ಸರ್ವರ್ ಸಮಸ್ಯೆಯಿಂದ ಹೈರಾಣ

14 skpp 1
Published on

ಸಕಲೇಶಪುರ: ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಚೀಟಿ ತಿದ್ದುಪಡಿಗೆ ಜನರು ಕಳೆದೊಂದು ತಿಂಗಳಿನಿಂದ ಗ್ರಾಮ ಒನ್ ಕೇಂದ್ರಗಳಿಗೆ ಅಲೆದಾಡುವಂತಾಗಿದೆ.


ಕಳೆದ ಆರು ತಿಂಗಳಿನಿಂದ ಪಡಿತರ ಚೀಡಿ ತಿದ್ದುಪಡಿ ಹಾಗೂ ಹೆಸರು ಸೇರ್ಪಡೆಗೆ ಅವಕಾಶ ಇಲ್ಲದ ಕಾರಣ ಪ್ರಸ್ತುತ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸ್ತ್ರೀ ಶಕ್ತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಕಾರ್ಯಕ್ರಮ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಫಲಾನಾಭವಿಗಳಾಗಲು ವಿಫಲರಾಗಿದ್ದ ಜನರಿಗೆ ಅಗಸ್ಟ್ 18 ರಿಂದ 21 ರವರಗೆ ಸರ್ಕಾರ ಪಡಿತರ ಕಾರ್ಡ್ ತಿದ್ದುಪಡಿಗೆ ಅವಕಾಶ ಕಲ್ಪಿಸಿದೆ ಎಂಬ ವಿಷಯ ತಿಳಿದು ಹರ್ಷಗೊಂಡಿದ್ದರು. ಆದರೆ ಈ ಮೂರು ದಿನಗಳಲ್ಲಿ ಪ್ರತಿದಿನ 12 ಗಂಟೆಯಿಂದ ನಾಲ್ಕು ಗಂಟೆವರೆಗೆ ಮಾತ್ರ ಅವಕಾಶ ಎಂಬ ಕಾರಣದಿಂದಾಗಿ ಸಾವಿರಾರು ಜನರು ತಾಲೂಕಿನ ಗ್ರಾಮ ಒನ್ ಕೇಂದ್ರಗಳ ಮುಂದೆ ಮುಂಜಾನೆಯಿಂದ ಸಂಜೆವರೆಗೆ ನಿಂತರೂ ಸರ್ವರ್ ಸಮಸ್ಯೆಯಿಂದಾಗಿ ಹೆಸರು ಸೇರ್ಪಡೆಯಾಗಲಿ, ತಿದ್ದುಪಡಿ ಆಗಲಿ ಸಾಧ್ಯವಾಗದೆ ಜನರು ನಿರಾಶರಾಗಿದ್ದರು. ನಂತರ ಸೆಪ್ಟೆಂಬರ್ 1ರಿಂದ 10 ರವರಗೆ ತಿದ್ದುಪಡಿ ಹಾಗೂ ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿತ್ತಾದರೂ ಸರ್ವರ್ ಸಮಸ್ಯೆ ತೀವ್ರಗೊಂಡಿದ್ದರಿಂದ ನಾಲ್ಕು ದಿನಗಳಿಗೆ ಮೊಟಕುಗೊಳಿಸಲಾಗಿತ್ತು. ಈ ನಾಲ್ಕು ದಿನಗಳಲ್ಲಿ ತಿದ್ದುಪಡಿಯಾದ ಹಸಿರು ಕಾರ್ಡ್‌ಗಳ ಸಂಖ್ಯೆ ತೀರ ಕಡಿಮೆ.


ಸದ್ಯ ಸೆಪ್ಟೆಂಬರ್ 12ರಿಂದ 14 ರವರಗೆ ತಿದ್ದುಪಡಿಗೆ ಮತ್ತೆ ಅವಕಾಶ ಕಲ್ಪಿಸಿರುವ ಸರ್ಕಾರ ಸರ್ವರ್ ಸಮಸ್ಯೆ ನಿಗಿಸುವ ಉದ್ದೇಶದಿಂದ ರಾಜ್ಯದ 16 ಜಿಲ್ಲೆಗಳಲ್ಲಿ ಮಾತ್ರ ತಿದ್ದುಪಡಿಗೆ ಅವಕಾಶ ಕಲ್ಪಿಸಿದೆ. ಆದರೂ ಸರ್ವರ್ ಸಮಸ್ಯೆ ಬಗೆಹರಿಯದಾಗಿದ್ದು, ಈ ಮೂರು ದಿನಗಳಲ್ಲೂ ತಿದ್ದುಪಡಿಗೊಂಡ ಕಾರ್ಡ್‌ಗಳ ಸಂಖ್ಯೆ ಅತ್ಯಲ್ಪ. ಒಂದೊಂದು ಕಾರ್ಡ್ ತಿದ್ದುಪಡಿಗೆ ಒಂದರಿಂದ ಎರಡು ಗಂಟೆ ಅವಧಿ ಹಿಡಿಯುತ್ತಿರುವುದರಿಂದ ಜನರು ಬೇಸತ್ತಿದ್ದಾರೆ. ತಾಲೂಕಿನ ದೂರದೂರದ ಗ್ರಾಮಗಳಿಂದ ಮುಂಜಾನೆಯೆ ಪಟ್ಟಣಕ್ಕೆ ಆಗಮಿಸಿ ಗ್ರಾಮ ಒನ್, ಕರ್ನಾಟಕ ಒನ್ ಸೆಂಟರ್‌ಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಕೆಲಸವಾಗದೆ ಹಿಂದಿರುಗುತ್ತಿದ್ದು, ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಪಡಿತರ ವಿತರಣೆಗೂ ತೊಂದರೆ: ತಾಲೂಕಿನಲ್ಲಿ 29 ಸಾವಿರ ಬಿಪಿಎಲ್, 3,500 ಎಪಿಎಲ್ ಹಾಗೂ 2,100 ಅಂತ್ಯೋದಯ ಕಾರ್ಡ್‌ದಾರರಿದ್ದು, ಇದರಲ್ಲಿ 5,400ಕ್ಕೂ ಹೆಚ್ಚು ಪಡಿತರದಾರರು ಕಾರ್ಡ್‌ಗಳಲ್ಲಿ ದೋಷ ಹಾಗೂ ಹೆಸರು ಸೇರ್ಪಡೆ ಮಾಡಬೇಕಿದೆ. ಇದಕ್ಕಾಗಿ ಸರ್ಕಾರ ಆಹಾರ ಇಲಾಖೆಯ ವೆಬ್‌ಸೈಟ್ ಮೂಲಕ ತಿದ್ದುಪಡಿಗೆ ಅವಕಾಶ ಕಲ್ಪಿಸಿದೆ. ಈಗಾಗಲೇ ಇದೆ ವೆಬ್‌ಸೈಟ್ ಮೂಲಕ ಎಲ್ಲ ಪಡಿತರ ಕೇಂದ್ರಗಳಲ್ಲಿ ಪಡಿತರ ವಿತರಣೆ ಮಾಡುತ್ತಿದ್ದು, ತಿದ್ದುಪಡಿಗೂ ಇದೇ ವೆಬ್‌ಸೈಟ್ ಉಪಯೋಗಿಸುತ್ತಿರುವುದರಿಂದ ಪಡಿತರ ವಿತರಣೆಗೂ ಇದರಿಂದ ತೊಂದರೆಯಾಗಿದೆ.


