

ಕೋಲಾರ; ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ವಿವಿಧ ಸರ್ಕಾರಿ ಇಲಾಖಾ ಕಚೇರಿಗಳಿಗೆ ದಿಢೀರ್ ದಾಳಿ ನಡೆಸಿದ್ದ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಲೋಪಗಳು ಕಂಡು ಬಂದ ಹಿನ್ನೆಲೆಯಲ್ಲಿ 12 ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೇ 5 ಮತ್ತು 6ರಂದು ಬಿ.ವೀರಪ್ಪ ಅವರ ತಂಡ ಶ್ರೀನಿವಾಸಪುರದಲ್ಲಿ ಎರಡು ದಿನ ಬೀಡು ಬಿಟ್ಟು, ತಾಲೂಕು ಕಚೇರಿ, ಪೊಲೀಸ್ ಠಾಣೆ, ಪುರಸಭೆ, ಸರ್ಕಾರಿ ಆಸ್ಪತ್ರೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸೇರಿ ವಿವಿಧ ಸರ್ಕಾರಿ ಇಲಾಖೆೆ, ಗ್ರಾಪಂಗಳಿಗೆ ಭೇಟಿ ನೀಡಿತ್ತು. ದಾಳಿ ವೇಳೆ ಕಂಡು ಬಂದ ಲೋಪಗಳಡಿ ಒಟ್ಟು 12 ಸ್ವಯಂ ಪ್ರಕರಣಡಿ 10 ಮಂದಿ ಎದುರುದಾರರಾಗಿದ್ದಾರೆ.
ಭೂದಾಖಲೆಗಳ ಸಹಾಯಕ ನಿರ್ದೇಶಕ ಕಚೇರಿಗೆ (ಎಡಿಎಲ್ಆರ್) ಭೇಟಿ ವೇಳೆ ಆನ್ಲೈನ್ನಲ್ಲಿ 100 ಅರ್ಜಿಗಳು ಹಾಗೂ ನೇರ 3,039 ಅರ್ಜಿಗಳು ಬಾಕಿಯಿರುವುದಾಗಿ ಸರ್ವೇಯರ್ ವಸಂತ ಕುಮಾರ್ ತಿಳಿಸಿದ್ದರು. ಅಂತೆಯೇ, ಕಚೇರಿ ವಹಿ, ನಗದು ಘೋಷಣಾ ವಹಿ ನಿರ್ವಹಿಸದಿರುವುದು, ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರ ಮಾಹಿತಿ ಲಕ ಅಳವಡಿಸದಿರುವುದು ಕಂಡು ಬಂದಿದ್ದು, ಈ ಸಂಬಂಧ ಇಲಾಖ ಸಹಾಯಕ ನಿರ್ದೇಶಕ ಎಸ್.ಎನ್.ರಾಮಕೃಷ್ಣಯ್ಯ ವಿರುದ್ಧ ದೂರು ದಾಖಲಾಗಿದೆ.
ಗ್ರೇಡ್&2 ತಹಸೀಲ್ದಾರ್ಗೆ ಸಂಕಷ್ಟ
ತಾಲೂಕು ಕಚೇರಿ ನೌಕರ ಬಸವರಾಜು ಪುಸ್ತಕದಲ್ಲಿ 5 ಸಾವಿರ ರೂ. ನಮೂದು ಮಾಡಿದ್ದಾರೆ. ಆದರೆ ಅವರ ಬಳಿ 1,800 ರೂ. ಮಾತ್ರ ಇತ್ತು. ಬಯೋಮೆಟ್ರಿಕ್ ಕೆಟ್ಟಿದ್ದರೂ ಸರಿಪಡಿಸದಿರುವುದು. ಅಲ್ಲದೇ ಶಿವಬೀರಪ್ಪ ಅವರ ಮೊಬೈಲ್ ಪರಿಶೀಲಿಸಿದಾಗ ವೇತನಕ್ಕಿಂತ ಹೆಚ್ಚು ವಹಿವಾಟು ನಡೆದಿರುವುದು ಕಂಡು ಬಂದ ಮೇರೆಗೆ ಕರ್ತವ್ಯ ಲೋಪದಡಿ ಗ್ರೇಡ್&2 ತಹಸೀಲ್ದಾರ್ ಕೆ.ಎಸ್.ಜಯರಾಮ್ ವಿರುದ್ಧ ದೂರು ದಾಖಲಾಗಿದೆ.
