

ಅಥಣಿ ಗ್ರಾಮೀಣ: ಕರ್ನಾಟಕದಲ್ಲೇ ಅತಿದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಪಂ ಹಾಲಿ ಅಧ್ಯಕ್ಷ ಸಂತೋಷ ಕಕಮರಿ ವಿರುದ್ಧ ಅವಿಶ್ವಾಸ ಗೊತ್ತುವಳಿಯಲ್ಲಿ ಶಾಸಕ ಲಕ್ಷ್ಮಣ ಸವದಿ ಬಣದ ಸದಸ್ಯರು ಗೆಲುವು ಸಾಧಿಸಿದರು.
ಒಟ್ಟು 56 ಸದಸ್ಯರನ್ನೊಳಗೊಂಡ ಸಂಕೋನಟ್ಟಿ ಗ್ರಾಪಂ ಅಧ್ಯಕ್ಷರಾಗಿ ಶಾಸಕ ರಮೇಶ ಜಾರಕಿಹೊಳಿ ಬಣದ ಸಂತೋಷ ಕಕಮರಿ ಕಳೆದ ಒಂದುವರೆ ವರ್ಷದಿಂದ ಆಡಳಿತ ನಡೆಸುತ್ತಿದ್ದರು. ಅವರ ವಿರುದ್ಧ ಗ್ರಾಪಂನ 35 ಸದಸ್ಯರು ಡಿ.5ರಂದು ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ ಅವರಿಗೆ ಅವಿಶ್ವಾಸ ಗೊತ್ತುವಳಿಗೆ ಅರ್ಜಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ನೋಟಿಸ್ ಜಾರಿಯಾಗಿ, ಡಿ.31ರಂದು ಗ್ರಾಪಂ ಕಾರ್ಯಾಲಯದಲ್ಲಿ ಸಭೆ ನಡೆಯಿತು. 56 ಸದಸ್ಯರ ಪೈಕಿ 42 ಸದಸ್ಯರು ಹಾಜರಾಗಿ ಅವಿಶ್ವಾಸ ಗೊತ್ತುವಳಿಗೆ ಬೆಂಬಲ ವ್ಯಕ್ತಪಡಿಸಿದರು. 14 ಸದಸ್ಯರು ಗೈರಾಗಿದ್ದರು. ಕಂದಾಯ ನಿರೀಕ್ಷಕ ಶಿವಾನಂದ ಮೆಣಸಂಗಿ, ಗ್ರಾಮಾಡಳಿತಾಧಿಕಾರಿ ಮಲ್ಲಿಕಾರ್ಜುನ ಮಿರ್ಜಿ, ಪಿಡಿಓ ಬೀರಪ್ಪ ಕಡಗಂಚಿ, ಪಿಎಸ್‌ಐಗಳಾದ ಗಿರಿಮಲ್ಲಪ್ಪ ಉಪ್ಪಾರ, ಕುಮಾರ ಹಾಡಕರ ಇತರರಿದ್ದರು.