ಪೂರ್ಣ ಪ್ರಮಾಣದ ದಾಖಲಾತಿಗೆ ಪ್ರಯತ್ನಿಸಿ

Try for full scale enrollment
ಯಂಕಂಚಿ ಮಣಿನಾಗರ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಬಿಇಒ ಕೇಶವ ಪೆಟ್ಲೂರ ಮಾತನಾಡಿದರು. ಎಂ.ಬಿ. ದೊಡ್ಡಪ್ಪನ್ನವರ, ಬಸಮ್ಮ ನರಸಾಪೂರ, ಬಸವರಾಜ ಹಳಗೇರಿ, ಎಸ್.ಪಿ. ಗೌಡರ, ಬಿ.ಕೆ. ಚಿಮಲ್, ಬಿ.ಟಿ. ಹಳ್ಳಿ, ವೈ.ಬಿ. ಚಲವಾದಿ, ಎಂ.ಸಿ. ನಾಲತವಾಡ ಮತ್ತಿತರರಿದ್ದಾರೆ.
Published on

ಬಾದಾಮಿ: ಕೆಜಿಬಿವಿ ಮತ್ತು ಕೆಕೆಜಿಬಿವಿ ವಸತಿ ಶಾಲೆ ಪ್ರಸಕ್ತ ಸಾಲಿನ ದಾಖಲಾತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಪೂರ್ಣ ಪ್ರಮಾಣದ ದಾಖಲಾತಿಗೆ ಎಲ್ಲ ಮೇಲ್ವಿಚಾರಣಾಧಿಕಾರಿಗಳು ಪ್ರಯತ್ನಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ಪೆಟ್ಲೂರ ತಿಳಿಸಿದರು.

ತಾಲೂಕಿನ ಯಂಕಂಚಿ ಮಣಿನಾಗರ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೆಜಿಬಿವಿ ದಾಖಲಾತಿಗಾಗಿ ತಾಲೂಕಾಮಟ್ಟದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನ ಯಂಕಂಚಿ-ಮಣಿನಾಗರ ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆ ಹಾಗೂ ನೀರಬೂದಿಹಾಳ ಗ್ರಾಮದ ಕರ್ನಾಟಕ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಗೆ 2025-26 ನೇ ಸಾಲಿನ ದಾಖಲಾತಿಗೆ ಮೊದಲ ಬಾರಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 6 ನೇ ತರಗತಿಗೆ 50 ಸೀಟುಗಳು ಲಭ್ಯವಿದ್ದು, ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ. ದೊಡ್ಡಪ್ಪನ್ನವರ ಮಾತನಾಡಿ, 11 ರಿಂದ 14 ವಯೋಮಾನದ ಶಾಲೆ ಬಿಟ್ಟ, ಶಾಲೆಗೆ ದಾಖಲಾಗದ, ಅಲ್ಪಸಂಖ್ಯಾತ ಹಾಗೂ ಅನಾಥ ವಿದ್ಯಾರ್ಥಿನಿಯರು ಮೇ 2 ರಿಂದ 20 ರೊಳಗೆ ಅಗತ್ಯ ದಾಖಲೆಗಳಾದ ಎಸ್‌ಎಟಿಎಸ್/ಪಿಇಎನ್ ಸಂಖ್ಯೆ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಬಿಪಿಎಲ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ವಿದ್ಯಾವಾಹಿನಿ ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ದಾಖಲೆಗಳನ್ನು ಸಂಬಂಧಿಸಿದ ಮುಖ್ಯಶಿಕ್ಷಕರಿಗೆ ತಲುಪಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮುಖ್ಯ ಶಿಕ್ಷಕಿ ಬಸಮ್ಮ ನರಸಾಪೂರ (ಮೊ:9449142409) ಅವರನ್ನು ಸಂಪರ್ಕಿಸಬೇಕು ಎಂದರು.

ಮುಖ್ಯಶಿಕ್ಷಕಿ ಬಸಮ್ಮ ನರಸಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜ ಹಳಗೇರಿ, ಶಿಕ್ಷಣ ಸಂಯೋಜಕರಾದ ಎಸ್.ಪಿ. ಗೌಡರ, ಬಿ.ಕೆ. ಚಿಮಲ್, ಬಿ.ಟಿ. ಹಳ್ಳಿ, ವೈ.ಬಿ. ಚಲವಾದಿ, ಎಂ.ಸಿ. ನಾಲತವಾಡ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಎಂ.ಎ. ಹದ್ಲಿ, ಜೆ.ಎ. ಶೇಖ್, ಬಿ.ಎ್. ಕುಂಬಾರ, ಕವಿತಾ ಚನ್ನಶೆಟ್ಟಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net