

ಹುಬ್ಬಳ್ಳಿ: ಶ್ರೀ ದುರ್ಗಾ ಕಪ್-16 ವಯೋಮಿತಿಯ ಕ್ರಿಕೆಟ್ ಟೂರ್ನಿಯಲ್ಲಿ ನಗರದ ತೇಜಲ್ ಶಿರಗುಪ್ಪಿ ಕ್ರಿಕೆಟ್ ಆಕಾಡೆಮಿ (ಟಿಎಸ್ಸಿಎ) ಚಾಂಪಿಯನ್ ಪಟ್ಟ ಅಲಂಕರಿಸಿದೆ.
ದೇಶಪಾಂಡೆನಗರ ಕೆಜಿಎ ಮೈದಾನದಲ್ಲಿ ಭಾನುವಾರ ನಡೆದ ಫೈನಲ್ನಲ್ಲಿ ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ವಿರುದ್ಧ 1 ರನ್ ಅಂತರದಿಂದ ರೋಚಕ ಜಯ ಸಾಧಿಸಿದ ಟಿಎಸ್ಸಿಎ ಟ್ರೋಫಿ ತನ್ನದಾಗಿಸಿಕೊಂಡಿತು.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ, ಟಿಎಸ್ಸಿಎ ತಂಡವನ್ನು 24. 2ಓವರ್ಗಳಲ್ಲಿ ಆಲೌಟ್ ಮಾಡಿ 139ರನ್ ಮೊತ್ತಕ್ಕೆ ಕಟ್ಟಿಹಾಕಿತ್ತು. ಟಿಎಸ್ಇಎ ಪರವಾಗಿ ಪ್ರೀತಂ ಚಿಮ್ಮಲಗಿ 29, ಸಾಯಿನಾಥ ರಾಜೊಳ್ಳಿ 33 ಹಾಗೂ ಶುಭ ಮುಂಗರವಾಡಿ 31 ರನ್ ಗಳಿಸಿದರು. ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿಯ ಈರಪ್ಪ ಘಂಟಿ 4, ಅಭಿಷೇಕ ಹಾಗೂ ಪ್ರಥ್ಚಿ ಕರ್ಜಗಿ ತಲಾ 2ವಿಕೆಟ್ಗಳನ್ನು ಪಡೆದರು.
ಸವಾಲಿನ ಮೊತ್ತ ಬೆನ್ನಟ್ಟಿದ ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ 25ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 138ರನ್ ಗಳಿಸಿ ಕೇವಲ 1 ರನ್ನಿಂದ ಸೋಲು ಅನುಭವಿಸಿತು. ಜಾಯ್ ಸುಳ್ಳದ 64 ಹಾಗೂ ಪವನ ಎಸ್. 43 ರನ್ ಗಳಿಸಿದರು. ಟಿಎಸ್ಸಿಎ ಪರವಾಗಿ ಸಾಯಿನಾಥ್ ರಾಜೊಳ್ಳಿ 2ವಿಕೆಟ್ ಪಡೆದರು.
ವಿಜೇತ ತಂಡಕ್ಕೆ ಶಾಸಕ ಮಹೇಶ ಟೆಂಗಿನಕಾಯಿ 50 ಸಾವಿರ ರೂ. ನಗದು ಬಹುಮಾನ ಹಾಗೂ ಟ್ರೋಫಿ ವಿತರಿಸಿದರು. ರನ್ನರ್ ಅಪ್ ತಂಡ 25 ಸಾವಿರ ರೂ. ನಗದು ಬಹುಮಾನ ಹಾಗೂ ಟ್ರೋಫಿ ಪಡೆಯಿತು. ರಣಜಿ ಕ್ರಿಕೆಟಿಗ ಶಿಶಿರ ಭವಾನಿ, ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ರೂಪಾ ಶೆಟ್ಟಿ, ಯುವ ಮುಖಂಡ ರಜತ ಉಳ್ಳಾಗಡ್ಡಿಮಠ, ಶ್ರೀ ದುರ್ಗಾ ಡೆವಲಪರ್ಸ್ ಎಂಡಿ ವಿರೇಶ ಉಂಡಿ, ಇತರರು ಇದ್ದರು.