

ಮುದ್ದೇಬಿಹಾಳ: ಭಾರತ ದೇಶದ ಆಧ್ಯಾತ್ಮದ ಮಹತ್ವ ಅದ್ವಿತೀಯ. ನಮ್ಮ ಮಠಗಳು, ಶರಣರು, ವಚನ ಸಾಹಿತ್ಯ, ಭಗವದ್ಗೀತೆ, ಶರಣ ಸಾಹಿತ್ಯ, ಋಷಿ ಮುನಿಗಳ ಸಂದೇಶ ಭಾರತದ ಬಹುದೊಡ್ಡ ಆಸ್ತಿಗಳಾಗಿವೆ. ಇವುಗಳನ್ನು ಕಳ್ಳತನ ಮಾಡುವುದು ಸಾಧ್ಯವೇ ಇಲ್ಲ ಎಂದು ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.
ಇಲ್ಲಿನ ವಿಬಿಸಿ ಪ್ರೌಢಶಾಲೆ ಮೈದಾನದಲ್ಲಿರುವ ಶ್ರೀ ಸಿದ್ಧೇಶ್ವರ ಸ್ವಾಮೀಜಿ ವೇದಿಕೆಯಲ್ಲಿ ಧಾರವಾಡ ಜಿಲ್ಲೆ ಉಪ್ಪಿನ ಬೆಟಗೇರಿಯ ಮೂರುಸಾವಿರ ವಿರಕ್ತ ಮಠದ ಪೂಜ್ಯ ಕುಮಾರ ವಿರೂಪಾಕ್ಷ ಸ್ವಾಮೀಜಿಯವರು ನಡೆಸಿಕೊಡುತ್ತಿರುವ ಪ್ರವಚನದಲ್ಲಿ ಸೋಮವಾರ ರಾತ್ರಿ ನಡೆದ ಬಸವಣ್ಣನ ಕಲ್ಯಾಣೋತ್ಸವ, ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವರು ಮಾತನಾಡಿದರು.
ಭರತಖಂಡ ಹುಟ್ಟಿದಂದಿನಿಂದ ಇವತ್ತಿನವರೆಗೆ ಶರಣರಿಗೆ, ಪ್ರಾಮಾಣಿಕ ರೀತಿಯಲ್ಲಿ ನಡೆದಂಥ ವ್ಯಕ್ತಿಗಳಿಗೆ ಸಮಾಜದಲ್ಲಿ ಸೋಲು, ಕಷ್ಟ ಕಾಡುತ್ತಿರುತ್ತದೆ. ಆದರೆ ಸತ್ಯಕ್ಕೆ, ನ್ಯಾಯಕ್ಕೆ ಯಾವತ್ತಿಗೂ ಸೋಲಿಲ್ಲ. ಇದಕ್ಕೆ ಬಸವಣ್ಣನೇ ಸಾಕ್ಷಿ. ಬಸವಣ್ಣ ಒಂದು ಕಡೆ ಆಧ್ಯಾತ್ಮದ ಪ್ರತೀಕವಾದ ಲಿಂಗದಾರಿಯಾಗಿದ್ದರೆ ಮಗದೊಂದು ಕಡೆ ಸೊಂಟಕ್ಕೆ ಕತ್ತಿ ಸಿಕ್ಕಿಸಿಕೊಂಡ ಕ್ರಾಂತಿಕಾರಿಯಾಗಿ ಕಾಣುತ್ತಾನೆ. ಆದರೆ ಅವರು ಸದಾ ಆಧ್ಯಾತ್ಮದ ಕಡೆಗೆ ನಡೆದಿರುವುದರಿಂದ ಅನ್ಯಾಯ, ಅತ್ಯಾಚಾರ ಎದುರಿಸುವ ಕೆಲಸವನ್ನು ಆವತ್ತಿನ ಶರಣರು ಅಹಿಂಸೆಯಿಂದಲೇ ಎದುರಿಸುವ ಕೆಲಸವನ್ನು ಮಾಡಿದ್ದರು. ಹಾಗಾಗಿಯೇ ಶರಣರ ಕ್ರಾಂತಿಗೆ ಸೋಲಾಯಿತು. ಆದರೆ ಆವತ್ತು ಭೌತಿಕ ಸೋಲಾಗಿತ್ತೇ ಹೊರತು ವೈಚಾರಿಕತೆಗೆ, ನಂಬಿಕೆ ಆದರ್ಶಗಳಿಗೆ ಸೋಲಾಗಿರಲಿಲ್ಲ. ಶರಣರ ಆಲೋಚನೆಗಳಿಗೆ ಯಾವತ್ತೂ ಸೋಲಾಗುವುದಿಲ್ಲ ಎಂದರು.
ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ. ಅಸ್ಕಿ ಕೊಣ್ಣೂರ ಮಾತನಾಡಿ, ಮುದ್ದೇಬಿಹಾಳ ನಗರ ಸೌಹಾರ್ದತೆಯ ಸಂಕೇತವಾಗಿದ್ದು ಪುರಾಣ ಪ್ರವಚನ ಪಕ್ಷಾತೀತ, ಜಾತ್ಯಾತೀತ ಕಾರ್ಯಕ್ರಮವಾಗಿದೆ. ಇದರಲ್ಲಿ ಸಂಘಟಕರ ಶ್ರಮ ಎದ್ದು ಕಾಣುತ್ತದೆ ಎಂದು ಶ್ಲಾಘಿಸಿದರು.
