ವಿಶ್ವಾಸವೇ ಬ್ಯಾಂಕ್ ಅಭಿವೃದ್ಧಿಯ ಮೂಲಮಂತ್ರ

sdp
Published on

ಸಿದ್ದಾಪುರ: ಗ್ರಾಹಕರು ಹಾಗೂ ಬ್ಯಾಂಕ್‌ಗಳ ನಡುವಿನ ಸೇತುವೆಯೇ ವಿಶ್ವಾಸ. ವಿಶ್ವಾಸ ಕಳೆದುಕೊಂಡರೆ ಪ್ರಗತಿ ಅಸಾಧ್ಯ ಹಾಗೂ ವ್ಯವಹಾರ ಡೋಲಾಯಮಾನ ಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಶ್ರೀ ಸಂಸ್ಥಾನ ಗೋೀಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ನುಡಿದರು.

ಪಟ್ಟಣದಲ್ಲಿ ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್‌ನ 22ನೇ ನೂತನ ಶಾಖೆ ಹಾಗೂ ಸ್ವಂತ ಕಟ್ಟಡ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು. 119ವರ್ಷಗಳ ಇತಿಹಾಸ ಹೊಂದಿರುವ ಬ್ಯಾಂಕ್ ಗ್ರಾಹಕರ ಆಶೋತ್ತರಗಳನ್ನು ಈಡೇರಿಸುತ್ತಿರುವುದು ಸ್ವಾಗತಾರ್ಹ. ಯಾವುದೇ ಆರ್ಥಿಕ ಸಂಸ್ಥೆ ಉತ್ತಮವಾಗಿ ನಡೆಯಬೇಕಾದರೆ ಉತ್ತಮ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ನಗುಮೊಗದ ಸೇವೆ ಹಾಗೂ ವಾಕ್ ಚಾತುರ್ಯ ಮುಖ್ಯವಾಗಿದೆ ಎಂದರು.

ಪುಷ್ಯ ನಕ್ಷತ್ರದದಿನ ಬ್ಯಾಂಕ್ ಶಾಖೆ ಹಾಗೂ ಸ್ವಂತ ಕಟ್ಟಡ ಉದ್ಘಾಟನೆ ಆಗಿರುವುದು ವಿಜಯದ ಸಂಕೇತವಾಗಿದೆ. ಈ ವಿಜಯ ರಾಜ್ಯದಾದ್ಯಂತ ಸಾಗಬೇಕು ಎಂದು ಶ್ರೀಗಳು ಆಶೀರ್ವದಿಸಿದರು.

ಬ್ಯಾಂಕ್‌ನ ಅಧ್ಯಕ್ಷ ಜಯದೇವ ಯು. ನಿಲೇಕಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಬ್ಯಾಂಕ್ 120ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಬ್ಯಾಂಕಿನ ಶಾಖೆಗಳನ್ನು ಪ್ರಾರಂಭಿಸಿ ಉತ್ತಮ ಸೇವೆ ಮಾಡಬೇಕೆನ್ನುವ ಉದ್ದೇಶವಿದೆ ಎಂದರು.

ಬ್ಯಾಂಕಿನ ಉಪಾಧ್ಯಕ್ಷ ಸಂತೋಷ ಎಸ್.ಪಂಡಿತ ಹಾಗೂ ನಿರ್ದೇಶಕ ಮಂಡಳಿಯ ಎಲ್ಲ ಸದಸ್ಯರು, ಮುಖ್ಯಕಾರ್ಯನಿರ್ವಹಣಾಧಿಕಾರಿ ಆರತಿ ಎಸ್. ಶೆಟ್ಟರ್, ಹಿರಿಯ ಅಧಿಕಾರಿಗಳು, ಶಾಖಾ ವ್ಯವಸ್ಥಾಪಕರು, ಸಿಬ್ಬಂದಿ ಇದ್ದರು. ನಿರ್ದೇಶಕ ಪ್ರೊ. ಕೆ.ಎನ್. ಹೊಸಮನಿ ಕಾರ್ಯಕ್ರಮ ನಿರ್ವಹಿಸಿದರು.

ಉತ್ತಮ ವ್ಯವಹಾರದಿಂದ ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಈಗಾಗಲೇ ರಾಜ್ಯದ ಹಲವೆಡೆ ಶಾಖೆಗಳನ್ನು ತೆರೆದಿದೆ. ಮುಂದಿನ ದಿನದಲ್ಲಿ ಹೊರರಾಜ್ಯದಲ್ಲಿಯೂ ಶಾಖೆಯನ್ನು ತೆರೆಯುವಂತಾಗಲಿ. ಅದರಲ್ಲಿಯೂ ಮುಖ್ಯವಾಗಿ ಗೋವಾ ರಾಜ್ಯದಲ್ಲಿ ಪ್ರಥಮ ಅಂತರ್ ರಾಜ್ಯ ಶಾಖೆಯನ್ನು ತೆರೆಯುವುದಕ್ಕೆ ಮುಂದಾಗಲಿ. ಅದಕ್ಕೆ ನಮ್ಮ ಆಶೀರ್ವಾದ ಇದೆ. ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net