ಬೆಂಕಿಯ ಕೆನ್ನಾಲಿಗೆಗೆ ಲಾರಿ ಭಸ್ಮ

Truck burns to ashes in fire
ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿ ಬೆಂಕಿ ಅಪಘಾತದಲ್ಲಿ ಭಸ್ಮವಾದ ಸ್ಥಳವನ್ನು ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಪರಿಶೀಲಿಸಿದರು.
Published on

ಲೋಕಾಪುರ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಾರಿ ರಸ್ತೆಯಲ್ಲಿ ಹೊತ್ತಿ ಉರಿದ ಘಟನೆ ಲೋಕಾಪುರ ಪಟ್ಟಣದ ಹೊರವಲಯದಲ್ಲಿರುವ ರೈಲು ನಿಲ್ದಾಣದ ಹತ್ತಿರ ನಡೆದಿದೆ.

ಗಂಗಾವತಿಯಿಂದ ಲೋಕಾಪುರ ಮಾರ್ಗವಾಗಿ ಕೊಲ್ಲಾಪುರಕ್ಕೆ ಹೊರಟಿದ್ದ ಲಾರಿ ಮಂಗಳವಾರ ರಾತ್ರಿ ಚಕ್ರದ ಘರ್ಷಣೆಯಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ಹೆದ್ದಾರಿ ಮಧ್ಯದಲ್ಲಿ ಬೆಂಕಿಗಾಹುತಿಯಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಅಕ್ಕಿ ಹಾಗೂ ಲಾರಿಯನ್ನು ಆಹಾರ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂದು ಶಂಕಿಸಲಾಗಿದೆ.

ಲಾರಿ ಸುಟ್ಟು ಹೋಗಿದರಿಂದ ಅಕ್ಕಿಯನ್ನು ಬೇರೆ ಲಾರಿ ಮೂಲಕ ವಶಕ್ಕೆ ಪಡೆಯಲಾಗಿದೆ. ಅಂದಾಜು 7 ಲಕ್ಷ ರೂ. ಮೌಲ್ಯದ 35 ಟನ್ ಅಕ್ಕಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ಅಕ್ಕಿಯನ್ನು ಎಲ್ಲಿಂದ ತೆಗೆದುಕೊಂಡು ಬಂದಿದ್ದಾರೆ? ಅದರ ಮಾಲೀಕರ ಯಾರು? ಎನ್ನುವ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

ಸ್ಥಳಕ್ಕೆ ಅಧಿಕಾರಿಗಳ ಭೇಟಿ: ಘಟನಾ ಸ್ಥಳಕ್ಕೆ ಜಿಲ್ಲಾ ಆಹಾರ ಇಲಾಖೆ ಅಧಿಕಾರಿ ಶ್ರೀಶೈಲ ಕಂಕನವಾಡಿ, ತಾಲೂಕು ಆಹಾರ ಗುಣಮಟ್ಟ ಅಧಿಕಾರಿ ಸದಾಶಿವ ಹಡಪದ, ಜಮಖಂಡಿ ಆರ್‌ಟಿಒ ಸದಾಶಿವ ಮರಲಿಂಗನವರ ಹಾಗೂ ಲೋಕಾಪೂರ ಠಾಣಾ ಪಿಎಸ್‌ಐ ಕೆ.ಬಿ. ಜಕ್ಕನವರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಲಾರಿ ಮಾಲೀಕನ ಮೇಲೆ ಪ್ರಕರಣ ದಾಖಲಿಸುವಂತೆ ಶ್ರೀಶೈಲ ಕಂಕನವಾಡಿ ಅವರು ಸ್ಥಳ ಪರಿಶೀಲನೆಯಲ್ಲಿದ್ದ ಆಹಾರ ಶಿರಸ್ತೇದಾರ ಡಿ.ಬಿ. ದೇಶಪಾಂಡೆ ಅವರಿಗೆ ಸೂಚಿಸಿದರು. ಆಹಾರ ನಿರೀಕ್ಷಕಿ ಸತ್ಯವ್ವ ಮಾದರ, ಲೋಕಾಪುರ ಗ್ರಾಮ ಆಡಳಿತಾಧಿಕಾರಿ ಪ್ರಕಾಶ ಶೇರಖಾನೆ, ಪೊಲೀಸ್ ಇಲಾಖೆ ಸಿಬ್ಬಂದಿ ಎಸ್.ಎಸ್. ಗಂಗಾಯಿ, ಎಮ್.ಕೆ. ಪತ್ತಾರ, ಯಡಹಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net