

ಸುಳ್ಯ: ಪ್ರಾಕೃತಿಕ ವಿಕೋಪದಿಂದ ಮನೆ ಹಾನಿ, ಕೊಟ್ಟಿಗೆ ಅಥವಾ ಬರೆ ಜರಿದರೆ ಸರ್ಕಾರದಿಂದ ಅನುದಾನ ಪಡೆದು ಪರಿಹಾರ ಒದಗಿಸುವ ಪ್ರಯತ್ನ ಮಾಡುತ್ತೇನೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಭರವಸೆಯಿತ್ತರು.
ಸುಳ್ಯ ತಾಲೂಕು ಪಂಚಾಯಿತಿಯಲ್ಲಿ ಮಂಗಳವಾರ ಪ್ರಾಕೃತಿಕ ವಿಕೋಪ ಕುರಿತು ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸಭೆಗೆ ಹಾನಿಯ ವಿವರ ನೀಡಿ ಸುಮಾರು 35 ಪ್ರಕರಣಗಳಲ್ಲಿ ಸುಮಾರು 7 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ ಎಂದರು.
ತಾಲೂಕಿನಲ್ಲಿ 62 ಶಾಲೆಗಳ ಕಟ್ಟಡದಲ್ಲಿ ಹಾನಿ ಕಂಡು ಬಂದಿದೆ. ಈ ಕುರಿತು ವರದಿ ನೀಡಲಾಗಿದೆ. ಆದರೆ ದೇರಾಜೆ, ಕಲ್ಮಡ್ಕ, ಗಟ್ಟಿಗಾರು ಶಾಲೆ ತೀರಾ ದುಃಸ್ಥಿತಿಯಲ್ಲಿದ್ದು, ಸದ್ಯಕ್ಕೆ ಮಕ್ಕಳನ್ನು ಅಲ್ಲಿಂದ ಬೇರೆಡೆ ಸ್ಥಳಾಂತರ ಮಾಡಿ ಪಾಠ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯು.ಕೆ. ಸಭೆಗೆ ಮಾಹಿತಿ ನೀಡಿದರು. ತಹಸೀಲ್ದಾರ್ ಮಂಜುನಾಥ್ ಜಿ. ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.
ಸುಳ್ಯ ಜಿ.ಪಂ ಇಂಜಿನಿಯರ್ ಮಣಿಕಂಠ, ಇಲಾಖೆಯಲ್ಲಿ ಇಂಜಿನಿಯರ್ ಇಲ್ಲದಿರುವ ಕುರಿತು ಸಮಸ್ಯೆ ಹೇಳಿಕೊಂಡರಲ್ಲದೆ, ಕೆಲಸದ ಒತ್ತಡದ ಕುರಿತು ಸಭೆಯಲ್ಲಿ ವಿವರ ನೀಡಿದರು. ಪಿಡಬ್ಲುೃಡಿ ಎ.ಇ.ಇ ಗೋಪಾಲ್ ಇಂಜಿನಿಯರ್‌ಗಳಿಲ್ಲದೆ ಕೆಲಸ ತಡವಾಗುತ್ತಿರುವ ಕುರಿತು ಪ್ರಸ್ತಾಪಿಸಿದರು.
ಯಾವುದೇ ಕಾರಣಕ್ಕೂ ಜನರು ಆತಂಕಪಡುವ ಅವಶ್ಯಕತೆ ಇಲ್ಲ. ಹಾನಿಯ ಕುರಿತಂತೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತ್ಯೇಕ ಪಟ್ಟಿ ಮಾಡಬೇಕು. ಎಲ್ಲೇ ಅವಘಡ ನಡೆದರೂ ಆ ವ್ಯಾಪ್ತಿಯ ಅಧಿಕಾರಿಗಳು ಭೇಟಿ ನೀಡಿ ಮನೆಯವರ ಜತೆ ಮಾತನಾಡಬೇಕು. ಅಧಿಕಾರಿಗಳು ಯಾರೂ ಬರಲೇ ಇಲ್ಲ ಎಂಬ ದೂರು ಬರಬಾರದು. ಭಾಗೀರಥಿ ಮುರುಳ್ಯ, ಸುಳ್ಯ ಶಾಸಕಿ
ಭಾಗೀರಥಿ ಮುರುಳ್ಯ, ಸುಳ್ಯ ಶಾಸಕಿ