

ಎನ್.ಆರ್.ಪುರ: ತಾಲೂಕಿನ ಕಸಬಾ ಹೋಬಳಿಯಲ್ಲಿ ಮಳೆಯಿಂದ ಹೆಚ್ಚು ಅನಾಹುತ ಸಂಭವಿಸಿದ್ದು, ಸಂತ್ರಸ್ತರಿಗೆ ಸರ್ಕಾರ ತಕ್ಷಣ ಸ್ಪಂದಿಸಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಶಾಸಕರಿಗೆ ಮನವಿ ಮಾಡುತ್ತೇನೆ ಎಂದು ಕೆಸಿಸಿಸಿ ಸದಸ್ಯ ಪಿ.ಆರ್.ಸದಾಶಿವ ಭರವಸೆ ನೀಡಿದರು.
ಭಾನುವಾರ ಮಳೆಯಿಂದ ಮನೆ ಹಾನಿಯಾಗಿದ್ದ ಕಡಹಿನಬೈಲು ಗ್ರಾಪಂ ಶೆಟ್ಟಿಕೊಪ್ಪ ಸಮೀಪದ ಭದ್ರಾ ಕಾಲನಿ ಬದ್ರುದ್ದೀನ್ ಅವರ ಮನೆಗೆ, ನವ ಗ್ರಾಮದ ದೇವೇಂದ್ರ ಅವರ ಮನೆಗೆ ಹಾಗೂ ಸುಗ್ಗಪ್ಪನ ಮಠದ ಮಂಜುನಾಥ್ ಅವರ ಮನೆಗಳಿಗೆ ಭೇಟಿ ನೀಡಿ ತುರ್ತು ಕಾರ್ಯ ಕೈಗೊಳ್ಳಲು ವೈಯಕ್ತಿಕವಾಗಿ ಆರ್ಥಿಕ ಸಹಾಯ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಸಬಾ ಹೋಬಳಿಯಲ್ಲಿ ಗಾಳಿಗೆ ಮರಗಳು ವಿದ್ಯುತ್ ಲೈನ್ ಬಿದ್ದು ವಿದ್ಯುತ್ ಇಲ್ಲದೆ ಹಲವು ಗ್ರಾಮಗಳು ಕತ್ತಲೆಯಲ್ಲಿವೆ. ಎನ್.ಆರ್.ಪುರ ತಾಲೂಕಿನಲ್ಲಿ ಪ್ರಕೃತಿ ವಿಕೋಪದಿಂದ ಆದ ಅನಾಹುತಗಳಿಗೆ ಸರ್ಕಾರಿಂದ ನೆರವು ಕೊಡಿಸಲು ಪ್ರಯತ್ನ ನಡೆಸುತ್ತೇನೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಎಸ್.ಡಿ.ರಾಜೇಂದ್ರ, ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಈಚಿಕೆರೆ ಸುಂದರೇಶ್, ಕಡಹಿನಬೈಲು ಗ್ರಾಪಂ ವ್ಯಾಪ್ತಿ ಕಾಂಗ್ರೆಸ್ ಅಧ್ಯಕ್ಷ ನಂದೀಶ್, ನಾಗಲಾಪುರ ಗ್ರಾಪಂ ಸದಸ್ಯ ಗಂಗಾಧರ, ಮುಖಂಡರಾದ ಅಬ್ದುಲ್ ರೆಹಮಾನ್, ಮೋಣು, ಸುಲೇಮಾನ್, ಹಮೀದ್, ಕುಮಾರ್ ಇದ್ದರು.