

ಅಥಣಿ ಗ್ರಾಮೀಣ: ಪುರಾಣ, ಪ್ರವಚನ ಏರ್ಪಡಿಸುವುದರಿಂದ ಜನರಲ್ಲಿ ಪ್ರೀತಿ, ವಿಶ್ವಾಸ ಹೆಚ್ಚಾಗಿ ಸಾಮರಸ್ಯ ಮೂಡುತ್ತದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅಥಣಿ ತಾಲೂಕಿನ ಅನಂತಪುರ ಗ್ರಾಮದಲ್ಲಿ ಶ್ರಾವಣ ಮಾಸ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಪ್ರವಚನ ಸಮಾರೋಪದಲ್ಲಿ ಮಾತನಾಡಿ, ಉಮರಾಣಿಯ ಲಿಂಗಮ್ಮ, ದಾನ, ಧರ್ಮ ಮಾಡಿದ್ದರಿಂದ ದಾನಮ್ಮಳಾದಳು. ಮನುಷ್ಯ ಪರೋಪಕಾರದಿಂದ ದೊಡ್ಡವನಾಗುವನೇ ವಿನಾ ಕೂಡಿಟ್ಟ ಹಣ, ಬಂಗಾರದಿಂದಲ್ಲ. ಹೃದಯ ಶ್ರೀಮಂತಿಕೆ ಇರದವನ ಸಂಪತ್ತು ವ್ಯರ್ಥ. ಅಗತ್ಯಕ್ಕಿಂತ ಹೆಚ್ಚಾಗಿರುವುದೆಲ್ಲವೂ ಶಿವನಿಗೆ ಸೇರಿದ್ದು ಎಂಬ ಭಾವವಿರಬೇಕು. ಇಲ್ಲಿಯ ಜನರ ಸಹಾಯ ಗುಣ ಮರೆಯುವಂತಿಲ್ಲ. ಸಮೃದ್ಧಿ ನೆಲೆಸಿ ಜನರು ಆನಂದದ ಜೀವನ ಸಾಗಿಸುವಂತಾಗಲಿ. ಪುರಾಣ, ಪ್ರವಚನದ ಏರ್ಪಡಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಹರಿಸಿದರು.
ಗುಡ್ಡಾಪುರದ ಗುರುಪಾದ ಶಿವಾಚಾರ್ಯರು ಮಾತನಾಡಿ, ಸಂಸಾರದಲ್ಲಿ ಕಷ್ಟ, ದುಃಖ, ದಾರಿದ್ರ್ಯ ಬಂದಾಗ ಎದುರಿಸಿ ನಿಲ್ಲಬೇಕು. ವಿಚಲಿತನಾಗದೇ ತಿಳಿದು ನಡೆದರೆ ಸಂಸಾರ ಸರಳವಾಗುವುದು ಎಂದರು.
ಗುಣದಾಳದ ಡಾ.ವಿವೇಕಾನಂದ ದೇವರು ಆಶೀರ್ವಚನ ನೀಡಿ, ಮನಸ್ಸಿನ ಶುದ್ಧೀಕರಣಕ್ಕೆ ಶರಣರು, ಸಂತರು, ಸತ್ಪುರುಷರ ಮಾತು ಕೇಳಬೇಕು ಎಂದರು.
ಸಂಕದ ಡಾ.ವಿವೇಕ ದೇವರು, ತೆಲಸಂಗದ ವೀರೇಶ ದೇವರು ಆಶೀರ್ವಚನ ನೀಡಿದರು. ಶಿವಾನಂದ ಪಾಟೀಲ, ರುದ್ರಗೌಡ ಪಾಟೀಲ, ರೇವಣಸಿದ್ದ ನಕಾತೆ, ಸಂಗಪ್ಪ ಜಾಬಗೌಡ, ಅಪ್ಪಾಸಾಬ ಕರಣಿ, ಸಿದ್ದರಾಮ ಮೇತ್ರಿ, ಮೃತ್ಯುಂಜಯ ಹಿರೇಮಠ, ಮಹೇಶ ಹಲ್ಯಾಳೆ, ಬಾಳು ಜಾಧವ, ರಾಹುಲ ಮಹಾಜನ, ದಾದಾಸಾಬ ಶಿಂಧೆ, ಮಲ್ಲೇಶ ಮೇತ್ರಿ, ಸೋಮನಿಂಗ ಮಠಪತಿ ಇತರರಿದ್ದರು.