‌ಗೆ ಕಾನೂನು ಬಾಹಿರವಾಗಿ ಆಲಮಟ್ಟಿ ಹಿನ್ನೀರನ್ನು ರಿವರ್ಸ್ ಪಂಪ್ ಮೂಲಕ ಎತ್ತಿ ಬಳಸಿದ್ದಲ್ಲದೇ, ಈ ಯೋಜನೆಗೆ ಸರ್ಕಾರದ ಅನುದಾನ ಪಡೆದಿದ್ದಾರೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ ಮಾತನಾಡಿ, ಎಂ.ಬಿ.ಪಾಟೀಲರು ಜಲಸಂಪನ್ಮೂಲ ಸಚಿವರಾಗಿದ್ದಾಗ ಈ ಭಾಗದ ರೈತರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮ ವಹಿಸಿ ನೀರಾವರಿ ಸೌಲಭ್ಯ ಒದಗಿಸಿದ್ದಾರೆ. ಯಾವುದೇ ತಾರತಮ್ಯ ಮಾಡದೇ ಸಂಕಷ್ಟದ ಸಮಯದಲ್ಲಿ ಉಭಯ ಜಿಲ್ಲೆಗಳ ರೈತರಿಗೆ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಂಡಿದ್ದಾರೆ. ಆದರೂ, ಚಿಕ್ಕಪಡಸಲಗಿ ಭಾಗದ ರೈತರು ತಿಕೋಟಾ ತಾಲೂಕಿನ ಅನ್ನದಾತರ ಸಂಕಷ್ಟ ಅರ್ಥಮಾಡಿಕೊಳ್ಳದೆ ನೀರು ಬಿಡುಗಡೆಗೆ ಅಡ್ಡಿಯಾಗಿದ್ದಾರೆ ಎಂದು ಕಿಡಿ ಕಾರಿದರು.

ತಿಕೋಟಾ ರೈತ ಗೂಳಪ್ಪ ಪೂಜಾರಿ ಮಾತನಾಡಿ, ಕಳೆದ ವರ್ಷ ಜೂನ್ ಮತ್ತು ಜುಲೈನಲ್ಲಿ ಕೇವಲ ಒಂದು ವಾರ ಮಾತ್ರ ನಮಗೆ ನೀರು ಸಿಕ್ಕಿದೆ. ಉಳಿದ ಎಲ್ಲ ತಿಂಗಳ ನೀರನ್ನು ನೀವೇ ಉಳಿಸಿಕೊಂಡಿದ್ದೀರಿ. ನಮ್ಮ ಭಾಗದಲ್ಲಿ ದ್ರಾಕ್ಷಿ ಸೇರಿದಂತೆ ಬಹುತೇಕ ಎಲ್ಲ ಬೆಳೆಗಳು ಒಣಗುತ್ತಿವೆ. 12 ತಿಂಗಳು ನೀವೇ ನೀರು ಬಳಸಿಕೊಂಡರೂ ನಿಮಗೆ ತೃಪ್ತಿ ಇಲ್ಲ. ನಾವು ಕೇವಲ ಒಂದು ವಾರ ಮಾತ್ರ ನೀರು ಕೇಳುತ್ತಿದ್ದೇವೆ. ಅಧಿಕಾರಿಗಳು ಎರಡು ದಿನಗಳಲ್ಲಿ ನಮಗೆ ನೀರು ಹರಿಸದಿದ್ದರೆ ರಸ್ತೆ ತಡೆ ಸೇರಿದಂತೆ, ಜಾಕ್‌ವೆಲ್ ತೆರಳಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಲೋಹಗಾಂವ ರೈತ ಬಿ.ಎಸ್. ಗಸ್ತಿ ಮಾತನಾಡಿ, ಚಿಕ್ಕಪಡಸಲಗಿ ಭಾಗದ ರೈತರು ನಮ್ಮ ಪಾಲಿನ ನೀರಿಗೆ ತಾವೇ ಮಾಲಿಕರೆಂಬಂತೆ ವರ್ತಿಸುತ್ತಿದ್ದಾರೆ. ನಮ್ಮ ನೀರು ನಮ್ಮ ಹಕ್ಕು, ನಮ್ಮ ಪಾಲಿನ ನೀರು ನಮಗೆ ಬೇಕು ಎಂದರು.

ಪ್ರಭಾವತಿ ನಾಟಿಕಾರ, ಸಿದಗೊಂಡ ರುದ್ರಗೌಡರ, ಸಿದ್ದು ಗೌಡನವರ, ಶಂಕರಗೌಡ ಬಿರಾದರ, ಸುರೇಶ ಬಾಬಾನಗರ, ಗುರು ಮಾಳಿ, ಕೆ.ಆರ್. ಮೆಡೆಗಾರ, ಇಮ್ತಿಯಾಜ್ ಮುಲ್ಲಾ, ಮಲ್ಲಿಕಾರ್ಜುನ ಲೋಣಿ, ಈರಣ್ಣಗೌಡ ರುದ್ರಗೌಡ, ಜಗದೀಶಗೌಡ ಪಾಟೀಲ, ವಿಜುಗೌಡ ಪಾಟೀಲ, ಭೀಮು ನಾಟೀಕಾರ, ಆರ್.ಜಿ. ಯರನಾಳ, ಜಕ್ಕಪ್ಪ ಎಡವೆ, ರಾಮಜಿ ಮಿಸಾಳೆ, ಪ್ರಶಾಂತ ಜಂಡೆ, ಶಾಸಪ್ಪ ಹಂಚನಾಳ, ಕಾಶಿನಾಥಗೌಡ ಪಾಟೀಲ, ಲೇಪು ಕೊಣ್ಣೂರ, ಭಾಗೀರಥಿ ತೇಲಿ, ಕಸ್ತೂರಿ ಬಿರಾದಾರ, ರಮೇಶ ಜಂಬಗಿ, ಹಾಜಿಲಾಲ ಕೊಟ್ಟಲಗಿ, ಸಿದ್ದಾರ್ಥ ಪರನಾಕರ, ಬಾಳಪ್ಪ ಪೂಜಾರಿ, ರಾಜಕುಮಾರ ಚಾವರ, ಶ್ರೀಮಂತ ಬನ್ನೆನವರ, ಶಿವು ಪರೀಟ, ಯಮನಪ್ಪ ಮಲಕನವರ, ಪರಮೇಶ ಕಲಬಿಳಗಿ, ಮಮ್ಮು ಮುಜಾವರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net