ಚಾಲಕನಿಲ್ಲದೆ ಒಂದು ಕಿ.ಮೀವರೆಗೆ ಹಿಮ್ಮುಖ ಚಲಿಸಿದ ಕಂಟೈನರ್ ಲಾರಿ!

ULL.APR-20-2, CONTAINER ACCIDENT
Published on

ಉಳ್ಳಾಲ: ರೆಫ್ರಿಜರೇಟರ್‌ಗಳನ್ನು ಸಾಗಿಸುತ್ತಿದ್ದ ಕಂಟೈನರ್ ಲಾರಿಯನ್ನು ತಲಪಾಡಿ ಟೋಲ್‌ಗೇಟ್ ಬಳಿ ನಿಲ್ಲಿಸಿ ಚಾಲಕ ಚಹಾ ಕುಡಿಯಲು ಹೋಗಿದ್ದ ಸಂದರ್ಭ ಲಾರಿ ಏಕಾಏಕಿ ಹಿಮ್ಮುಖವಾಗಿ ಚಲಿಸಿ ಆವಾಂತರ ಸೃಷ್ಟಿಸಿದೆ.

ದೆಹಲಿಯಿಂದ ಕೊಚ್ಚಿಗೆ ರೆಫ್ರಿಜರೇಟರ್ ಸಾಗಿಸುತ್ತಿದ್ದ ಕಂಟೈನರ್ ಲಾರಿಯನ್ನು ಚಾಲಕ ಜೈವೀರ್ ಸಿಂಗ್(60) ಮಂಗಳವಾರ ರಾತ್ರಿ 9:30ಕ್ಕೆ ತಲಪಾಡಿ ಟೋಲ್‌ಗೇಟ್ ಮುಂಭಾಗ ನಿಲ್ಲಿಸಿ ಚಹಾ ಕುಡಿಯಲೆಂದು ಹೋಗಿದ್ದರು. ಈ ಸಂದರ್ಭ ಲಾರಿ ಇಳಿಜಾರು ರಸ್ತೆಯಲ್ಲಿ ಹಿಮ್ಮುಖವಾಗಿ ಚಲಿಸತೊಡಗಿದೆ. ಚಾಲಕ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಒಂದು ಕಿ.ಮೀ.ವರೆಗೆ ಸಾಗಿದ್ದ ಲಾರಿ, ಅದಾಗಲೇ ರಿಕ್ಷಾ ಮತ್ತು ಬೈಕ್‌ವೊಂದಕ್ಕೆ ತಾಗಿ ಮುಂದೆ ಸಾಗಿದೆ. ಟೋಲ್‌ಗೇಟ್‌ನಲ್ಲಿ ಅಳವಡಿಸಲಾಗಿದ್ದ ಸೆನ್ಸಾರ್ ಕಂಬ, ಸೆಕ್ಯುರಿಟಿ ಕುರ್ಚಿ ಹಾಗೂ ತಡೆಗಲ್ಲಿಗೆ ಡಿಕ್ಕಿ ಹೊಡೆದು ನಿಂತಿದೆ.

ಲಾರಿ ಹಿಮ್ಮುಖವಾಗಿ ಸಂಚರಿಸುತ್ತಿದ್ದಾಗಲೇ ಟೋಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೆಕ್ಯುರಿಟಿ ಸತೀಶ್, ಅಶೋಕ್ ಮತ್ತು ದ್ವಿಚಕ್ರ ವಾಹನದಲ್ಲಿ ಕೇರಳದತ್ತ ತೆರಳುತ್ತಿದ್ದ ದಂಪತಿ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಚಹಾ ಕುಡಿಯಲು ಹೋಗುವಾಗ ಹ್ಯಾಂಡ್‌ಬ್ರೇಕ್ ಹಾಕಿ ಹೋಗಿದ್ದು, ಆದರೆ ಕೈಕೊಟ್ಟ ಪರಿಣಾಮ ಲಾರಿ ಹಿಂಬದಿ ಚಲಿಸಿರುವುದಾಗಿ ಚಾಲಕ ಜೈವೀರ್ ಸಿಂಗ್ ತಿಳಿಸಿದ್ದಾರೆ. ರಂಜಾನ್ ತಿಂಗಳಾಗಿದ್ದರಿಂದ ರಾತ್ರಿ ವೇಳೆ ವಾಹನ ಸಂಚಾರ ಕಡಿಮೆಯಿದ್ದ ಕಾರಣ ಭಾರಿ ಅನಾಹುತ ತಪ್ಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net