ರೈತರ ದೂರಿನ ಮೇರೆಗೆ ಕ್ರಮ
ಎಪಿಎಂಸಿ ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಮತ್ತು ವರ್ತಕರು ಕಮಿಷನ್ ಪಡೆಯುತ್ತಿದ್ದಾರೆ. ಶೌಚಗೃಹ ಸ್ವಚ್ಛಗೊಳಿಸಿಲ್ಲ, ಶುದ್ಧ ನೀರಿನ ಟಕ ಸರಿಪಡಿಸಿಲ್ಲ. ಹದಗೆಟ್ಟ ಟ್ರಾನ್ಸ್ಾರ್ಮರ್ ಬದಲಾಯಿಸದಿರುವುದು ಸೇರಿ ಹಲವು ಸಮಸ್ಯೆ ಬಗ್ಗೆ ರೈತರು ದೂರಿದ್ದರು. ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಆರೋಪದಡಿ ಕಾರ್ಯದರ್ಶಿ ಎಂ.ಸುನೀಲ್ ಕುಮಾರ್ ವಿರುದ್ಧ ದೂರು ದಾಖಲಾಗಿದೆ.
ಕಂಟ್ರೋಲರ್ಗೂ ತಲೆ ಬಿಸಿ
ಬಸ್ ನಿಲ್ದಾಣದಲ್ಲಿನ ಶೌಚಗೃಹ ಬಳಕೆಗೆ 2 ರೂ. ನಿಗದಿಪಡಿಸಿ 5ರಿಂದ 10 ರೂ. ವಸೂಲಿ ಮಾಡುವ ಬಗ್ಗೆ ಪ್ರಯಾಣಿಕರು ಲೋಕಾಯುಕ್ತರ ಗಮನಕ್ಕೆ ತಂದಿದ್ದರು. ಅಲ್ಲದೆ ಗ್ರಾಮಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಮಾಡದಿರುವುದು, ನಿಲ್ದಾಣದೊಳಗೆ ಖಾಸಗಿ ವಾಹನ ನಿಲ್ಲಿಸುವುದು, ನೀರಿನ ಸೌಲಭ್ಯ, ಹೋಟೆಲ್ ಪುನರಾರಂಭಕ್ಕೆ ಕ್ರಮವಹಿಸದೆ ಇರುವುದು ಸೇರಿ ಹಲವು ಕಾರಣಗಳಿಂದ ಟಿಕೆಟ್ ಕಂಟ್ರೋಲರ್ ಆರ್.ಮಂಜುನಾಥ್ ವಿರುದ್ಧ ಸ್ವಯಂ ದೂರು ದಾಖಲಾಗಿದೆ.
ಆಸ್ಪತ್ರೆಯಲ್ಲಿ ಅವ್ಯವಸ್ಥೆ
ಸರ್ಕಾರಿ ಸಾರ್ವಜನಿಕರ ಆಸ್ಪತ್ರೆ ಅವ್ಯವಸ್ಥೆ ಆಗರವಾಗಿದ್ದು, ರೋಗಿಗಳಿಗೆ ಗುಣಮಟ್ಟದ ಆಹಾರ ನೀಡದಿರುವ ಮತ್ತು ಹೊರಗಿನಿಂದ ಔಷಧ ತಂದಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಟಿಎಚ್ಒ ಡಾ.ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರು ಸ್ವೀಕರಿಸದ ಪೊಲೀಸರು
ತಾಲೂಕಿನ ವೈ.ಅಗ್ರಹಾರ ಜಿ.ಸುರೇಶ್ ನ್ಯಾಯಾಲಯದ ಆದೇಶದಂತೆ ಹುಣಸೆ ಸಲನ್ನು ಉದುರಿಸಿಕೊಳ್ಳಲು ಎದುರುದಾರರು ಬಿಡುತ್ತಿಲ್ಲವೆಂದು ಠಾಣೆಗೆ ದೂರು ನೀಡಲು ಬಂದರೂ ದೂರು ಸ್ವೀಕರಿಸದಿರುವುದುದು, ಜೂಜಾಟ, ಇಸ್ಪೀಟು, ಕ್ರಿಕೆಟ್ ಬೆಟ್ಟಿಂಗ್ ದಂಧೆ ವಿರುದ್ಧ ಕ್ರಮ ಕೈಗೊಳ್ಳದಿರುವ ಕುರಿತು ಪೊಲೀಸ್ ನಿರೀಕ್ಷಕ ಎಂ.ಬಿ.ಗೊರವನಕೊಳ್ಳ ವಿರುದ್ಧ ಹಾಗೂ ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ನಗದು ವಹಿ ನಿರ್ವಹಿಸದಿರುವುದು, ಸಿಸಿ ಕ್ಯಾಮರಾ ಅಳವಡಿಸದಿರುವುದು, ಸಕಾಲಕ್ಕೆ ಜನರ ಕೆಲಸ ಮಾಡಿಕೊಡದ ಆರೋಪದಡಿ ನೋಂದಣಾಧಿಕಾರಿ (ಪ್ರಭಾರ) ಎಸ್.ರಾಮಕೃಷ್ಣಪ್ಪ ವಿರುದ್ಧ ದೂರು ದಾಖಲಾಗಿದೆ.
