ಸಾರ್ವಜನಿಕರಿಗೆ ತೊಂದರೆ ಆಗದಂತೆ ಪ್ರತಿಭಟನೆ ನಡೆಸಿ: ಸಚಿವ ರಾಮಲಿಂಗಾರೆಡ್ಡಿ

Ramalinga Reddy
Published on

ಬೆಂಗಳೂರು: ಖಾಸಗಿ ಸಾರಿಗೆ ಬಂದ್‌ಗೆ ಕರೆ ನೀಡಿರುವವರು ಕಾನೂನು ಪಾಲಿಸಲಿ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಅವರು ಪ್ರತಿಭಟನೆ ನಡೆಸಲಿ. ಪ್ರತಿಭಟನೆ ಮಾಡುವವರಿಗೂ ಸರ್ಕಾರದಿಂದ ರಕ್ಷಣೆ ನೀಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್ಚುವರಿ ಬಸ್‌ಗಳು ರಸ್ತೆಗೆ ಇಳಿಯುವುದರಿಂದ ಜನರಿಗೆ ತೊಂದರೆಯಾಗುವುದಿಲ್ಲ. ಸಾರಿಗೆ ಸಂಘಟನೆಗಳ ಜತೆ ಈ ಹಿಂದೆಯೂ ಮಾತನಾಡಿದ್ದೆವು. ಸಿಎಂ ಮತ್ತು ನಾನು ಕೂಡ ಎರಡು ಬಾರಿ ಸಭೆ ನಡೆಸಿದ್ದೇವೆ. ಆದರೆ ಸಭೆಗೆ ಹಾಜರಾಗದ ಕೆಲವು ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ಅವರು ಎಷ್ಟು ಸಂಘ ಆದರೂ ಇಟ್ಟುಕೊಳ್ಳಲಿ. ಮುಷ್ಕರ ಮಾಡೆ ಮಾಡುತ್ತೇವೆ ಅನ್ನೋರ ಬಗ್ಗೆ ಏನು ಹೇಳಲಿ ಎಂದರು.

ಬೆಂಗಳೂರಿನಲ್ಲಿ ಹೆಚ್ಚುವರಿ ಬಸ್‌ಗಳು ರಸ್ತೆಗೆ ಇಳಿಯಲಿವೆ. ಈ ಬಗ್ಗೆ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಎಂಡಿಗಳ ಜತೆ ಮಾತನಾಡಿದ್ದೇನೆ. ವಿಮಾನ ನಿಲ್ದಾಣ, ಆಸ್ಪತ್ರೆಗಳ ಬಳಿ ಹೆಚ್ಚಿನ ಟ್ರಿಪ್‌ಗಳಿಗೆ ಸೂಚಿಸಿದ್ದೇವೆ. ಶಾಲಾ ಕಾಲೇಜು, ಕಚೇರಿಗೆ ತೆರಳುವವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದರು.

ಖಾಸಗಿ ಸಾರಿಗೆ ಒಕ್ಕೂಟದ ಬೇಡಿಕೆ ಈಡೇರಿಕೆ ಬಗ್ಗೆ ಗಮನಿಸುತ್ತೇವೆ. ೨೦೧೬ ರಿಂದ ರ‌್ಯಾಪಿಡೋ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ನಡೆಸುತ್ತಿದೆ. ಶಕ್ತಿ ಯೋಜನೆ ಜಾರಿಯಾದ ನಂತರ ಹೆಚ್ಚಿನ ಸಮಸ್ಯೆಯಾಗಿಲ್ಲ. ಹಾಗಾಗಿ ಖಾಸಗಿ ಸಾರಿಗೆ ಒಕ್ಕೂಟದ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ. ನಮ್ಮ ಸರ್ಕಾರ ಬಂದ ಮೇಲೆ ವಾಹನ ತೆರಿಗೆ ಹೆಚ್ಚಳ ಮಾಡಿಲ್ಲ. ಕಳೆದ ೪-೫ ವರ್ಷಗಳಿಂದ ತೆರಿಗೆ ಹೆಚ್ಚಳ ವಿಚಾರ ಚರ್ಚೆಯಲ್ಲಿತ್ತು. ನಮ್ಮ ಸರ್ಕಾರ ಬಂದ ಬಳಿಕ ತೆರಿಗೆ ಹೆಚ್ಚಳ ಆದೇಶ ಜಾರಿಗೆ ಬಂದಿದೆ.

ಖಾಸಗಿ ವಾಹನ ಚಾಲಕರ ಇತರೆ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನ ಮಾಡುತ್ತಿದ್ದೇನೆ. ನಮ್ಮ ಸರ್ಕಾರ ಬಂದ ಮೇಲೆ ಪ್ರಮುಖವಾಗಿ ಎರಡು ಸಮಸ್ಯೆಯಾಗಿದೆ. ಒಂದು ಶಕ್ತಿ ಯೋಜನೆ ಪರಿಣಾಮ ಹಾಗೂ ಇನ್ನೊಂದು ಲೈಫ್ ಟೈಮ್ ಟ್ಯಾಕ್ಸೃ್ ಎಂದರು.

ಯಾವುದೇ ಶಾಲಾ ಕಾಲೇಜಿಗೆ ರಜೆ ಇಲ್ಲ:

ಬೆಂಗಳೂರಿನಲ್ಲಿ ಸೋಮವಾರ ಯಾವುದೇ ಶಾಲಾ ಕಾಲೇಜಿಗೆ ರಜೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಖಾಸಗಿ ಸಾರಿಗೆ ಒಕ್ಕೂಟಗಳ ಬೇಡಿಕೆ ಅನುಸಾರ ಅನುಪಾಲನಾ ವರದಿ ಸಹ ಮಾಡಿದ್ದೇವೆ. ಅವರ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಐದು ಸಾವಿರ ಕೋಟಿ ಹೆಚ್ಚುವರಿ ಹಣ ಬೇಕಾಗುತ್ತದೆ. ಅವರಿಗೆ ಸಮಸ್ಯೆ ಆಗುತ್ತೆ ಅಂತ ತೆರಿಗೆ ಹೆಚ್ಚಳ ಕ್ರಮ ಸಹ ಬಾಕಿ ಇಟ್ಟಿದ್ದೇವೆ ಎಂದರು.Protest to avoid public

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net