ಟ್ರಕ್ ಟರ್ಮಿನಲ್ ಯೋಜನೆಗೆ ಮರುಜೀವ

Truck 7 May 20
Published on

ಹರೀಶ್ ಮೋಟುಕಾನ ಮಂಗಳೂರು

ದಶಕದಿಂದ ಮಂಗಳೂರಿನ ಬೇಡಿಕೆಯಾಗಿಯೇ ಉಳಿದಿರುವ ಟ್ರಕ್ ಟರ್ಮಿನಲ್ ಯೋಜನೆಗೆ ಮರುಜೀವ ಬಂದಿದೆ. ಎನ್‌ಎಂಪಿಟಿ ವ್ಯಾಪ್ತಿಯಲ್ಲಿ ಸೂಕ್ತ ಸ್ಥಳ ಗುರುತಿಸಲಾಗುತ್ತಿದೆ.

ಮಂಗಳೂರಿಗೆ ಇತ್ತೀಚೆಗೆ ಆಗಮಿಸಿದ್ದ ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್ ಲಿ. ಅಧ್ಯಕ್ಷ ಡಿ.ಎಸ್.ವೀರಯ್ಯ ಟ್ರಕ್ ಟರ್ಮಿನಲ್ ಅವಶ್ಯಕತೆ ಬಗ್ಗೆ ಜಿಲ್ಲಾಡಳಿತದ ಜತೆ ಸಭೆ ನಡೆಸಿ ಚರ್ಚಿಸಿದ್ದರು. ಈ ವೇಳೆ ಎನ್‌ಎಂಪಿಟಿ ಬಳಿಯ ಸ್ಥಳದ ಬಗ್ಗೆ ಪ್ರಸ್ತಾವ ಮಾಡಲಾಗಿತ್ತು. ಅದರಂತೆ ಎನ್‌ಎಂಪಿಟಿ ಪರಿಧಿಗೆ ಒಳಪಟ್ಟ ಸ್ಥಳದ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ನವಮಂಗಳೂರು ಬಂದರಿಗೆ ಬರುವ ಲಾರಿಗೆ ಅವಶ್ಯಕತೆಗಳನ್ನು ಪರಿಗಣಿಸಿ ಎನ್‌ಎಂಪಿಟಿ ಬೈಕಂಪಾಡಿಯಲ್ಲಿ ಬಂದರಿಗೆ ಸೇರಿದ ಜಾಗದಲ್ಲಿ ಒಂದು ಟ್ರಕ್ ಟರ್ಮಿನಲ್ ಅನ್ನು ಹಲವು ವರ್ಷಗಳ ಹಿಂದೆ ಸ್ಥಾಪಿಸಿತ್ತು. ಇದರಲ್ಲಿ 600ಕ್ಕೂ ಅಧಿಕ ಲಾರಿಗಳನ್ನು ನಿಲ್ಲಿಸಲು ಸ್ಥಳಾವಕಾಶವಿದೆ. ಆದರೂ ಇಲ್ಲಿ ಲಾರಿಗಳ ದಟ್ಟಣೆ ಕಡಿಮೆ ಆಗಿಲ್ಲ.