ಹೊಸ ಕಾರ್ಡ್‌ಗೆ ನಿರಾಕರಣೆ: ಇತ್ತೀಚೆಗೆ ಆಹಾರ ಸಚಿವ ವಿ.ಮುನಿಯಪ್ಪ ಹೊಸ ಕಾರ್ಡ್‌ಗೆ ಅವಕಾಶ ಇಲ್ಲ ಎಂದಿರುವುದು ನಿಜವಾಗಿ ಹಸಿರು ಪಡಿತರಕ್ಕೆ ಆರ್ಹರಾಗಿರುವವರ ಎದೆ ಬಡಿತ ಹೆಚ್ಚಿಸಿದೆ. ಹಿಂದೆ ವಿವಿಧ ಕಾರಣಗಳಿಂದ ಹಸಿರು ಪಡಿತರ ಕಾರ್ಡ್ ರದ್ದಾಗಿ ಎಪಿಎಲ್ ಕಾರ್ಡ್‌ಗಳಾಗಿದ್ದು, ಇಂತಹ ಕಾರ್ಡ್‌ದಾರರ ಸಂಖ್ಯೆ ತಾಲೂಕಿನಲ್ಲಿ ಮೂರು ಸಾವಿರಕ್ಕೂ ಅಧಿಕ ಎನ್ನಲಾಗಿದೆ. ಇಂತಹ ಬಡಕುಟುಂಬಗಳಿಗೆ ಈಗ ಆಹಾರ ಸಚಿವರ ಹೇಳಿಕೆ ಗರಬಡಿದಂತಾಗಿದೆ.


ಎಲ್ಲೆಲ್ಲೂ ಜನಸಾಗರ: ಪಡಿತರ ಕಾರ್ಡ್‌ಗೆ ಲೋಪ ಸರಿಪಡಿಸಲು ಸರ್ಕಾರದಿಂದ ಸೆಪ್ಟೆಂಬರ್ 14 ಕೊನೇ ದಿನ ಎಂಬ ಗಡುವು ನಿಗದಿಯಾಗಿರುವುದರಿಂದ ಪಡಿತರ ಕಾರ್ಡ್ ತಿದ್ದುಪಡಿಗಾಗಿ ಪಟ್ಟಣದ ಎಲ್ಲ ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳ ಮುಂದೆ ಜನಸಾಗರವೆ ನೆರೆದಿದ್ದು ಒಂದು ಕೇಂದ್ರದಿಂದ ಮತ್ತೊಂದು ಕೇಂದ್ರಕ್ಕೆ ಜನರ ಅಲೆದಾಟ ಸಾಮಾನ್ಯವಾಗಿದೆ.


ಮಾಹಿತಿ ಕೊರತೆ: ಪಡಿತರ ಚೀಟಿ ತಿದ್ದುಪಡಿಯನ್ನು ಗ್ರಾಪಂ ಕಚೇರಿ ಸೇರಿದಂತೆ ತಾಲೂಕಿನ ಎಲ್ಲ ಸೈಬರ್ ಕೇಂದ್ರಗಳಲ್ಲೂ ನಡೆಸಲು ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ ತಾಲೂಕಿನ ಯಾವುದೇ ಗ್ರಾಪಂಗಳಲ್ಲೂ ಪಡಿತರ ಕಾರ್ಡ್ ತಿದ್ದುಪಡಿ ನಡೆಸುತ್ತಿಲ್ಲ ಹಾಗೂ ಪಟ್ಟಣದ ನಿಗದಿತ ಸೈಬರ್‌ಗಳಲ್ಲಿ ಮಾತ್ರ ತಿದ್ದುಪಡಿ ಮಾಡುತ್ತಿರುವುದರಿಂದ ಜನರು ಹೈರಾಣಾಗುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net