

ಸಕಲೇಶಪುರ: ಯಾರ ನೆರವೂ ಇಲ್ಲದೆ ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳುತ್ತೇನೆ ಎಂಬ ಛಲ ಹಾಗೂ ಆತ್ಮವಿಶ್ವಾಸ ಹುಟ್ಟುಹಾಕುವುದೇ ನಿಜವಾದ ಶಿಕ್ಷಣ ಎಂದು ರೋಟರಿ 3182 ಜಿಲ್ಲಾ ಪ್ರಾಂತಪಾಲ ದೇವ್ ಆನಂದ್ ಹೇಳಿದರು.
ಇಲ್ಲಿನ ರೋಟರಿ ಆಂಗ್ಲ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ರೋಟರಿ ಡಿಸ್ಟ್ರಿಕ್ಟ್ ಇಂಟರ‌್ಯಾಕ್ಟ್ ಸಮಾವೇಶದಲ್ಲಿ ಮಾತನಾಡಿದ ಅವರು, ಮಕ್ಕಳು ಶಾಲೆಯಲ್ಲಿ ಕಲಿತು ಪದವಿ ಪಡೆಯುವ ಶಿಕ್ಷಣ ಬದುಕು ಕಟ್ಟಿಕೊಳ್ಳಲು, ಉದ್ಯೋಗ ಪಡೆಯಲು ಬೇಕು. ಆದರೆ ನಿತ್ಯ ಬದುಕಿನಲ್ಲಿ ನಮ್ಮ ಪಾತ್ರ ಏನು, ನಾವೇಗೆ ಬದುಕಬೇಕು, ಮೌಲ್ಯಗಳನ್ನು ಹೇಗೆ ರೂಢಿಸಿಕೊಳ್ಳಬೇಕು, ನಮ್ಮ ಸುತ್ತಲಿನ ಪರಿಸರವನ್ನು ಹೇಗೆ ಸಂರಕ್ಷಣೆ ಮಾಡಬೇಕು ಎಂಬುದನ್ನು ನಾವೇ ಕಲಿಯಬೇಕು. ಆರೋಗ್ಯ, ಶಿಕ್ಷಣ, ಪರಿಸರ, ಸಮಾಜ, ರಾಜಕೀಯ, ಆರ್ಥಿಕ, ಮಾಹಿತಿ ಮತ್ತು ತಂತ್ರಜ್ಞಾನ, ಬದುಕಿನ ಮೌಲ್ಯಗಳ ಕುರಿತು ಇಂತಹ ಸಮಾವೇಶ ಅರಿವು ಮೂಡಿಸಲಿದೆ ಎಂದರು.
ಕೌಡಹಳ್ಳಿ ಜೆಎಸ್‌ಎಸ್ ಬಿ.ಇಡಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಆರ್. ಮಂಜುನಾಥ್ ಮಾತನಾಡಿ, ಸಮಾಜದ ಎಲ್ಲ ವರ್ಗದವರಿಗೂ ಸ್ವಯಂ ಶಿಸ್ತು ಅಗತ್ಯ. ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಶಿಸ್ತು ಅವರ ಮುಂದಿನ ಬದುಕನ್ನು ಸುಂದರವಾಗಿರಿಸುತ್ತದೆ. ಶಿಸ್ತಿನ ಜತೆಗೆ ಮೌಲ್ಯಗಳನ್ನೂ ಅಳವಡಿಸಿಕೊಳ್ಳಬೇಕು ಎಂದರು.
ಅಂತಾರಾಷ್ಟ್ರೀಯ ಚಿಂತಕ ಎ.ಎಚ್. ಸಾಗರ್ ಮಾತನಾಡಿ, ನಕಾರಾತ್ಮಕ ಚಿಂತನೆಗಳು ಯಾವುದೇ ವ್ಯಕ್ತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದಿಲ್ಲ ಎಂದರು.
ಸಂಸ್ಥೆಯ ಡಿಸ್ಟ್ರಿಕ್ಟ್ ಯೂತ್ ಸರ್ವೀಸ್ ಡೈರೆಕ್ಟರ್ ಡಿ.ಎಸ್.ರವಿ, ಡಿಜಿಇ ಕೆ. ಪಾಲಾಕ್ಷ, ಡಿಜಿಎನ್ ಬಿ.ಎಂ.ಭಟ್, ಪಿಡಿಜಿ ರಾಜಾರಾಂ ಭಟ್, ಇಂಟರ‌್ಯಾಕ್ಟ್ ಕ್ಲಬ್ ಅಧ್ಯಕ್ಷ ಕೃಷ್ಣ ಕಾಂಚನ, ವಲಯ 8ರ ಸಹಾಯಕ ಪ್ರಾಂತಪಾಲ ಅರುಣ್ ರಕ್ಷಿದಿ, ಪ್ರತಿನಿಧಿ ಎಂ.ಎಸ್.ಪವಿತ್ರಾ, ವಲಯ ಇಂಟರ‌್ಯಾಕ್ಟ್ ಅಧ್ಯಕ್ಷ ಬಿ.ಎಸ್.ಯೋಗೇಶ್‌ಗೌಡ, ವಲಯ ದಂಡಾಧಿಕಾರಿ ಸಿ.ಇ.ಯಶ್ವಂತ್, ವೈ.ಡಿ.ಲೋಕೇಶ್, ಇಂಟರ‌್ಯಾಕ್ಟ್ ಸಮಾವೇಶ ಅಧ್ಯಕ್ಷ ಡಾ.ರವಿಕಿರಣ್, ಸಕಲೇಶಪುರ ರೋಟರಿ ಸಂಸ್ಥೆ ಅಧ್ಯಕ್ಷ ಎ.ಡಿ.ವೀರೇಂದ್ರಕುಮಾರ್ ಮಾತನಾಡಿದರು. ಕಾರ್ಯದರ್ಶಿ ರವಿರಾಜ್ ಪಿ. ಶೆಟ್ಟಿ ಇದ್ದರು.