ವೇತನಕ್ಕಿಂತ ವಹಿವಾಟು ಜಾಸ್ತಿ
ಜೆಜೆಎಂನಡಿ ತಾಲೂಕಿನಲ್ಲಿ 360 ಗ್ರಾಮಗಳಿಗೆ ಅಂದಾಜು 250 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, 25 ಗ್ರಾಮಗಳಲ್ಲಿ ಕಾಮಗಾರಿ ಮುಗಿದು 45 ಕೋಟಿ ರೂ. ಬಿಲ್ ಬಿಡುಗಡೆ ಮಾಡಲಾಗಿದೆ. ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುರೇಶ್, ಇತರರ ಯುಪಿಐ ಪರಿಶೀಲಿಸಿದಾಗ ವೇತನಕ್ಕಿಂತ ಹೆಚ್ಚು ವಹಿವಾಟು ನಡೆದಿದೆ. ಇದರಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯ ಕಾರ್ಯಪಾಲಕ ಅಭಿಯಂತ ಎಸ್.ಸುರೇಶ್ ವಿರುದ್ಧ ಪ್ರಕರಣ ದಾಖಲಾಗಿದೆ.
ಸಿಡಿಪಿಒ ಗೈರು
ಅಂಗನವಾಡಿಗಳಿಗೆ ನೀಡಲಾಗುತ್ತಿರುವ ಪಡಿತರ ಬಗ್ಗೆ, ಗರ್ಭಿಣಿಯರಿಗೆ ನೀಡಲಾಗುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಇರಲಿಲ್ಲ. ಪ್ರಥಮ ದರ್ಜೆ ಸಹಾಯಕಿ ಪದ್ಮಾವತಿ, ಕೆ.ಆರ್.ಸಿರಿಲ್ ಯುಪಿಐ ವಹಿವಾಟು ಹೆಚ್ಚಾಗಿವೆ. ಅದ ಕಾರಣ ಸಿಡಿಪಿಯ ಜ್ಯೋತಿಲಕ್ಷಿ$್ಮ ಮತ್ತು ಕರ್ತವ್ಯ ಲೋಪದಡಿ ನಂಬಿಹಳ್ಳಿ ಕೆ.ಜಗದೀಶ್ ವಿರುದ್ಧ ದೂರು ದಾಖಲಾಗಿದೆ.
20ಕ್ಕೂ ಹೆಚ್ಚು ಕರ್ತವ್ಯಲೋಪ
ಪಟ್ಟಣದಲ್ಲಿನ ಕ್ರೀಡಾಂಗಣ, ರಸ್ತೆ ಒತ್ತುವರಿ ತೆರವುಗೊಳಿಸದಿರುವುದು ಸೇರಿ 20ಕ್ಕೂ ಹೆಚ್ಚು ಕರ್ತವ್ಯಲೋಪಗಳು ಕಂಡು ಬಂದ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿ ವಿ.ನಾಗರಾಜ್ ವಿರುದ್ಧವೂ ದೂರು ದಾಖಲಿಸಿದ್ದರು.