ವೈ.ಎಚ್. ವಿಜಯಕರ್ ಮಾತನಾಡಿದರು. ಬಿಜೆಪಿ ಧುರೀಣ ಎಂ.ಎಸ್. ಪಾಟೀಲ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಬ್ದುಲ್ ಗಫೂರಸಾಬ ಮಕಾನದಾರ, ಎಪಿಎಂಸಿ ವರ್ತಕ ಎಚ್.ಟಿ. ಬಿರಾದಾರ, ವೀವಿವ ಸಂಘದ ಕಾರ್ಯಾಧ್ಯಕ್ಷ ಎಂ.ಎಸ್. ನಾವದಗಿ ವಕೀಲರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಪುರಸಭೆ ಸದಸ್ಯ ಮಹಿಬೂಬ ಗೊಳಸಂಗಿ, ಡಾ. ವಿಜಯಕುಮಾರ ನಾಯಕ ವೇದಿಕೆಯಲ್ಲಿದ್ದರು.
ರತ್ನಮ್ಮ ಬಸನಗೌಡ ದೇವೂರ ದಂಪತಿಯ ಪುತ್ರ ಸಂಜೀವಕುಮಾರ ಮತ್ತು ಅನ್ನಮಕ್ಕಗೌಡತಿ ಶಂಕರಗೌಡ ಪಾಟೀಲರ ಪುತ್ರಿ ಗುರುಬಾಯಿ ಅವರ ವಿವಾಹದ ನಿಮಿತ್ತ ವೇದಿಕೆಗೆ ಕರೆಸಿ ಕಲ್ಯಾಣೋತ್ಸವ ನಡೆಸಿ ಸರ್ವರಿಂದಲೂ ಸಾಮೂಹಿಕವಾಗಿ ಅಕ್ಷತೆ ಹಾಕಿಸಿ ಸ್ವಾಮೀಜಿಯವರು ಹಾರೈಸಿದರು. ಕಿರುತೆರೆಯ ಹಾಸ್ಯ ಕಲಾವಿದ ಶ್ರೀಶೈಲ ಹೂಗಾರ ಕಾರ್ಯಕ್ರಮ ನಿರ್ವಹಿಸಿದರು.
ನಡಹಳ್ಳಿಯವರು ಈ ನಗರವನ್ನು ಮುದ್ದುಮುದ್ದಾಗಿ ಸಿಂಗರಿಸಿದ್ದಾರೆ. ಜೀವನದಲ್ಲಿ ಲಕ್ಷ್ಮೀಯನ್ನು (ಸಂಪತ್ತು) ಒಪ್ಪಿಕೊಳ್ಳಬೇಕು. ಸರಸ್ವತಿಯನ್ನು (ವಿದ್ಯೆ) ಅಪ್ಪಿಕೊಳ್ಳಬೇಕು. ಇವರಿಬ್ಬರೂ ಕರೆಯದೆ ಬರುವ ಅತಿಥಿಗಳಿದ್ದಂತೆ. ಲಕ್ಷ್ಮೀ ನಮ್ಮಿಂದ ದೂರಾಗಬಹುದು ಆದರೆ ಸರಸ್ವತಿ ಎಂದಿಗೂ ದೂರಾಗುವುದಿಲ್ಲ. ಕುಮಾರ ವಿರೂಪಾಕ್ಷ ಸ್ವಾಮೀಜಿ, ಪ್ರಚನಕಾರರು, ಉಪ್ಪಿನಬೆಟಗೇರಿ ಮೂರು ಸಾವಿರ ವಿರಕ್ತ ಮಠ, ಧಾರವಾಡ.
ಜನ ಜಾಗೃತರಾಗಬೇಕು. ನಮ್ಮ ಕರ್ತವ್ಯ ಪ್ರಾಮಾಣಿಕವಾಗಿ ಮಾಡಬೇಕು. ಬಹಳ ಅದ್ಬುತ ಸಂದೇಶ ಕೊಡುತ್ತಿರುವ ಪೂಜ್ಯರು ಒಳ್ಳೆ ಕೆಲಸ ಮಾಡಿದ್ದೀರಿ ಎಂದು ಹರಸಿದ್ದಾರೆ. ಈಗ ಅಭಿವೃದ್ಧಿ ಕೆಲಸ ನಿಂತಿದೆ. ಐದು ವರ್ಷಗಳ ನಂತರ ಮತ್ತೆ ಅಭಿವೃದ್ಧಿ ಕೆಲಸ ಮುಂದುವರಿಸ್ತೇನೆ. ಮುಂದಿನ ದಿನಗಳಲ್ಲಿ ನಾವು ನೀವು ಸೇರಿ ನಗರವನ್ನು ಇನ್ನೂ ಹೆಚ್ಚು ಅಭಿವೃದ್ಧಿಯತ್ತ ಕೊಂಡೊಯ್ಯೋಣ. ಎ.ಎಸ್. ಪಾಟೀಲ ನಡಹಳ್ಳಿ, ಮಾಜಿ ಶಾಸಕರು, ಉದ್ಯಮಿ.