

ಶಿರಸಿ: ಐದು ಲಕ್ಷ ಟನ್ ಅಡಕೆ ಭಾರತಕ್ಕೆ ಆಮದಾಗುತ್ತಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಅಡಕೆ ದರ ಇನ್ನಷ್ಟು ಇಳಿದಿದೆ. ಅಡಕೆ ದರ ಕಡಿಮೆ ಮಾಡಲು ಕೆಲವರು ಈ ಸುದ್ದಿ ಹಬ್ಬಿಸಿರಬಹುದು ಎಂಬ ಸಂಶಯ ಮೂಡಿದೆ ಎಂದು ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಶ್ರೀಲಂಕಾದಿಂದ 5 ಲಕ್ಷ ಟನ್ ಅಡಕೆ ಆಮದಾಗಲಿದೆ ಎಂಬ ಸುದ್ದಿ ಹರಿದಾಡಿದೆ. ಆದರೆ, ಶ್ರೀಲಂಕಾದಲ್ಲಿ ಅಷ್ಟು ಅಡಕೆ ಬೆಳೆ ಇಲ್ಲ. ಹೊರ ದೇಶದಿಂದ ಶ್ರೀಲಂಕಾ ಅಡಕೆ ಖರೀದಿಸಿ ಭಾರತಕ್ಕೆ ಕಳಿಸುವ ಸಾಧ್ಯತೆ ಕಡಿಮೆ. ಅಲ್ಲದೇ ಕೇಂದ್ರದ ಆಮದು ತೆರಿಗೆಯನ್ನು ಒಳಗೊಂಡು ಪ್ರತಿ ಕೆಜಿ ಅಡಕೆಗೆ 351 ರೂ.ಗಿಂತ ಕಡಿಮೆ ದರದಲ್ಲಿ ಆಮದು ಮಾಡಿಕೊಳ್ಳಲು ಆಸ್ಪದ ಇರುವುದಿಲ್ಲ. ಇತ್ತೀಚೆಗೆ ಅಡಕೆ ಮಹಾ ಮಂಡಳದ ಸದಸ್ಯ ಮಂಜುನಾಥ ಹೊಸಬಾಳೆ ಅವರ ನಿಯೋಗದಲ್ಲಿ ಟಿಎಸ್ ಎಸ್ ವ್ಯವಸ್ಥಾಪಕ ವಿಜಯಾನಂದ ಭಟ್ ಸಹ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲೆಲ್ಲೂ ಅಡಕೆ ಆಮದಿಗೆ ಅನುಮತಿ ನೀಡಿರುವ ಬಗ್ಗೆ ಪ್ರಸ್ತಾಪವಾಗಿಲ್ಲ. ದೇಶದ ಗಡಿಗಳಲ್ಲಿ ಅಡಕೆ ಅಕ್ರಮ ಆಮದಾಗುವ ಬಗ್ಗೆ ನಿಯೋಗ ಪ್ರಸ್ತಾಪಿಸಿದಾಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅಡಕೆಗೆ ಉತ್ತಮ ದರ ಲಭಿಸುತ್ತಿರುವಾಗಲೇ ಇಂತಹ ವದಂತಿ ಹಬ್ಬುತ್ತಿದ್ದು, ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿದಂತಿದೆ ಎಂದರು.
ಶಿರಸಿ ಅಡಕೆಗೆ ಜಿ ಐ ಅಭಯ
ಶಿರಸಿ ಅಡಕೆಗೆ ಜಿ ಐ (ಗ್ಲೋಬಲ್ ಐಡೆಂಟಿಫಿಕೇಶನ್) ಟ್ಯಾಗ್ ಇದೆ. ಹೀಗಾಗಿ, ಉತ್ತರ ಭಾರತದ ಮಾರುಕಟ್ಟೆಯಲ್ಲಿ ಸಹ ಇಲ್ಲಿಯ ಅಡಕೆಗೆ ಬೇಡಿಕೆ ಸದಾ ಇದೆ. ನಾನು ರಾಜಸ್ಥಾನ ಹಾಗೂ ಇತರ ರಾಜ್ಯಗಳಿಗೆ ಇತ್ತೀಚೆಗೆ ಹೋಗಿದ್ದಾಗ ಅಲ್ಲಿಯ ವರ್ತಕರು ಬರ್ಮಾ, ಇಂಡೋನೇಷಿಯಾ ಹಾಗೂ ಇನ್ನಿತರ ದೇಶಗಳಿಂದ ಆಮದಾದ ಅಡಕೆಯನ್ನೂ ತೋರಿಸಿದ್ದರು. ಶಿರಸಿಯ ಅಡಕೆ ಗುಣಮಟ್ಟದ್ದಾಗಿದ್ದು, ಬಳಕೆದಾರರಿಂದ ಸದಾ ಬೇಡಿಕೆ ಇದೆ ಎಂದು ಅಲ್ಲಿಯ ವರ್ತಕರೇ ಹೇಳಿದ್ದಾರೆ. ಹೀಗಾಗಿ, ರೈತರು ಆತಂಕಕ್ಕೆ ಒಳಗಾಗಬೇಕಾದ ಅಗತ್ಯತೆ ಇಲ್ಲ ಎಂದರು.
