

ಬಂಟ್ವಾಳ: ಬಿ.ಸಿ.ರೋಡು ಪೇಟೆಯಲ್ಲಿ ಪುರಸಭೆ ನಿರ್ಮಿಸಿದ ವಾಣಿಜ್ಯ ಸಂಕೀರ್ಣ ಎದುರಿನ ಸರ್ವೀಸ್ ಬಸ್ ನಿಲ್ದಾಣದಲ್ಲಿ ಸ್ಥಳೀಯ ಖಾಸಗಿ ಬಸ್ ಮತ್ತು ಆಟೋರಿಕ್ಷಾ ಮುಖ್ಯರಸ್ತೆಯಲ್ಲೇ ಕೆಲಹೊತ್ತು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ.
ಇದರಿಂದಾಗಿ ಬಸ್ ನಿಲ್ದಾಣ ಸಮೀಪದ ಕೆಲವೊಂದು ವಾಣಿಜ್ಯ ಸಂಕೀರ್ಣದ ಕಚೇರಿ ಮತ್ತಿತರ ಅಂಗಡಿಗಳಿಗೆ ತೆರಳುವ ವಾಹನ ಸವಾರರು ಮತ್ತು ಗ್ರಾಹಕರಿಗೆ ತಡೆಬೇಲಿ ಹಾಕಿದಂತಾಗಿದೆ ಎಂದು ಆರೋಪಿಸಿದ್ದಾರೆ.
ಹೆದ್ದಾರಿ ಮೇಲ್ಸೇತುವೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರಿ ಠಾಣೆ ಪೊಲೀಸರು ಇಂತಹ ಬಸ್ ಮತ್ತು ರಿಕ್ಷಾ ಚಾಲಕರಿಗೆ ಚಕಾರ ಎತ್ತದೆ ವಾಣಿಜ್ಯ ಸಂಕೀರ್ಣದ ಕಚೇರಿಗೆ ತೆರಳುವ ವಾಹನಗಳ ಫೋಟೋ ತೆಗೆದು ದಂಡ ವಿಧಿಸುತ್ತಿದ್ದಾರೆ. ಇದರಿಂದಾಗಿ ಪ್ರತಿದಿನ ಬಿ.ಸಿ.ರೋಡಿನಿಂದ ಬಂಟ್ವಾಳ, ಮೂಡುಬಿದಿರೆ, ವಾಮದಪದವು, ಪಾಣೆಮಂಗಳೂರು, ಮೆಲ್ಕಾರ್, ಮುಡಿಪು ಮತ್ತಿತರ ಕಡೆಗಳಿಗೆ ತೆರಳುವ ವಾಹನಗಳು ರಸ್ತೆಯಲ್ಲೇ ಠಿಕಾಣಿ ಹೂಡುತ್ತಿವೆ ಎಂದು ಇಲ್ಲಿನ ವಾಹನ ಸವಾರರು ಮತ್ತು ವರ್ತಕರು ಆರೋಪಿಸಿದ್ದಾರೆ.
ಈಗಾಗಲೇ ಬಸ್ ನಿಲ್ದಾಣದಿಂದ ಹೊರಟ ಖಾಸಗಿ ಬಸ್ ಮತ್ತು ಸರತಿ ಸಾಲಿನ ನಿಯಮಾವಳಿ ಮೀರಿ ರಸ್ತೆ ಬದಿ ಅಡ್ಡವಾಗಿ ನಿಲ್ಲುವ ರಿಕ್ಷಾ ಚಾಲಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಸಂಚಾರಿ ಠಾಣೆ ಪೊಲೀಸರು ತಿಳಿಸಿದ್ದಾರೆ.