

ಮೂಡಿಗೆರೆ: ಪಶ್ಚಿಮಘಟ್ಟದ ನಿಷೇಧಿತ ಅರಣ್ಯ ಪ್ರದೇಶ ಚಾರ್ಮಾಡಿ ಘಾಟ್‌ನ ಬಿದಿರುತಳ ಎಂಬಲ್ಲಿ ಅನುಮತಿಯಿಲ್ಲದೆ ಚಾರಣಕ್ಕೆ ತೆರಳುತ್ತಿದ್ದ 109 ಮಂದಿ ಚಾರಣಿಗರನ್ನು ಬಾಳೂರುಪೊಲೀಸರು ವಶಕ್ಕೆ ಪಡೆದು ಲಘು ಪ್ರಕರಣ ದಾಖಲಿಸಿ ದಂಡ ವಿಧಿಸಿ ವಾಪಸ್ ಕಳಿಸಿದ್ದಾರೆ.
ಚಾರ್ಮಾಡಿ ಘಾಟ್ ದುರ್ಗಮ ಅರಣ್ಯಪ್ರದೇಶದಲ್ಲಿ ಪ್ರವಾಸಿಗರು ಕಾನೂನು ಬಾಹಿರವಾಗಿ ಅರಣ್ಯಕ್ಕೆ ಪ್ರವೇಶಿಸಿ ಚಾರಣಕ್ಕೆ ತೆರಳಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಬಾಳೂರು ಬಾಳೂರು ಪಿಎಸ್‌ಐ ದಿಲೀಪ್ ಕುಮಾರ್ ಹಾಗೂ ಬಣಕಲ್ ಪಿಎಸ್‌ಐ ರೇಣುಕಾ ದಾಳಿ ನಡೆಸಿ ಚಾರಣಕ್ಕೆ ಹೋಗುತ್ತಿದ್ದ ಎಲ್ಲ 109 ಮಂದಿ ಚಾರಣಿಗರನ್ನು ವಶಕ್ಕೆ ಪಡೆದು ಬಾಳೂರು ಠಾಣೆಗೆ ಕರೆದೊಯ್ದು ಲಘು ಪ್ರಕರಣ ದಾಖಲಿಸಿದ್ದಾರೆ. ಚಾರಣಿಗರನ್ನು ಬೆಂಗಳೂರು ಮೂಲದ ಐಟಿ ಕಂಪನಿ ಉದ್ಯೋಗಿಗಳು ಎನ್ನಲಾಗಿದೆ. ಪ್ರಯಾಣಕ್ಕೆ ಬಳಸಿದ 2 ಖಾಸಗಿ ಬಸ್ ಹಾಗೂ 2 ಪಿಕಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದು ದಂಡ ವಿಧಿಸಿದ್ದಾರೆ.
ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿರುವುದರಿಂದ ಅರಣ್ಯದಲ್ಲಿ ದಟ್ಟ ಮಂಜು ಕವಿದು ರಸ್ತೆಯಲ್ಲಿ ವಾಹನಗಳು ಸಂಚರಿಸಲು ಕಷ್ಟಕರವಾಗಿದೆ. ಅರಣ್ಯ ಪ್ರದೇಶದಲ್ಲಿ ಮರಗಳು ಧರೆಗುರುಳುತ್ತಿದೆ. ಅಲ್ಲಲ್ಲಿ ಭೂ ಕುಸಿತ ಉಂಟಾಗುತ್ತಿದೆ. ಇಂತಹ ಸ್ಥಳದಲ್ಲಿ ಚಾರಣಕ್ಕೆ ತೆರಳುವುದು ಅಪಾಯಕಾರಿ. ಚಾರಣಿಗರನ್ನು ನಿಷೇಧಿತ ಅರಣ್ಯಕ್ಕೆ ಕರೆದುಕೊಂಡು ಹೋಗಿದ್ದು ಸ್ಥಳೀಯ ಒಬ್ಬ ವ್ಯಕ್ತಿ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ಆತನ ಬಗ್ಗೆ ತನಿಖೆ ನಡೆಯುತ್ತಿದೆ. ಅರಣ್ಯ ಇಲಾಖೆಯಿಂದ ಅನುಮತಿ ಪಡೆಯದೆ ನಿಷೇಧಿತ ಪ್ರದೇಶಕ್ಕೆ ಪ್ರವೇಶಿಸುವುದು ಅರಣ್ಯ ಕಾಯ್ದೆ ಪ್ರಕಾರ ಅಪರಾಧವಾಗಿದೆ. 109 ಮಂದಿ ಚಾರಣಿಗರ ವಿರುದ್ಧ ಬಾಳೂರು ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣ ದಾಖಲಿಸಿ ಬಂದ ದಾರಿಯಲ್ಲಿ ವಾಪಸು ಕಳಿಸಿದ್ದಾರೆ.