ಟ್ರಕ್ ಟರ್ಮಿನಲ್ ಅವಶ್ಯಕತೆ ಏನು?: ಮಂಗಳೂರು ನಗರ ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ರಾಜ್ಯದ ಏಕೈಕ ಮತ್ತು ಭಾರತದ ಪ್ರಮುಖ ಬಂದರುಗಳಲ್ಲಿ ನವಮಂಗಳೂರು ಒಂದಾಗಿದೆ. ನಾಲ್ಕು ಕೈಗಾರಿಕಾ ಪ್ರದೇಶಗಳಿವೆ. ಮಂಗಳೂರು ಹಳೇ ಬಂದರು ಜಿಲ್ಲೆಯ ರಖಂ ವ್ಯಾಪಾರ ಕೇಂದ್ರವಾಗಿದೆ. ಲಭ್ಯ ಅಂಕಿ ಅಂಶದ ಪ್ರಕಾರ ಜಿಲ್ಲೆಯಲ್ಲಿ ದಿನವೊಂದಕ್ಕೆ ಸುಮಾರು ಎರಡು ಸಾವಿರ ಟ್ಯಾಂಕರ್‌ಗಳು ಓಡಾಟ ನಡೆಸುತ್ತಿವೆ. ಎಂಆರ್‌ಪಿಎಲ್, ಬಿಎಸ್‌ಎಫ್, ಎಚ್‌ಪಿಸಿಎಲ್, ಬಿಪಿಸಿಎಲ್, ಇಂಡಿಯನ್ ಆಯಿಲ್ ಕಾರ್ಪೊರೇಶನ್, ಎಸ್‌ಇಜಡ್ ಸಹಿತ ಬೃಹತ್ ಉದ್ದಿಮೆಗಳಿವೆ. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಾಚರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಟ್ಯಾಂಕರ್‌ಗಳಲ್ಲದೆ ದಿನವೊಂದಕ್ಕೆ ಸಾವಿರಾರು ಸರಕು ಸಾಗಾಟ ಲಾರಿಗಳು ಮಂಗಳೂರು ನಗರಕ್ಕೆ ಆಗಮಿಸುತ್ತಿವೆ. ಈ ಎಲ್ಲ ಲಾರಿಗಳು ಸರಕು ಖಾಲಿ ಮಾಡಿದ ಬಳಿಕ ಮರಳಿ ಸರಕು ತುಂಬಿಸಲು ಒಂದೆರಡು ದಿನ ಕಾಯಬೇಕಾಗುತ್ತದೆ. ಇದಲ್ಲದೆ ಮಂಗಳೂರು ಮೂಲಕ ಹೊರರಾಜ್ಯಗಳಿಗೆ ಸಾಗುವ ಲಾರಿಗಳು ರಾತ್ರಿ ತಂಗಿ ಬಳಿಕ ಸಂಚಾರ ಆರಂಭಿಸುತ್ತವೆ. ಈ ವೇಳೆ ಲಾರಿಗಳನ್ನು ನಿಲ್ಲಿಸಲು ಸರಿಯಾದ ಜಾಗವಿಲ್ಲದೆ ರಸ್ತೆ ಬದಿ ನಿಲ್ಲಿಸಬೇಕಾಗುತ್ತದೆ. ಇದರಿಂದ ಹೆದ್ದಾರಿಗಳಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ರಾತ್ರಿ ವೇಳೆ ಅಪಘಾತಗಳಿಗೂ ಕಾರಣವಾಗುತ್ತಿವೆ.

ಸೌಲಭ್ಯಗಳು ಏನೇನಿರಲಿದೆ?: ಟ್ರಕ್ ಟರ್ಮಿನಲ್‌ಗಳ ನಿರ್ಮಾಣ ಕೇವಲ ಹೆದ್ದಾರಿಗಳಲ್ಲಿ ಅಪಘಾತಗಳನ್ನು ಕಡಿಮೆ ಮಾಡುವುದರ ಜತೆಗೆ ಚಾಲಕರಿಗೂ ಸುಸಜ್ಜಿತ ಸೌಲಭ್ಯಗಳನ್ನು ಒಳಗೊಂಡಿರಬೇಕು. ಸೂಕ್ತ ಶೌಚಗೃಹ, ದೂರವಾಣಿ ಸೌಲಭ್ಯಗಳು, ಗೋದಾಮುಗಳು, ಪೊಲೀಸ್ ಚೌಕಿ, ಪೆಟ್ರೋಲ್ ಬಂಕ್, ಸರ್ವೀಸ್ ಸೆಂಟರ್, ಫೈರ್ ಸ್ಟೇಷನ್, ಆಟೊಮೊಬೈಲ್ ಬಿಡಿಭಾಗಗಳ ಮಳಿಗೆ, ತೂಕ ಸೌಲಭ್ಯ, ಆರೋಗ್ಯ ಸೌಲಭ್ಯಗಳು ಮೊದಲಾದವುಗಳನ್ನು ಒಳಗೊಂಡಿರುತ್ತದೆ.

ಟ್ರಕ್ ಟರ್ಮಿನಲ್ ಮಾಡಲು ಈ ಹಿಂದೆ ಸುರತ್ಕಲ್‌ನ ಪಾವಂಜೆಯ ಸೇತುವೆ ಸಮೀಪ ಖಾಸಗಿ ಸ್ಥಳ ಗುರುತು ಮಾಡಲಾಗಿತ್ತು. ಆದರೆ ಅಲ್ಲಿ ದರದ ವಿಚಾರದಲ್ಲಿ ಮಾತುಕತೆ ನಡೆದಿರಲಿಲ್ಲ. ಪ್ರಸ್ತುತ ಎನ್‌ಎಂಪಿಟಿ ವ್ಯಾಪ್ತಿಗೆ ಒಳಪಡುವ ಜಾಗದ ಬಗ್ಗೆ ಚಿಂತನೆ ನಡೆಸಲಾಗಿದೆ.

ಡಾ.ರಾಜೇಂದ್ರ ಕೆ.ವಿ. ದ.ಕ. ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net