ಸದ್ವಿಚಾರಗಳನ್ನು ಸಾರುವುದೇ ನಿಜವಾದ ಶಿಕ್ಷಣ

14 ಎಸ್ಕೆಪಿ 1b
ಶಿಕಾರಿಪುರದ ಶ್ರೀ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯನ್ನು ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು. ಡಾ. ವಾಮದೇವಪ್ಪ, ಎಂ.ಬಿ.ಶಿವಕುಮಾರ್, ತೇಜಸ್ವಿನಿ ರಾಘವೇಂದ್ರ, ಡಾ. ಆರ್.ಎಂ. ಕುಬೇರಪ್ಪ ಇತರರಿದ್ದರು.
Published on

ಶಿಕಾರಿಪುರ: ಶಿಕ್ಷಕ ವೃತ್ತಿ ಎನ್ನುವುದು ವೃತ್ತಿಯಲ್ಲ. ಅದೊಂದು ಬೆಲೆ ಕಟ್ಟಲಾರದ ಸೇವೆ. ತನ್ನಲ್ಲಿರುವ ಜ್ಞಾನವನ್ನು ಹಂಚುವ ಕಾಯಕ. ಯಾವುದೇ ಪ್ರತಿಫಲಾಪೇಕ್ಷೆಗಳಿಲ್ಲದೆ ಮಕ್ಕಳ ಖಾಲಿ ಹೃದಯಗಳಲ್ಲಿ ಅಕ್ಷರ ಮತ್ತು ಅರಿವು ಮೂಡಿಸುವ ಪವಿತ್ರವಾದ ಕೆಲಸ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ನಗರದ ಶ್ರೀ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಬುಧವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಪ್ರತಿ ಕಾಲಘಟ್ಟಕ್ಕೆ ತಕ್ಕಂತೆ ಶಿಕ್ಷಣದ ಸ್ವರೂಪ ಮತ್ತು ಭೋಧನೆಯ ಸ್ವರೂಪಗಳು ಬದಲಾಗುತ್ತಿವೆ. ಶಿಕ್ಷಕರು ಯಾವಾಗಲೂ ಅಧ್ಯಯನ ಶೀಲರಾಗಿರಬೇಕು. ಅಧ್ಯಯನ ಇಲ್ಲದಿದ್ದರೆ ಅಧ್ಯಾಪನ ಅಸಾಧ್ಯ. ವಿಶ್ವದಲ್ಲಿ ಅತ್ಯಂತ ಶ್ರೇಷ್ಠವಾದ ವೃತ್ತಿ ಎಂದರೆ ಶಿಕ್ಷಕ ವೃತ್ತಿ ಎಂದರು.
ಸಂಸ್ಕಾರಯುತವಾದ ಶಿಕ್ಷಣದ ಅಗತ್ಯವಿದೆ. ಬರೀ ಪಠ್ಯವಷ್ಠೇ ಶಿಕ್ಷಣವಲ್ಲ. ಪಠ್ಯಗಳು ಶಿಕ್ಷಣದ ಒಂದು ಭಾಗವಷ್ಟೇ, ನಮ್ಮ ದೈನಂದಿನ ಬದುಕು ನಮಗೆ ನಿತ್ಯವೂ ಹಲವಾರು ಪಾಠಗಳನ್ನು ಕಲಿಸುತ್ತದೆ. ನಮ್ಮ ನೆಲ, ಜಲ, ದೇಶ, ಭಾಷೆಗಳನ್ನು ಉಳಿಸುವ ನಿಟ್ಟಿನಲ್ಲಿ ಸದಾ ನಮ್ಮ ಹೆಜ್ಜೆಗಳು ಮುಂದಿರಬೇಕು. ಇಲ್ಲಿನ ಆಚಾರ-ವಿಚಾರ, ಸಂಸ್ಕೃತಿ-ಸಂಪ್ರದಾಯ ಮತ್ತು ಇತಿಹಾಸದ ಅರಿವು ನಮಗಿರಬೇಕು. ಸದ್ವಿಚಾರಗಳನ್ನು ಸಾರುವುದೇ ನಿಜವಾದ ಶಿಕ್ಷಣ ಎಂದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಶಿಕ್ಷಣವೆಂದರೆ ಸಾಕ್ಷರತೆಯನ್ನು ಸಾರುವುದಲ್ಲ. ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಅನಾವರಣಗೊಳಿಸುವುದು. ಅವರ ಅಂತರಾಳದಿ ಸೃಜಿಸಿದ ಕಲಿಕೆಯ ಕನಸಿಗೆ ಪ್ರೋತ್ಸಾಹದ ನೀರೆರೆಯಬೇಕು. ಪಠ್ಯ ಮಾತ್ರದಿಂದ ಶಿಕ್ಷಣ ಸಂಪೂರ್ಣ ಆಗುವುದಿಲ್ಲ. ಅದೊಂದು ಭಾಗವಷ್ಟೇ. ಶಿಕ್ಷಣದಲ್ಲಿ ನಾವು ಮಾನವೀಯ ಮೌಲ್ಯಗಳನ್ನು, ಸಾಮಾಜಿಕ ಕಳಕಳಿಯನ್ನು ತುಂಬಬೇಕು. ಇಡೀ ಸಮಾಜ ನನ್ನದು ಎಂಬ ಭಾವನೆ ಸೃಜಿಸುವಂತೆ ಮಾಡಬೇಕು ಎಂದು ಹೇಳಿದರು.
ದಾವಣಗೆರೆ ಎಂಎಂ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ವಾಮದೇವಪ್ಪ ಉಪನ್ಯಾಸ ನೀಡಿದರು. ವಿವೇಕಾನಂದ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಬಿ.ಶಿವಕುಮಾರ್, ನಿರ್ದೇಶಕಿ ತೇಜಸ್ವಿನಿ ರಾಘವೇಂದ್ರ, ಆಡಳಿತಾಧಿಕಾರಿ ಡಾ. ಆರ್.ಎಂ. ಕುಬೇರಪ್ಪ, ಪ್ರಾಚಾರ್ಯ ಡಾ. ಶಿವಕುಮಾರ್, ಸಹಾಯಕ ಉಪನ್ಯಾಸಕ ಡಾ. ಎಚ್.ರವಿ, ಪ್ರಾಚಾರ್ಯ ಡಾ. ಎಂ.ವೀರೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net