

ಮಂಡ್ಯ: ಶೀಘ್ರ ಕ್ಷಯ ರೋಗ ಪತ್ತೆ ಮಾಡುವ ಟ್ರೂ ನಾಟ್ ಯಂತ್ರವನ್ನು ನಗರದ ಕ್ಯಾತುಂಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಾಸಕ ರವಿಕುಮಾರ್ ಗಣಿಗ ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಜನರಿಂದ ಕಫದ ಮಾದರಿ ಸಂಗ್ರಹಿಸಿ ತಂದು ಈ ಯಂತ್ರದ ಮೂಲಕ ಕ್ಷಯ ರೋಗವನ್ನು ಶೀಘ್ರದಲ್ಲಿ ಪತ್ತೆ ಮಾಡಬಹುದು. ಒಂದು ವೇಳೆ ಕ್ಷಯ ರೋಗ ಇದ್ದಲ್ಲಿ ಶೀಘ್ರದಲ್ಲಿ ಚಿಕಿತ್ಸೆ ನೀಡಬಹುದು. ಸಾರ್ವಜನಿಕರಿಗೆ ಈ ಯಂತ್ರದಿಂದ ಹೆಚ್ಚಿನ ಉಪಯೋಗವಾಗಲಿದೆ. ಅದೇ ರೀತಿ ಕ್ಷಯ ಮುಕ್ತ ಜಿಲ್ಲೆ ಮಾಡಲಿದ್ದೇವೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಮಾತನಾಡಿ, ಕ್ಷಯ ರೋಗ ಗಾಳಿಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಕೆಮ್ಮು, ತೂಕ ಕಡಿಮೆಯಾಗುವುದು, ಊಟ ಸೇವಿಸಲಾಗದಿರುವುದು, ಸಂಜೆ ಸಮಯದಲ್ಲಿ ದೇಹ ಬೆಚ್ಚಗೆ ಆಗುವುದು ರೋಗದ ಲಕ್ಷಣವಾಗಿದೆ. ಭಾರತ ಸರ್ಕಾರ 2025ಕ್ಕೆ ಕ್ಷಯ ಮುಕ್ತ ಮಾಡಲು ಗುರಿ ಹೊಂದಿದೆ. ಆ ಉದ್ದೇಶದಿಂದ ಟ್ರೂ ನಾಟ್ ಯಂತ್ರವನ್ನು ಎಲ್ಲ ಆರೋಗ್ಯ ಕೇಂದ್ರದಲ್ಲೂ ಅಳವಡಿಸಿ ಅತೀ ಶೀಘ್ರದಲ್ಲೇ ರೋಗಾಣು ಪರೀಕ್ಷೆ ಮಾಡಿ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ ಎಂದು ಹೇಳಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಆಶಾಲತಾ ಮಾತನಾಡಿ, ಜಿಲ್ಲೆಯಲ್ಲಿ 8 ಟ್ರೂ ನಾಟ್ ಯಂತ್ರ ಹಾಗೂ 3 ಸಿಬಿ ನಾಟ್ ಯಂತ್ರವಿದೆ. 110 ಬ್ಯಾಕ್ಟೀರಿಯಾ ಇದ್ದರೂ ಸಹ ಅತಿ ಶೀಘ್ರದಲ್ಲಿ ರೋಗಾಣು ಪತ್ತೆ ಹಚ್ಚಲು ಸಹಕಾರಿಯಾಗಿದೆ. ಜಿಲ್ಲಾದ್ಯಂತ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಪ್ರತಿ ಹಳ್ಳಿಗೆ ತೆರಳಿ ಒಂದು ವಾರಕ್ಕಿಂತ ಹೆಚ್ಚು ಕೆಮ್ಮು, ಅಸ್ತಮಾ ಹಾಗೂ ಧೂಮಪಾನ ಮಾಡುವವರ ಬಳಿ ಕಫದ ಮಾದರಿ ಪಡೆಯಲಿದ್ದಾರೆ. ನಂತರ ಈ ಯಂತ್ರದ ಮೂಲಕ ಪರೀಕ್ಷೆ ಮಾಡಲಾಗುವುದು. ಒಂದು ವೇಳೆ ರೋಗ ಲಕ್ಷಣಗಳು ಕಂಡು ಬಂದಲ್ಲಿ ಶೀಘ್ರದಲ್ಲಿ ಚಿಕಿತ್ಸೆ ನೀಡುತ್ತೇವೆ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಶಶಿಕಲಾ ಇತರರಿದ್ದರು.