ಹೊಸಕೋಟೆಯಲ್ಲಿ ತೊಡಕು

Untitled-3
ಹೊಸಕೋಟೆಯ 16ನೇ ವಾರ್ಡ್​ನಲ್ಲಿ ಜಿಪಂ ಸಿಇಒ ಡಾ.ಅನುರಾಧಾ ಜಾತಿ ಗಣತಿ ಮಾಡಲು ಮುಂದಾದ ವೇಳೆ ಮೊಬೈಲ್​ ಆ್ಯಪ್​ನಲ್ಲಿ ಎರರ್​ ತೋರಿಸಿದ ಕಾರಣ ಸಮಸ್ಯೆ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿ ಬೇರೆಡೆ ಪರೀಕ್ಷೆಗೆ ತೆರಳಿದರು. ತಹಸೀಲ್ದಾರ್​ ಸೋಮಶೇಖರ್​, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶಿವಮ್ಮ ಇದ್ದರು.
Published on

ಹೊಸಕೋಟೆ : ಜಾತಿಜನಗಣತಿ ಹಳ್ಳ ಹಿಡಿಯುವ ಲಕ್ಷಣಗಳು ಎದ್ದು ಕಾಣುತ್ತಿವೆ. ಪೂರ್ಣ ಮಾಹಿತಿ ಹಾಗೂ ಸವಲತ್ತು ಇಲ್ಲದೆ ಅಧಿಕಾರಿಗಳು ಪರದಾಡುತ್ತಿದ್ದಾರೆ, ಗಣತಿಗೆ ಕಾಲಿಟ್ಟರೆ ತಾಂತ್ರಿಕ ದೋಷ, ಮನೆಗಳ ನೇವಿಗೇಷನ್​ ಸಮಸ್ಯೆ, ವ್ಯಾಪ್ತಿ ಮೀರಿ ಗಣತಿಗೆ ಅಧಿಕಾರಿಗಳ ನೇಮಕ ಸೇರಿ ಹಲವು ಸಮಸ್ಯೆ ಎದುರಿಸುವಂತಾಗಿದೆ. 800ಕ್ಕೂ ಹೆಚ್ಚು ಸಿಬ್ಬಂದಿಯನ್ನು ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆಯಿಂದ ನೇಮಿಸಲಾಗಿದ್ದು, ಅದರಲ್ಲಿ ಶಿಕ್ಷಣ ಇಲಾಖೆಯವರದ್ದೇ ಸಿಂಹಪಾಲು, 700ಕ್ಕೂ ಹೆಚ್ಚು ಶಿಕ್ಷಕರನ್ನು ಈ ಜಾತಿಜನಗಣತಿಗೆ ನೇಮಕ ಮಾಡಲಾಗಿದೆ. ಆದರೆ, ತಾಲೂಕಿನ ಉತ್ತರ ಮೂಲೆ ಸೂಲಿಬೆಲೆಯಲ್ಲಿ ಶಿಕ್ಷಕರಾಗಿರುವವರನ್ನು ದಕ್ಷಿಣ ಭಾಗದ ಅನುಗೊಂಡನಹಳ್ಳಿಯಲ್ಲಿ ಕೆಲಸ ಮಾಡಲು ನೇಮಕ ಮಾಡಿದ್ದು, ಈ ರೀತಿಯ ಗೊಂದಲಗಳು ತಾಲೂಕಿನ ಎಲ್ಲ ಭಾಗದಲ್ಲಿ ಮುಂದುವರಿದಿದೆ. ಅದರಲ್ಲೂ ಪ್ರತಿ ಅಧಿಕಾರಿಗೆ 150 ಮನೆಗಳ ಗಣತಿಗೆ ನಿಗದಿತ ಸಮಯದಲ್ಲಿ ಆದೇಶವಿದ್ದರೆ ಇನ್ನೂ ಕೆಲವರಿಗೆ 400ಕ್ಕೂ ಹೆಚ್ಚು ಗಣತಿಯನ್ನು ಅಷ್ಟೇ ನಿಗದಿತ ಸಮಯದಲ್ಲಿ ಮಾಡಬೇಕೆಂಬ ಪಟ್ಟಿ ಬಿಡುಗಡೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.

