

ಮೈಸೂರು: ಮನುಷ್ಯನ ಒಡನಾಡಿಯಾಗಿರುವ ಪ್ರಾಣಿ, ಪಕ್ಷಿ ಹಾಗೂ ಜೀವ ಸಂಕುಲವನ್ನುಳಿಸಲು ಸಮಾಜದಲ್ಲಿರುವ ಸಹೃದಯಿ ನಾಗರಿಕರು ಮುಂದಾಗಬೇಕೆಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಕರೆ ನೀಡಿದರು.
ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ನಗರದಲ್ಲಿ 2 ತಿಂಗಳ ಕಾಲ ಹಮ್ಮಿಕೊಂಡಿರುವ ಮೂಕ ಸ್ಪಂದನೆ ಎಂಬ ‘ನೀರುಣಿಸಿ-ಜೀವವನ್ನುಳಿಸಿ’ ಎಂಬ ಕಾರ್ಯಕ್ರಮವನ್ನು ಸೋಮವಾರ ಚಾಮುಂಡಿಪುರಂ ವೃತ್ತದ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ಮರಗಳಿಗೆ ಪ್ರಾಣಿ ಪಕ್ಷಿ ಉಳಿಸಿ ಎಂಬ ನಾಮಫಲಕ ಹಾಗೂ ನೀರು ಹಾಗೂ ಆಹಾರದ ಬಟ್ಟಲು ಅಳವಡಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಬೇಸಿಗೆಯ ರಣಬಿಸಿಲಿನ ತಾಪಮಾನದ ತೀವ್ರತೆಯಿಂದಾಗಿ ಪ್ರಾಣಿ ಪಕ್ಷಿಸಂಕುಲ ಬಳಲುತ್ತವೆ. ಕುಡಿಯುವ ನೀರು ಆಹಾರಕ್ಕಾಗಿ ಪರಿತಪಿಸುತ್ತವೆ. ಆದ್ದರಿಂದ ಇಂತಹ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಿದೆ ಎಂದರು.
ಸಮಾಜ ಸೇವಕ ಕೆ.ರಘುರಾಮ ವಾಜಪೇಯಿ, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್, ನಗರ ಪಾಲಿಕೆ ಮಾಜಿ ಸದಸ್ಯ ಮ.ವಿ.ರಾಮ್‌ಪ್ರಸಾದ್, ಉದ್ಯಮಿ ಅಪೂರ್ವ ಸುರೇಶ್, ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಮೃಗಾಲಯ ಪ್ರಾಧಿಕಾರದ ಮಾಜಿ ನಿರ್ದೇಶಕರಾದ ಜ್ಯೋತಿ ರೇಚಣ್ಣ, ಕಡಕೋಳ ಜಗದೀಶ್, ಅಖಿಲ ಭಾರತೀಯ ಗ್ರಾಹಕ ಪಂಚಾಯಿತಿ ಮೈಸೂರು ಘಟಕದ ಅಧ್ಯಕ್ಷ ಚಂದ್ರಶೇಖರ್ ಇತರರಿದ್ದರು.