

ಮಡಿಕೇರಿ: ಶಿಕ್ಷಣದ ಗುರಿ ಕೇವಲ ಯಶಸ್ಸನ್ನು ಸಾಧಿಸುವುದಲ್ಲ. ಜೀವನದಲ್ಲಿ ಎದುರಾಗುವ ಸೋಲುಗಳನ್ನು ಧೈರ್ಯದಿಂದ ಎದುರಿಸುವುದನ್ನು ಕಲಿಸುವುದೂ ಶಿಕ್ಷಣದ ಧ್ಯೇಯವಾಗಿದೆ ಎಂದು ಹಿರಿಯ ವಕೀಲ ಎಂ.ಎಂ.ನಿರಂಜನ್ ಹೇಳಿದರು.
ನಗರದ ಕೊಡಗು ವಿದ್ಯಾಲಯದಲ್ಲಿ ಬುಧವಾರ ಆಯೋಜಿಸಲಾಗಿದ್ದ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳನ್ನು ಕೇವಲ ಅಂಕಗಳಿಸುವ ಯಂತ್ರಗಳನ್ನಾಗಿ ಮಾಡದೆ ಮೌಲ್ಯಗಳನ್ನು ಮೈಗೂಡಿಸಿಕೊಂಡ ಸಹಾನುಭೂತಿಯುಳ್ಳ ಮನುಷ್ಯರನ್ನಾಗಿ ರೂಪಿಸುವುದು ಪಾಲಕರು ಮತ್ತು ಶಿಕ್ಷಕರ ಪ್ರಮುಖ ಕರ್ತವ್ಯ ಎಂದು ಹೇಳಿದರು.
ಹಿಂದಿನ ದಿನಗಳಲ್ಲಿ ಅಪಘಾತ ಸಂಭವಿಸಿದಾಗ ತತ್ ಕ್ಷಣ ಜನರು ಸಹಾಯ ಮಾಡಲು ಧಾವಿಸುತ್ತಿದ್ದರು. ಆದರೆ, ಇಂದು ಘಟನೆ ನಡೆದ ಕೂಡಲೇ ಮೊಬೈಲ್ ತೆಗೆದು ವಿಡಿಯೋ ಮಾಡುವ ಮನಸ್ಥಿತಿ ಹೆಚ್ಚಾಗಿದೆ. ಕಾನೂನಿನ ಭಯ ಕಡಿಮೆಯಾಗುತ್ತಿರುವುದು ಈ ರೀತಿಯ ಅಮಾನವೀಯ ವರ್ತನೆಗೆ ಕಾರಣ ಎಂದು ವಿಷಾದಿಸಿದರು.
ಮೊಬೈಲ್ ಫೋನ್‌ಗಳ ಅತಿಯಾದ ಬಳಕೆಯ ಬಗ್ಗೆ ಎಚ್ಚರಿಸಿದ ಅವರು, ಮೊಬೈಲ್ ಫೋನ್ ಯುವಜನರ ಮತ್ತು ಮಕ್ಕಳ ಕೈಯಲ್ಲಿರುವ ಬಾಂಬ್‌ನಂತೆ ಆಗಿದೆ. ಅದು ನಮ್ಮ ಕುಟುಂಬ ಸಂಬಂಧಗಳನ್ನು ಹಾಳುಮಾಡುತ್ತಿದೆ. ಹಿಂದಿನ ದಿನಗಳಲ್ಲಿ ರಜಾ ಸಿಕ್ಕಿದಾಗ ಮಕ್ಕಳು ಅಜ್ಜಿ-ತಾತನ ಮನೆಗೆ ಹೋಗಿ ಸಂಭ್ರಮಿಸುತ್ತಿದ್ದರು. ಆದರೆ ಇಂದು, ಕುಟುಂಬದ ಪ್ರತಿಯೊಬ್ಬರೂ ತಮ್ಮ ತಮ್ಮ ಫೋನ್‌ಗಳ ಬಳಕೆಯಿಂದ ವಾಟ್ಸಾಪ್ ಸಂದೇಶಗಳ ಮೂಲಕವೇ ಸಂವಹನ ನಡೆಸುವಂತಾಗಿದೆ. ಇದು ವಾಸ್ತವ ಮತ್ತು ತಿಳುವಳಿಕೆಯ ಕೊರತೆಗೆ ಕಾರಣವಾಗಿದೆ ಎಂದು ಹೇಳಿದರು.
ಯಶಸ್ಸು ಮತ್ತು ಬೆಳವಣಿಗೆಯು ಯಾವಾಗಲೂ ವಿನಮ್ರತೆ, ಮತ್ತು ದೃಢನಿರ್ಧಾರದಿಂದ ಕೂಡಿರಬೇಕು. ಸ್ಪಷ್ಟವಾದ ಗುರಿ ಮತ್ತು ಕನಸನ್ನು ಇಟ್ಟುಕೊಂಡು ಶ್ರಮಿಸಿ ಎಂದು ಮಕ್ಕಳಿಗೆ ಹಿತವಚನ ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಕೆ.ಎಸ್.ಸುಮಿತ್ರ, ಆಡಳಿತ ನಿರ್ವಹಣಾ ಅಧಿಕಾರಿ ಪಿ.ರವಿ, ಬೋಧಕ ಬೋಧಕೇತರ ಸಿಬ್ಬಂದಿ ವರ್ಗ, ಪಾಲಕರು ಪಾಲ್ಗೊಂಡಿದ್ದರು. ನೂತನವಾಗಿ ಆಯ್ಕೆಯಾದ ಶಾಲಾ ನಾಯಕರಿಗೆ ಇದೇ ಸಂದರ್ಭ ಪ್ರಮಾಣ ವಚನ ಬೋಧಿಸಿ, ಅವರಿಗೆ ಜವಾಬ್ದಾರಿಗಳನ್ನು ಹಸ್ತಾಂತರಿಸಲಾಯಿತು.