

ಚಿಕ್ಕಮಗಳೂರು: ದಲಿತರ ಭೂಮಿ ಕಬಳಿಸಲು ಯತ್ನಿಸುತ್ತಿರುವವರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಡಿಎಸ್‌ಎಸ್ ಮುಖಂಡರು ತಹಸೀಲ್ದಾರ್ ಸುವಂತ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯ ಕೆ.ಸಿ.ವಸಂತ್ ಕುಮಾರ್ ಮಾತನಾಡಿ, ತಾಲೂಕಿನ ಆವತಿ ಹೋಬಳಿ, ಬೆರಣಗೋಡು ಗ್ರಾಮದ ಚನ್ನಯ್ಯ ಎಂಬುವವರ ೫ ಎಕರೆ ಖುಷ್ಕಿ ಜಮೀನಿಗೆ ಸ್ಥಳೀಯ ವ್ಯಕ್ತಿಯೊಬ್ಬರು ಅತಿಕ್ರಮ ಪ್ರವೇಶಿಸಿ ದೌರ್ಜನ್ಯ ಮಾಡುತ್ತಿದ್ದಾರೆ. ಅವರ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬೆರಣಗೋಡು ಸರ್ವೆ ನಂ.೬೮/೨ ರಲ್ಲಿ ಚನ್ನಯ್ಯ ಎಂಬುವವರು ೫ ಎಕರೆ ಜಮೀನಿನಲ್ಲಿ ಅನೇಕ ವರ್ಷಗಳಿಂದ ಸಾಗುವಳಿ ಮಾಡಿಕೊಂಡಿದ್ದಾರೆ. ಚನ್ನಯ್ಯ ಅವರ ಅರ್ಜಿ ಪರಿಗಣಿಸಿ ೧೯೮೦ರಲ್ಲಿ ಮೋಜಿಣಿದಾರರು ಹಾಗೂ ೧೯೮೪ರಲ್ಲಿ ಆವತಿ ಹೋಬಳಿ ಆರ್.ಐ. ಜಮೀನು ಸರ್ವೆಗೆ ಬರುವುದಾಗಿ ನೋಟೀಸ್ ನೀಡಿ ಬಂದಿರುವುದಿಲ್ಲ ಎಂದು ಹೇಳಿದರು.
ಇದೀಗ ಚನ್ನಯ್ಯ ಎಂಬುವವರು ವಯಸ್ಸಾದ ಕಾರಣ ಆತನ ಎರಡು ಗಂಡು ಮಕ್ಕಳು ಜಮೀನಿನಲ್ಲಿ ಕಾಫಿ ಸಸಿಗಳನ್ನು ಬೆಳೆಸಿಕೊಂಡು ಜೀವನ ನಡೆಸುತ್ತಿದ್ದಾರೆ. ಇವರಿಗೆ ಈ ಜಮೀನು ಹೊರತುಪಡಿಸಿ ಬೇರೆ ಯಾವ ಆಸ್ತಿಯೂ ಇಲ್ಲ. ಹೀಗಿರುವಾಗ ಸವರ್ಣೀಯರು ದಲಿತರ ಆಸ್ತಿಯನ್ನು ಕಬಳಿಸಿ ಅವರನ್ನು ಬೀದಿಪಾಲು ಮಾಡಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.
ಸಾಗುವಳಿ ಮಾಡಿಕೊಂಡಿದ್ಧ ಚನ್ನಯ್ಯ ಕುಟುಂಬದವರ ಜಮೀನಿಗೆ ಇತ್ತೀಚೆಗೆ ಗ್ರಾಮದ ಸ್ಥಳೀಯ ವ್ಯಕ್ತಿಯೊಬ್ಬರು ಅತಿಕ್ರಮ ಪ್ರವೇಶಿಸಿ ದೌರ್ಜನ್ಯದಿಂದ ತಂತಿಬೇಲಿ ಹಾಕಿಸಿದ್ದಾರೆ. ಈ ಬಗ್ಗೆ ಮಕ್ಕಳು ತಹಸೀಲ್ದಾರ್ ಗಮನಕ್ಕೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ ಮೇರೆಗೆ ಅಧಿಕಾರಿಗಳು ಭೇಟಿ ನೀಡಿ ತೆರಳಿದ್ದಾರೆ. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಬAಧಿಸಿದ ಅಧಿಕಾರಿಗಳ ವರದಿ ಪರಿಗಣಿಸಿ ಚನ್ನಯ್ಯರವರು ೧೯೮೦-೮೪ರ ಇಲಾಖೆ ನೋಟೀಸ್ ಪರಿಗಣಿಸಿ ಇವರೇ ಸಾಗುವಳಿ ಮಾಡಿರುವುದು ಸ್ಪಷ್ಟವಾಗಿದೆ. ಹೀಗಾಗಿ ಪರಿಶಿಷ್ಟ ಜಾತಿಗೆ ಸೇರಿದ ಚನ್ನಯ್ಯ ಕುಟುಂಬದ ಜಮೀನಿಗೆ ಅತಿಕ್ರಮ ಪ್ರವೇಶಿಸಿರುವ ಸ್ಥಳೀಯ ವ್ಯಕ್ತಿಗೆ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ವಿ.ಧರ್ಮೇಶ್, ಕೆಂಚಯ್ಯ, ಎಂ.ಸಿ.ಜಯರಾಮಯ್ಯ, ಮುಖಂಡರಾದ ಮರ್ಲೆ ಅಣ್ಣಯ್ಯ, ಹುಣಸೇಮಕ್ಕಿ ಲಕ್ಷö್ಮಣ್, ರಂಗಯ್ಯ ಮತ್ತಿತರರಿದ್ದರು.