ಮಣಿಪುರ ಪ್ರಕರಣ ಮರೆಮಾಚಲು ಯತ್ನ…!

S M PATIL GANIHAR
ವಿಜಯಪುರದ ಖಾಸಗಿ ಹೋಟೆಲ್‌ನಲ್ಲಿ ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಸುದ್ದಿಗೋಷ್ಠಿ ನಡೆಸಿದರು. ನಾಗರಾಜ ಲಂಬು ಇದ್ದಾರೆ.
Published on

ವಿಜಯಪುರ: ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ ಪ್ರಕರಣವನ್ನು ಮರೆಮಾಚುವ ಉದ್ದೇಶದಿಂದ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಂಘಪರಿವಾರ ಸಹಿತ ಕೆಲವು ಮಾಧ್ಯಮಗಳು ಉಡುಪಿಯ ಸುಳ್ಳು ಸುದ್ದಿಯನ್ನು ವೈಭವೀಕರಿಸುತ್ತಿವೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ತಿಳಿಸಿದರು.

ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿಗೆ ಸದ್ಯದ ಏಕೈಕ ಅಜೆಂಡಾ ಎಂದರೆ ಕೇವಲ ಮುಸ್ಲಿಂರನ್ನು ಹೀಗಳೆಯುವುದು, ಕಾಂಗ್ರೆಸ್‌ನ್ನು ವಿರೋಧಿಸುವುದೇ ಆಗಿದೆ. ಅದಕ್ಕಾಗಿ ರಾಜ್ಯದಲ್ಲಿ ಸುಳ್ಳು ಸುದ್ದಿ ಹರಡುವ ಕೃತ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ವಾಗ್ದಾಳಿ ನಡೆಸಿದರು.

ಉಡುಪಿಯ ಕಾಲೇಜೊಂದರ ಶೌಚಗೃಹದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ರಹಸ್ಯ ಕ್ಯಾಮೆರಾ ಇರಿಸಿದ್ದಾರೆಂಬ ಹಸಿ ಸುಳ್ಳು ಸುದ್ದಿ ಹರಿಬಿಟ್ಟಿರುವ ಬಿಜೆಪಿ, ಆರ್‌ಎಸ್‌ಎಸ್ ಸಂಘಪರಿವಾರದವರಿಗೆ ಪೊಲೀಸ್ ಇಲಾಖೆಯ ಮೇಲೆ ಭರವಸೆ ಇಲ್ಲದಂತಾಗಿದೆ. ಪ್ರಕರಣದ ಕುರಿತು ಸಮಗ್ರ ಮಾಹಿತಿ ಕಲೆ ಹಾಕಿರುವ ಪೊಲೀಸರು ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟ ಪಡಿಸಿದರೂ ನಂಬುವ ಸ್ಥಿತಿಯಲ್ಲಿ ಈ ಬಿಜೆಪಿಗರಿಲ್ಲ. ಅಷ್ಟೇ ಏಕೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಕೂಡ ಅಂಥ ಯಾವುದೇ ಕ್ಯಾಮರಾ ಇಲ್ಲ ಎಂದು ಸ್ಪಷ್ಟ ಪಡಿಸಿದರೂ ಬಿಜೆಪಿಯ ‘ಫೇಕ್ ಫ್ಯಾಕ್ಟರಿ’ ಸುಳ್ಳು ಸುದ್ದಿ ಹರಡುವುದನ್ನು ಬಿಡಲಿಲ್ಲ. ಇದೆಲ್ಲ ಗಮನಿಸಿದರೆ ಬಿಜೆಪಿಗೆ ಕಾಂಗ್ರೆಸ್‌ನ ಅಭಿವೃದ್ಧಿಪರ ಆಡಳಿತ ಅರಗಿಸಿಕೊಳ್ಳಲಾಗುತ್ತಿಲ್ಲವೆಂಬುದು ಗೋಚರಿಸಲಿದೆ ಎಂದರು.

ಕೆಲವು ಮಾಧ್ಯಮಗಳು ಸಹ ಗುತ್ತಿಗೆ ಪಡೆದವರಂತೆ ಸುಳ್ಳು ಸುದ್ದಿಯನ್ನೇ ಹರಡುತ್ತಿವೆ. ಇದರ ಹಿಂದೆ ಮಣಿಪುರದ ಭೀಕರ ಪ್ರಕರಣವನ್ನು ಮರೆಮಾಚುವ ಅಜೆಂಡಾ ಅಡಗಿದೆ. ಮಣಿಪುರದಲ್ಲಿ ತೀವ್ರ ಗಲಾಟೆ ನಡೆದು ಮಹಿಳೆಯರನ್ನು ಬೆತ್ತಲೆಗೊಳಿಸಿದ ಪ್ರಕರಣ ಮರೆ ಮಾಚಲು ಕೆಲವು ಮಾಧ್ಯಮಗಳು ಸಹ ಗುತ್ತಿಗೆ ಪಡೆದಂತೆ ಭಾಸವಾಗುತ್ತಿದೆ. ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿದ ಪ್ರಕರಣ ಮರೆಮಾಚಲು ಉಡುಪಿಯ ಸುಳ್ಳು ಸುದ್ದಿಗೆ ಮಹತ್ವ ನೀಡಲಾಗುತ್ತಿದೆ. ಇದರಿಂದಾಗಿ ಉಡುಪಿ ಕಾಲೇಜಿನಲ್ಲಿ ಕಲಿಯುತ್ತಿರುವ ಗೌರವಾನ್ವಿತ ಕುಟುಂಬಸ್ಥರ ಮಕ್ಕಳ ಮರ್ಯಾದೆ ಕಳೆಯುವ ಪ್ರಯತ್ನ ನಡೆದಿದೆ. ಇದನ್ನು ಉಡುಪಿಯ ನಾಗರಿಕ ಸಮಾಜ ಗಮನಿಸಬೇಕು ಎಂದರು.