ಉತ್ತರ ಕನ್ನಡ ಜಿಲ್ಲೆಯ 36 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 47 ಸಾವಿರ ಟನ್ ಅಡಕೆ ಉತ್ಪಾದನೆಯಾಗುತ್ತದೆ. ಟಿಎಸ್ ಎಸ್ ಸಂಸ್ಥೆಯಲ್ಲಿ ಈ ವರ್ಷ ಇದುವರೆಗೆ 2.18 ಲಕ್ಷ ಕ್ವಿಂಟಾಲ್ ಅಡಕೆಯನ್ನು ರೈತರು ಮಾರಾಟ ಮಾಡಿದ್ದಾರೆ. ದರ ಕುಸಿತವನ್ನು ತಪ್ಪಿಸಲು ಟಿಎಸ್ ಎಸ್ ಸಂಸ್ಥೆ 79 ಸಾವಿರ ಕ್ವಿಂಟಾಲ್ ಅಡಕೆಯನ್ನು ಸ್ವತಃ ಖರೀದಿಸಿದ್ದರೂ ಹೊರರಾಜ್ಯಗಳ ಬೇಡಿಕೆಗನುಗುಣವಾಗಿ ಕಳಿಸಿಕೊಟ್ಟಿದ್ದೇವೆ. ಇಂದು ನಮ್ಮಲ್ಲಿ 10 ಸಾವಿರ ಕ್ವಿಂಟಾಲ್ ಅಡಕೆ ಮಾತ್ರ ದಾಸ್ತಾನಿದೆ. ಹೀಗಾಗಿ ಗುಣಮಟ್ಟದ ಅಡಕೆಗೆ ಸದಾ ಬೇಡಿಕೆ ಇದ್ದು, ರೈತರು ಭಯಪಡಬೇಕಿಲ್ಲ ಎಂದರು.
ಇತ್ತೀಚಿನ ವರ್ಷಗಳಲ್ಲಿ ಅಡಕೆ ಬೆಳೆ ಕ್ಷೇತ್ರ ವಿಸ್ತರಣೆ ಆಗುತ್ತಿರುವುದು ನಿಜ. ಆದರೆ, ಕ್ಷೇತ್ರ ವಿಸ್ತರಣೆ ನಿಯಂತ್ರಣ ನಮ್ಮ ವ್ಯಾಪ್ತಿಯಲ್ಲಿಲ್ಲ. ಆದರೆ, ಸಾಂಪ್ರದಾಯಿಕ ಅಡಕೆ ಬೆಳೆಗಾರರ ಸಮಸ್ಯೆ ಬಗೆಹರಿಸಬೇಕು ಎಂದು ಈಗಾಗಲೇ ಸರ್ಕಾರಕ್ಕೆ ಆಗ್ರಹಿಸಿದ್ದೇವೆ. ಅಡಕೆ ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತದೆ ಎಂಬ ವರದಿ ಈಗಾಗಲೇ ಸುಪ್ರಿಂ ಕೋರ್ಟ್ನಲ್ಲಿದೆ. ಅಡಕೆ ಆರೋಗ್ಯಕ್ಕೆ ಹಾನಿಕರವಲ್ಲ, ಅಡಕೆ ಜೊತೆ ತಂಬಾಕು ಸೇವನೆ ಹಾನಿಕರ ಎಂಬುದನ್ನು ಸುಪ್ರಿಂ ಕೋರ್ಟ್ಗೆ ಮನವರಿಕೆ ಮಾಡಿಕೊಡಲು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದೇವೆ. ಅಡಕೆ ಆರೋಗ್ಯಕ್ಕೆ ಪೂರಕ ಎಂಬ ಬಗ್ಗೆ ಸಂಶೋಧನೆ ಮುಕ್ತಾಯ ಹಂತದಲ್ಲಿದ್ದು, ಈ ವರದಿ ಬಂದ ಬಳಿಕ ಸುಪ್ರಿಂ ಕೋರ್ಟ್ಗೆ ಸಲ್ಲಿಸುವಂತೆ ಕೋರಿದ್ದೇವೆ ಎಂದರು.
ಟಿಎಸ್‌ಎಸ್ ಉಪಾಧ್ಯಕ್ಷ ಎಂ.ಎನ್. ಭಟ್, ನಿರ್ದೇಶಕ ಜಿ.ವಿ.ಜೋಶಿ, ಪ್ರಭಾರಿ ವ್ಯವಸ್ಥಾಪಕ ವಿಜಯಾನಂದ ಭಟ್ ಇತರರಿದ್ದರು.
ಟಿಎಸ್‌ಎಸ್ ನ ಹಿಂದಿನ ಆಡಳಿತ ಮಂಡಳಿ, ವ್ಯವಸ್ಥಾಪಕ ನಿರ್ದೇಶಕರ ವ್ಯವಹಾರಗಳ ಬಗ್ಗೆ ಮೂರು ತಂಡಗಳ ಮೂಲಕ ಆಡಿಟ್ ನಡೆದಿದೆ. ಮುಂದಿನ ದಿನಗಳಲ್ಲಿ ಆಡಿಟ್ ವರದಿಯನ್ನು ಎಲ್ಲರಿಗೂ ತಿಳಿಸುತ್ತೇವೆ. ಗೋಪಾಲಕೃಷ್ಣ ವೈದ್ಯ, ಅಧ್ಯಕ್ಷ, ಟಿಎಸ್ಎಸ್ ಶಿರಸಿ