ಬೆಸ್ಕಾಂ ಎಡವಟ್ಟು: ಗಣತಿಗೂ ಮುನ್ನ ಮನೆಮನೆಗೆ ಸ್ಟಿಕರ್​ಗಳನ್ನು ಅಂಟಿಸಿ ಆ ಮನೆಯ ಯುಎಚ್​ಐಡಿ ಸಂಖ್ಯೆಯನ್ನು ಬರೆಯಬೇಕಿತ್ತು. ಆದರೆ ಬೆಸ್ಕಾಂ ಸಿಬ್ಬಂದಿ ಕೆಲವು ಮನೆಗೆ ಸ್ಟಿಕರ್​ ಅಂಟಿಸಿದರೆ ಇನ್ನು ಕೆಲವು ಮನೆಗೆ ಅಂಟಿಸದೆ ಮನೆಯವರ ಕೈಗೆ ನೀಡಿ ಹೋಗಿದ್ದು, ಗಣತಿ ಸಂದರ್ಭದಲ್ಲಿ ಸ್ಟಿಕರ್​ಗಳು ಕಳೆದು ಹೋಗಿದ್ದರೆ ಇನ್ನು ಕೆಲವೆಡೆ ಸ್ಟಿಕರ್​ ಹರಿದು ಹೋಗಿರುವ ಕಾರಣ ಯುಎಚ್​ಐಡಿ ಸಂಖ್ಯೆ ಇಲ್ಲದೆ ಪರದಾಡುವಂತಾಗಿದೆ.

ಮಾಹಿತಿ ನೀಡದ ಹಿರಿಯ ಅಧಿಕಾರಿಗಳು: ಜಾತಿಜನಗಣತಿ ಗೊಂದಲಗಳ ಬಗ್ಗೆ ಮಾಹಿತಿ ತಿಳಿಯಲು ತಹಸೀಲ್ದಾರ್​ ಹಾಗೂ ಕ್ಷೇತ್ರ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿದರೆ ಯಾರೊಬ್ಬರೂ ಸ್ವೀಕರಿಸುವುದಿಲ್ಲ, ಬೇರೆ ಸಿಬ್ಬಂದಿ ಬಳಿ ಮಾಹಿತಿ ಕೇಳಿದರೆ ತಾಂತ್ರಿಕ ಸಮಸ್ಯೆ ಬಗೆಹರಿದಿಲ್ಲ ಎಂಬ ಉತ್ತರ ದೊರೆಯುತ್ತಿದೆ. ಆರೋಗ್ಯ ಇಲಾಖೆಯ ಸಿ ಗ್ರೂಪ್​ ನೌಕರರನ್ನು ನೇಮಕಕ್ಕೆ ಈ ಮೊದಲು ಆದೇಶ ನೀಡಲಾಗಿತ್ತು, ಅದರಲ್ಲಿ ಆಪರೇಷನ್​ ವಿಭಾಗದ, ವಾರ್ಡ್​ ಮೇಲ್ವಿಚಾರಕರು, ಒಪಿಡಿ ವಿಭಾಗದ ಸಿಬ್ಬಂದಿ, ಔಷಧ ವಿತರಣಾ ಸಿಬ್ಬಂದಿ ಜತೆ ಮುಖ್ಯ ನರ್ಸ್​ಗಳನ್ನು ಜಾತಿಗಣತಿಯಲ್ಲಿ ನೇಮಕ ಮಾಡಿಕೊಳ್ಳಬೇಕು ಎಂದು ಆದೇಶ ಹೊರಬಿದಿತ್ತು. ಆದರೆ ಈ ಬಗ್ಗೆ ಸಿಬ್ಬಂದಿ ಜತೆ ತಾಲೂಕು ದಂಡಾಧಿಕಾರಿ ಅವರನ್ನು ಭೇಟಿ ಮಾಡಿ ಎಮರ್ಜನ್ಸಿ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಜಾತಿಗಣತಿಯಿಂದ ವಿನಾಯಿತಿಗೆ ಮನವಿ ಮಾಡಿದಾಗ ಅದಕ್ಕೆ ಒಪ್ಪಿ ದಂಡಾಧಿಕಾರಿಗಳು ವಿನಾಯಿತಿ ನೀಡಿದ್ದಾರೆ. ಆದರೆ ಶುಕ್ರವಾರದ ಪಟ್ಟಿಯಲ್ಲಿ ನಮ್ಮ ಇಲಾಖೆಯ ಸಿಬ್ಬಂದಿಯನ್ನು ಕೈಬಿಡದೆ ಜಾತಿಗಣತಿಗೆ ಏಕೆ ಬಂದಿಲ್ಲ ಎಂದು ಜಾತಿಗಣತಿ ವಿಭಾಗೀಯ ಮೇಲ್ವಿಚಾರಕರು ನಮ್ಮ ಸಿಬ್ಬಂದಿಗೆ ಕರೆ ಮಾಡುತ್ತಿದ್ದು, ಈ ಬಗ್ಗೆ ಗೊಂದಲ ಮೂಡಿದೆ ಎಂದು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಮುಖ್ಯಆಡಳಿತಾಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net