ಬಿಜೆಪಿ ಮತ್ತು ಸಂಘಪರಿವಾರದವರಿಗೆ ಮುಸ್ಲಿಂ ಎಂಬ ಹೆಸರು ಪ್ರಸ್ತಾಪ ಆಗುತ್ತಿದ್ದಂತೆ ಕಿವಿ ನಿಮಿರುತ್ತವೆ. ತೀರ್ಥಹಳ್ಳಿಯಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆದಾಗ ಇವರ ಕಿವಿ ನಿಮಿರುವುದಿಲ್ಲ. ಟಿ.ನರಸಿಪುರದಲ್ಲಿ ದಲಿತ ಯುವಕ ವೇಣುಗೋಪಾಲನ ಹತ್ಯೆಯಾದಾಗ ಇವರ ಕಿವಿ ನಿಮುರುವುದಿಲ್ಲ. ದಲಿತ ನಾಯಕ ಪರಮೇಶ್ವರ ಅವರ ಮೇಲೆ ಹಲ್ಲೆ ನಡೆದಾಗ ಇವರ ಕಿವಿ ನಿಮಿರುವುದಿಲ್ಲ. ಇವರು ಎಷ್ಟು ಅತಿರೇಕಕ್ಕೆ ಹೋಗಿದ್ದಾರೆಂದರೆ ಉಡುಪಿ ಶಾಸಕ ಯಶ್ಪಾಲ ಸುವರ್ಣನಂಥವರು ಪರಮೇಶ್ವರ ಅವರ ಬಗ್ಗೆ ವೈಯಕ್ತಿಕವಾಗಿ ಮಾತನಾಡುತ್ತಾರೆ. ತುಮಕೂರಿನ ಬಿಜೆಪಿ ಧುರೀಣೆ ಸಿದ್ದರಾಮಯ್ಯನವರ ಕುಟುಂಬಸ್ಥರ ಬಗ್ಗೆ ವೈಯಕ್ತಿಕವಾಗಿ ನಿಂದನೆ ಮಾಡುತ್ತಾರೆ. ಇದೆಲ್ಲಾ ಹತಾಷ ಭಾವನೆಯನ್ನು ಎತ್ತಿ ತೋರಿಸುತ್ತದೆ ಎಂದ ಗಣಿಹಾರ, ಸಂಘ ಪರಿವಾರದವರು ಎಷ್ಟೋ ಬಾರಿ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದಾರೆ, ಗೌರವ ಕಳೆದಿದ್ದಾರೆ. ಆಗೆಲ್ಲಾ ಮಹಿಳೆಯರ ಗೌರವದ ಬಗ್ಗೆ ಇವರಿಗೆ ನೆನಪಾಗಲೇ ಇಲ್ಲವಾ? ಒಟ್ಟಾರೆ ಅಭಿವೃದ್ಧಿ, ಪ್ರಗತಿ ಬಗ್ಗೆ ಧ್ವನಿ ಎತ್ತದೆ ಕೇವಲ ಕೋಮುಭಾವನೆ ಕೆರಳಿಸುವುದೇ ಸಂಘ ಪರಿವಾರದ ಕೆಲಸವಾಗಿದೆ ಎಂದರು.

ಡಿಜೆ- ಕೆಜೆ ಹಳ್ಳಿ ಪ್ರಕರಣ, ಹುಬ್ಬಳಿಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಾಸಕ ತನ್ವೀರ್ ಸೇಠ ಅವರು ಅಮಾಯಕರ ಮೇಲಿನ ಕೇಸ್ ಪರಿಶೀಲಿಸಿ ಎಂದು ಗೃಹ ಸಚಿವ ಪರಮೇಶ್ವರ ಅವರಿಗೆ ಪತ್ರ ಬರೆದಿರುವುದನ್ನೇ ದೊಡ್ಡ ರಾದ್ದಾಂತ ಮಾಡುತ್ತಿರುವ ಬಿಜೆಪಿಗರಿಗೆ ತಮ್ಮ ಅವಧಿಯಲ್ಲಿ ಅಪರಾಧಿಗಳ ಮೇಲಿನ ಮೊಕದ್ದಮೆಯನ್ನೇ ಹಿಂಪಡೆದಿರುವುದು ಗಮನಕ್ಕಿಲ್ಲವಾ? ಅಸಲು ತನ್ವೀರ್ ಸೇಠ ಅವರು ಅಮಾಯಕರಿಗೆ ಶಿಕ್ಷೆಯಾಗದಂತೆ ನೋಡಿಕೊಳ್ಳಿ ಎಂದಿದ್ದಾರೆ ವಿನಃ ಅಪರಾಧಿಗಳಿಗೆ ಎಂದು ನಮೂದಿಸಿಲ್ಲ ಎಂದರು.
ಮುಖಂಡರಾದ ನಾಗರಾಜ ಲಂಬು, ಫಯಾಜ್ ಕಲಾದಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net