

ನೆಲಮಂಗಲ : ರಾಷ್ಟ್ರೀಯ ಹೆದ್ದಾರಿ 48ರ ನವಯುಗ ಟೋಲ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ಪಲ್ಟಿಯಾಗಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಟೋಲ್ ಸಿಬ್ಬಂದಿ ಹಾಗೂ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಟೋಲ್ ಸಿಬ್ಬಂದಿ ಸಾವಿತ್ರಮ್ಮ, ಟ್ರಕ್ ಚಾಲಕ ಮೊಹಮ್ಮದ್ ಗಾಯಗೊಂಡವರು. ಸಾವಿತ್ರಮ್ಮ ತಲೆ ಮೇಲೆ ಕಂಬ ಬಿದ್ದು ಗಾಯಗೊಂಡರೆ, ಟ್ರಕ್ ಚಾಲಕನ ಕಾಲು ಮುರಿದಿದೆ. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆದ್ದಾರಿ ಮಧ್ಯದಲ್ಲೇ ಟ್ರಕ್ ಪಲ್ಟಿಯಾದ ಹಿನ್ನೆಲೆಯಲ್ಲಿ ಏಳೆಂಟು ಕಿಲೊಮೀಟರ್ ಸಂಚಾರ ಸಿಕ್ಕು ಉಂಟಾಗಿ, ವಾಹನ ಸವಾರರು ಪರದಾಡಿದರು. ಕ್ರೇನ್ ಮೂಲಕ ಟ್ರಕ್ ತೆರವು ಮಾಡಿದ ಬಳಿಕ ಸುಗಮ ಸಂಚಾರ ಶುರುವಾಯಿತು.
ಆನೇಕಲ್: ಗಂಡನ ಮನೆಯವರಿಂದ ಮಹಿಳೆ ಮೇಲೆ ಮರಣಾಂತಿಕ ಹಲ್ಲೆ ನಡೆದಿದ್ದು, ಪ್ರಕರಣ ಠಾಣೆ ಮೆಟ್ಟಿಲೇರಿದೆ. ಪಟ್ಟಣದ ನಾರಾಯಣಪುರದ ನಿವಾಸಿ ಶೈಲಜಾ ಮೇಲೆ ಈಕೆಯ ಪತಿ ಅರುಣ್ ಕುಮಾರ್, ಅತ್ತೆ ಪ್ರಭಾವತಿ ಹಲ್ಲೆ ಮಾಡಿದ್ದು, ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಂಪತಿಗೆ ನಾಲ್ಕು ವರ್ಷದ ಹೆಣ್ಣು ಮಗುವಿದ್ದು, ವರದಣೆ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪವೂ ಇದೆ, ಪತ್ನಿಯನ್ನು ಅರುಣ್ಕುಮಾರ್ ಅನುಮಾನದಿಂದ ನೋಡುತ್ತಿದ್ದ ವಿಚಾರಕ್ಕೆ ಆಗಾಗ ಗಲಾಟೆ ನಡೆದು ರಾಜಿ ಪಂಚಾಯಿತಿಗಳು ಆಗಿದ್ದವು.
ವಾರದ ಹಿಂದೆ ತಂಗಿಗೆ ಹುಷಾರಿಲ್ಲ ಎಂದು ನೋಡಿಕೊಂಡು ಬರಲು ಮನೆಗೆ ಹೋಗಿದ್ದು, ಗುರುವಾರ ಮತ್ತೆ ಗಂಡನ ಮನೆಗೆ ವಾಪಸ್ ಬಂದಾಗ ಗಲಾಟೆ ನಡೆದಿದೆ. ಪತ್ನಿಯನ್ನು ಮನೆಗೆ ಸೇರಿಸದೆ ರಸ್ತೆಯಲ್ಲಿ ಎಳೆದಾಡಿ ಮನ ಬಂದಂತೆ ಹಲ್ಲೆ ಮಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಆನೇಕಲ್ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ. ಶೈಲಜಾಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.