

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಲ ಸಂಪನ್ಮೂಲ ಇಲಾಖೆಯಲ್ಲಿ ಹೊಸದಾಗಿ ನೇಮಕವಾಗಿ ತರಬೇತಿ ಪಡೆದ ಇಂಜಿನಿಯರ್‌ಗಳು ರೈತರನ್ನು ಹತ್ತಿರವಾಗಿಸಿಕೊಂಡು ಅವರಿಗೆ ಕೃಷಿ ಉತ್ಪಾದನೆ, ನೀರಿನ ಮಿತವ್ಯಯಕ್ಕೆ ಸಂಬಂಧಿಸಿದ ಜ್ಞಾನ ವಿಸ್ತರಿಸಿ ಅವರ ಬಾಳನ್ನು ಹಸನು ಮಾಡಲು ಪ್ರಯತ್ನಿಸಬೇಕು ಎಂದು ಆಕಾಶವಾಣಿ ನಿಲಯ ನಿರ್ದೇಶಕ ಡಾ. ಬಸು ಬೇವಿನಗಿಡದ ಸಲಹೆ ನೀಡಿದರು.
ನಗರದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ)ಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಲಸಂಪನ್ಮೂಲ ಇಲಾಖೆಯಲ್ಲಿ ನೇಮಕಗೊಂಡ ಇಂಜಿನಿಯರ್‌ಗಳ 1 ತಿಂಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.
ತರಬೇತಿ ಎಂಬುದು ಕಿಡಿ ಇದ್ದಂತೆ. ಈ ಕಿಡಿ ಮೂಲಕ ದೀಪವನ್ನು ಪ್ರಜ್ವಲಿಸುವಂತೆ, ದೇಶದ ಬೆನ್ನೆಲುಬಾದ ರೈತರ ಬಾಳು ಉದ್ಧಾರ ಮಾಡಲು ಪ್ರಯತ್ನ ಮಾಡುವುದು ಎಲ್ಲರ ಕರ್ತವ್ಯ. ರೈತರ ಜತೆಗೆ ಒಂದಾಗಿ ಕೆಲಸ ಮಾಡಿ ನಾಡಿನ ಸಂಪತ್ತನ್ನು ಹೆಚ್ಚಿಸುವಲ್ಲಿ ಇಂಜಿನಿಯರ್‌ಗಳ ಪಾತ್ರ ಪ್ರಮುಖವಾಗಿದೆ ಎಂದರು.
ಶಿಬಿರದ ಸಂಯೋಜಕ ಪ್ರೊ. ಬಿ.ವೈ. ಬಂಡಿವಡ್ಡರ ಮಾತನಾಡಿ, ಕಾಲುವೆಯ ಕೊನೆಯಂಚಿನ ರೈತರಿಗೆ ನೀರು ತಲುಪಿಸುವುದು ನಮ್ಮೆಲ್ಲರ ಪ್ರಥಮ ಆದ್ಯತೆ. ಅಚ್ಚುಕಟ್ಟು ಪ್ರದೇಶಗಳಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳನ್ನು ರಚಿಸಿ, ರೈತರು ನೀರನ್ನು ಮಿತವ್ಯಯವಾಗಿ ಬಳಸಿಕೊಂಡು ಉತ್ತಮ ಇಳುವರಿ ಪಡೆಯುವಂತೆ ತರಬೇತಿ ನೀಡುವುದು ಇಂಜಿನಿಯರ್‌ಗಳ ಜವಾಬ್ದಾರಿಯಾಗಿದೆ ಎಂದರು.
ಪ್ರೊ. ಜಿ. ಭೀಮಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಶಿಬಿರಾರ್ಥಿಗಳು ಅನಿಸಿಕೆ ಹಂಚಿಕೊಂಡರು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಸಹಾಯಕ ನಿರ್ದೇಶಕ ಪ್ರಭಾಕರ ಹಾದಿಮನಿ, ಇತರರು ಇದ್ದರು.
ಚೇತನ ಶೆಟ್ಟಿ ಸ್ವಾಗತಿಸಿದರು. ಅನುರಾಧಾ ಮಳಗಿ ಹಾಗೂ ಫಕೀರೇಶ ಅಗಡಿ ನಿರೂಪಿಸಿದರು.