

ತುಮಕೂರು : ಕರಾಳ ಕೃಷಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಲು ಮಳೆ, ಬಿಸಿಲು, ಚಳಿ ಲೆಕ್ಕಿಸದೆ ಹೋರಾಟ ಮಾಡುತ್ತಿದ್ದ ರೈತರಿಗೆ ಮರುಕಪಡದೆ, 750ಕ್ಕೂ ಹೆಚ್ಚು ರೈತರ ಸಾವಿಗೆ ಕಾರಣರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆಗೆ ಅರ್ಹರಲ್ಲ ಎಂದು ಮಾಜಿ ಡಿಸಿಎಂ, ಶಾಸಕ ಡಾ. ಜಿ. ಪರಮೇಶ್ವರ್ ಹೇಳಿದರು.
ಕಳೆದೊಂದು ವರ್ಷದಿಂದ ಧರಣಿ ನಡೆಸಿದ ಅನ್ನದಾತರನ್ನು ಕನಿಷ್ಠ ಸೌಜನ್ಯಕ್ಕೂ ಭೇಟಿ ಆಗದ, ಮಾತುಕತೆ ನಡೆಸದ ಅವರನ್ನು ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆದದ್ದಕ್ಕೆ ಅಭಿನಂದಿಸಿದರೆ ಹೋರಾಟನಿರತ ರೈತರಿಗೆ ಅಪಮಾನವಾಗುತ್ತದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರೈತರ ಹೋರಾಟ ವಿಶ್ವದ ಗಮನ ಸೆಳೆದಿದೆ. ವಿವಿಧ ರಾಷ್ಟ್ರಗಳ ರಾಷ್ಟ್ರಾಧ್ಯಕ್ಷರು, ಪ್ರಧಾನಿಗಳು ರೈತರ ಬಗ್ಗೆ ಮಾತನಾಡಿದ ವೇಳೆ ಪ್ರಧಾನಿ ಮೋದಿ, ನಮ್ಮ ದೇಶದ ಅಂತರಿಕ ವಿಚಾರದಲ್ಲಿ ತಲೆ ಹಾಕದಂತೆ ಮನವಿ ಮಾಡಿದ್ದರು. ಈಗ ಉಪಚುನಾವಣೆ ಸೋಲು ಹಾಗೂ ಮುಂದೆ ನಡೆಯುವ ಪಂಚ ರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯಲಾಗಿದೆ. ಈ ಕುರಿತು ಲೋಕಸಭೆ ಅಧಿವೇಶನದಲ್ಲಿ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ಭಾನುವಾರ ಏರ್ಪಾಡಾಗಿರುವ ಜನ ಜಾಗೃತಿ ಅಭಿಯಾನದ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಮಳೆ ಇಲ್ಲದಿದ್ದರೆ ಟೌನ್‌ಹಾಲ್‌ನಿಂದ ಗಾಜಿನಮನೆಯವರೆಗೆ ಎಲ್ಲ ನಾಯಕರು ಪಾದಯಾತ್ರೆ ಮಾಡಲಿದ್ದಾರೆ. ಮಳೆಯಿದ್ದರೆ ನೇರವಾಗಿ ವೇದಿಕೆ ಕಾರ್ಯಕ್ರಮ ನಡೆಸಲಾಗುವುದು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ಸೇರಿ ಎಲ್ಲ ನಾಯಕರು ಅಭಿಯಾನದಲ್ಲಿ ಪಾಲ್ಗೊಳ್ಳುವರು ಎಂದು ಮಾಜಿ ಶಾಸಕ ಕೆ.ಎನ್. ರಾಜಣ್ಣ ತಿಳಿಸಿದರು.
ಮಾಜಿ ಶಾಸಕರಾದ ಎಸ್. ರಫೀಕ್‌ಅಹ್ಮದ್, ಎಸ್.ಷಫಿಅಹ್ಮದ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ರಾಮಕೃಷ್ಣ, ಮುರಳೀಧರ ಹಾಲಪ್ಪ, ಎಚ್.ಸಿ. ಹನುಮಂತಯ್ಯ ಮತ್ತಿತರರು ಇದ್ದರು.
ಮಳೆಯಿಂದ 1.50 ಲಕ್ಷ ಕೋಟಿ ರೂ. ನಷ್ಟ : ರಾಜ್ಯದ ವಿವಿಧೆಡೆ 15 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೃಷಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ 11.55 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆಹಾನಿಯಾಗಿದೆ. ಇದರಿಂದ 1.5 ಲಕ್ಷ ಕೋಟಿ ರೂ. ನಷ್ಟವಾಗಿದೆ. ಜನರು ಬೆಳೆಯ ಜತೆಗೆ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇಷ್ಟಾದರೂ ರಾಜ್ಯ ಸರ್ಕಾರ ಪರಿಹಾರ ನೀಡಿಲ್ಲ ಎಂದು ಶಾಸಕ ಜಿ. ಪರಮೇಶ್ವರ್ ಹರಿಹಾಯ್ದರು. ಮಳೆ ಹಾನಿಗೆ ಸಂಬಂಧಿಸಿದಂತೆ ಕನಿಷ್ಠ ಪ್ರಧಾನಿ ಅವರಿಗೆ ಮನವಿ ಮಾಡಿಲ್ಲ. ಈ ಹಿಂದೆಯೂ ಸಾವಿರಾರು ಕೋಟಿ ನಷ್ಟವಾಗಿದ್ದರೂ 2019-20ರಲ್ಲಿ 1,600 ಕೋಟಿ ರೂ. ಮತ್ತು 2020-21ರಲ್ಲಿ 1,200 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಇಂಧನಗಳ ಮೇಲೆ ಹಾಕಿದ ಸೆಸ್‌ನಿಂದ ಲಕ್ಷಾಂತರ ಕೋಟಿ ರೂಪಾಯಿ ಆದಾಯ ಗಳಿಸಿರುವ ಕೇಂದ್ರ ಸರ್ಕಾರ ಇನ್ನಾದರೂ ಸಂಕಷ್ಟದಲ್ಲಿರುವವರಿಗೆ ಪರಿಹಾರ ಬಿಡುಗಡೆ ಮಾಡಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಪ್ರಧಾನಿಗೆ ಮನವಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು ಎಂಬ ಬಿಜೆಪಿ ಪ್ರಶ್ನೆಗೆ ಭಾನುವಾರದಿಂದ ಆರಂಭವಾಗುವ ಜನಜಾಗೃತಿ ಅಭಿಯಾನದಲ್ಲಿ ಪಕ್ಷ ಉತ್ತರ ನೀಡಲಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪಕ್ಷದ ಹಿರಿಯರು ನನ್ನನ್ನು ಎಐಸಿಸಿ ಶಿಸ್ತು ಸಮಿತಿಯ ಸದಸ್ಯರನ್ನಾಗಿ ನೇಮಿಸಿದ್ದಾರೆ. ಇದಕ್ಕಾಗಿ ಎಲ್ಲ ನಾಯಕರಿಗೆ ಅಭಿನಂದನೆ ಸಲ್ಲಿಸುವೆ. ಡಾ.ಜಿ.ಪರಮೇಶ್ವರ್, ಶಾಸಕ, ಮಾಜಿ ಡಿಸಿಎಂ