ಎನ್‌ಇಪಿ ಅಳವಡಿಸಿಕೊಳ್ಳದಿದ್ದರೆ ತೊಂದರೆ: ಶಿವಾನಂದ ಸಿಂದನಕೇರಾ ಅಭಿಮತ

24
Published on

ಮೈಸೂರು: ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಳವಡಿಸಿಕೊಳ್ಳದಿದ್ದರೆ ಭವಿಷ್ಯದಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಲಿದೆ ಎಂದು ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘದ ಪ್ರಧಾನ ಕಾರ್ಯದರ್ಶಿ ಶಿವಾನಂದ ಸಿಂದನಕೇರಾ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಹಾಗೂ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘದ ಸಹಯೋಗದೊಂದಿಗೆ ಲಕ್ಷ್ಮೀಪುರಂನ ಶ್ರೀಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಇತರ ರಾಜ್ಯಗಳು ಎನ್‌ಇಪಿಯನ್ನು ಅಳವಡಿಸಿಕೊಂಡಿದ್ದು, ಅಲ್ಲಿಯ ವಿದ್ಯಾರ್ಥಿಗಳು ದೇಶ, ವಿದೇಶದಲ್ಲಿ ವಿದ್ಯಾಭ್ಯಾಸ, ಉದ್ಯೋಗ ಪಡೆಯಲು ತುಂಬಾ ಅನುಕೂಲವಾಗಲಿದೆ. ಆದರೆ ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ, ದೆಹಲಿ ಸೇರಿದಂತೆ ಇತರ ಕೆಲ ರಾಜ್ಯಗಳು ಅಳವಡಿಸಿಕೊಂಡಿಲ್ಲ. ಅಂತಹ ರಾಜ್ಯಗಳ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ತೊಂದರೆ ಅಗಲಿದೆ ಎಂದರು.
ಹಿಂದಿನ ಸರ್ಕಾರ ಕರ್ನಾಟಕದಲ್ಲಿ ಎನ್‌ಇಪಿ ಅಳವಡಿಕೆಯಾಗುವುದರಲ್ಲಿತ್ತು. ಆದರೆ ಬಳಿಕ ಬಂದ ಹೊಸ ಸರ್ಕಾರ ಅದನ್ನು ತೆಗೆದು ಹಾಕಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರಿಯ ಸ್ಪರ್ಧಾತ್ಮಕ ಪರೀಕ್ಷೆಗಳು ಎನ್‌ಇಪಿ ಶಿಕ್ಷಣ ಪದ್ಧತಿಯಡಿ ಆಯೋಜನೆಗೊಳ್ಳಲಿವೆ. ಆಗ ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ತೊಂದರೆ ಅಗಲಿದೆ ಎಂದರು.
ಭಾರತದಲ್ಲಿ ಗುರು-ಶಿಷ್ಯ ಪರಂಪರೆಗೆ ಇತಿಹಾಸವಿದೆ. ಆದರೆ ಇಂದಿನ ಪೀಳಿಗೆಯಲ್ಲಿ ಆ ಪರಂಪರೆಯನ್ನು ಉಳಿಸಿಕೊಳ್ಳಬೇಕಾದರೆ ಹಾದಿ ತಪ್ಪಿರುವ ಶಿಷ್ಯರನ್ನು ಸರಿದಾರಿಗೆ ತರುವ ಜವಾಬ್ದಾರಿ ಗುರುಗಳ ಮೇಲಿದೆ ಎಂದರು.
ಮಾಧ್ಯಮಿಕ ಶಿಕ್ಷಕ ಸಂಘ ಮೈಸೂರು ಜಿಲ್ಲಾಧ್ಯಕ್ಷ ಪಿ.ಕೆಂಪಯ್ಯ ಅಧ್ಯಕ್ಷತೆ ವಹಿಸಿದ್ದರು. ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆಯ ಸಂಯೋಜಕ ಎನ್.ಆರ್.ಮಂಜುನಾಥ್, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಆರ್.ಉದಯರವಿ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಎನ್.ಪಿ.ವಿಜಯ್ ಕುಮಾರ್, ಸಂಘಟನಾ ಕಾರ್ಯದರ್ಶಿ ಅರುಣ್‌ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net