

ಎಚ್.ಡಿ.ಕೋಟೆ: ವಿಶ್ವದಲ್ಲೇ ಶ್ರೇಷ್ಠವಾದ ಇಲಾಖೆಯಿದ್ದರೆ ಅದು ಶಿಕ್ಷಣ ಇಲಾಖೆ. ನಾವು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಶಿಕ್ಷಕರು ಕಾರಣ ಎಂದು ಶಾಸಕ ಅನಿಲ್ ಕುಮಾರ್ ತಿಳಿಸಿದರು.
ಪಟ್ಟಣದ ಕನಕ ಭವನದಲ್ಲಿ ಶಿಕ್ಷಣ ಇಲಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಗುರು ಇಲ್ಲದಿದ್ದರೆ ಯಾವುದೇ ಶಿಕ್ಷಣವಿಲ್ಲ. ಶಿಕ್ಷಕರಿಗೆ ಸಿಗುವ ಗೌರವ ಬೇರೆ ವೃತ್ತಿಯಲ್ಲಿ ಸಿಗುವುದಿಲ್ಲ ಎಂದರು.
ತಾಲೂಕಿನಲ್ಲಿ ಹಿಂದಿ ಮತ್ತು ಇಂಗ್ಲಿಷ್ ಶಿಕ್ಷಕರು ತೀರಾ ಕಡಿಮೆಯಿದ್ದಾರೆ. ಹಾಗಾಗಿ ಶಿಕ್ಷಕರನ್ನು ನೇಮಿಸಲು ಕ್ರಮ ವಹಿಸಲಾಗುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕನ್ನಡದ ಬಗ್ಗೆ ಅಭಿಮಾನವಿಟ್ಟುಕೊಂಡು ಮಕ್ಕಳಿಗೆ ಕಲಿಸುವ ಮೂಲಕ ಅಭಿಮಾನ ಮೆರೆಯಬೇಕು. ತಾಲೂಕಿನಲ್ಲಿ ಇಂಗ್ಲಿಷ್ ಶಿಕ್ಷಕರು ಕಡಿಮೆ ಇದ್ದರೂ ಮಕ್ಕಳಿಗೆ ಕಲಿಸುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಸುತ್ತಿದ್ದು, ಹೆಮ್ಮೆಯ ವಿಚಾರ ಎಂದರು.
ತಾಲೂಕಿನಲ್ಲಿ ಗಣಿತ, ಇಂಗ್ಲಿಷ್, ವಿಜ್ಞಾನ ವಿಷಯದಲ್ಲಿ ಮಕ್ಕಳು ಕಲಿಕೆಯಲ್ಲಿ ಹಿಂದುಳಿದ ಕಾರಣ ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಿಂದುಳಿಯಲು ಕಾರಣವಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರಲು ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ತಾಲೂಕಿನಲ್ಲಿ ರೈತರು, ಬಡವರು, ಹಿಂದುಳಿದ ಸಮುದಾಯದ ಮಕ್ಕಳೇ ಹೆಚ್ಚು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದು ಇವರಿಗೆ ಉತ್ತಮ ಶಿಕ್ಷಣ ಕೊಟ್ಟರೆ ಮಾತ್ರ ದೇಶದಲ್ಲಿ ಉತ್ತಮ ಪ್ರಜೆಯಾಗಲು ಸಾಧ್ಯ. ಹಾಗಾಗಿ ಶಿಕ್ಷಕರು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.
ನಾನು ಶಾಸಕನಾಗಿ ಆಯ್ಕೆ ಆದ ನಂತರ ತಾಲೂಕಿನ ಅಭಿವೃದ್ಧಿ ಜತೆಗೆ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದೇನೆ. ಪ್ರತಿ ಅಧಿವೇಶನದಲ್ಲಿ ಹೆಚ್ಚು ಶಿಕ್ಷಣದ ಬಗ್ಗೆ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದರಿಂದ ಸರ್ಕಾರ ತಾಲೂಕಿಗೆ ಎಲ್ಲ ರೀತಿಯ ಆದ್ಯತೆ ನೀಡಿದೆ ಎಂದರು. ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ತಾಲೂಕಿಗೆ ಮೊದಲನೇ ಸ್ಥಾನಕ್ಕೆ ಬರಲು ಶಿಕ್ಷಕರು ಉತ್ತಮವಾಗಿ ಕೆಲಸ ಮಾಡಬೇಕು ಎಂದರು.
ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನಲ್ಲಿ ಯಾವುದೇ ಗ್ರಾಮದ ಶಾಲೆಯ ಛಾವಣಿ ಹೆಂಚಿನಿಂದ ಇರಬಾರದು. 3 ವರ್ಷಗಳೊಳಗೆ ಎಲ್ಲ ಗ್ರಾಮದಲ್ಲಿಯೂ ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು. ಶಿಕ್ಷಕರು ರಾಜಕಾರಣ ಮಾಡಿ. ಆದರೆ ಯಾರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪರವಾಗಿ ಕೆಲಸ ಮಾಡಿ ತಾಲೂಕಿನ ಅಭಿವೃದ್ಧಿಗೆ ಕೈಜೋಡಿಸಿ ಎಂದು ಸಲಹೆ ನೀಡಿದರು.
ಸಾಹಿತಿ ಹನೂರು ಚನ್ನಪ್ಪ ಮಾತನಾಡಿ, ಶಿಕ್ಷಕರು ಕಾಲಕ್ಕೆ ತಕ್ಕಂತೆ ಪರಿವರ್ತನೆ ಮಾಡಿಕೊಳ್ಳದಿದ್ದರೆ ಸೋಲು ಕಾಣಬೇಕಾಗುತ್ತದೆ. ಶಿಕ್ಷಣ ಇಲಾಖೆ ಬಹು ನಿರೀಕ್ಷೆ ಇಟ್ಟುಕೊಂಡಿರುವ ಇಲಾಖೆ. ಅದಕ್ಕೆ ನಿರಾಸೆ ಆಗಬಾರದು ಎಂದರು. ಶಿಕ್ಷಕರಾದವರು ಮಕ್ಕಳ ಮನಸ್ಸು ಅರ್ಥಮಾಡಿಕೊಂಡು ಅವರ ಮಟ್ಟಕ್ಕೆ ಇಳಿದು ಅವರಿಗೆ ವ್ಯಕ್ತಿತ್ವ ವಿಕಸನಗೊಳಿಸುವ ಕೆಲಸ ಮಾಡಬೇಕು. ಯಾವ ವ್ಯಕ್ತಿ ಪ್ರೀತಿ, ವಿಶ್ವಾಸ, ಅನುಕಂಪ ತೋರಿಸುತ್ತಾರೋ ಆ ವ್ಯಕ್ತಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತಿ ಶಿಕ್ಷಕರನ್ನು ಅಭಿನಂದಿಸಲಾಯಿತು. ಉತ್ತಮವಾಗಿ ಕೆಲಸ ನಿರ್ವಹಿಸಿದ ಶಾಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಿಂದ ಕನಕ ಭವನದವರೆಗೆ ಡಾ.ಸರ್ವಪಲ್ಲಿ ರಾಧಕೃಷ್ಣನ್ ಮತ್ತು ಮಾತೆ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ನಡೆಸಲಾಯಿತು.
ಪುರಸಭೆ ಅಧ್ಯಕ್ಷೆ ಶಿವಮ್ಮ ಕೃಷ್ಣನಾಯಕ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮಧು ಕುಮಾರ್, ಸದಸ್ಯರಾದ ಎಚ್.ಸಿ.ನರಸಿಂಹಮೂರ್ತಿ, ಪ್ರೇಮ್, ನಂಜಪ್ಪ, ಸುಹಾಸಿನಿ, ಕವಿತಾ ಬಿಇಒ ರಾಜು, ಜಿಪಂ ಮಾಜಿ ಸದಸ್ಯೆ ಭಾಗ್ಯಲಕ್ಷ್ಮೀ, ಸರಗೂರು ಪಟ್ಟಣ ಪಂಚಾಯಿತಿ ಸದಸ್ಯ ಶ್ರೀನಿವಾಸ್, ಪ್ರಕಾಶ್, ನಂಜಯ್ಯ, ನಾಗರಾಜು ಇತರರು ಇದ್ದರು.