

ಮಾಗಡಿ: ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರು ವಿಶ್ವಕಂಡ ಶ್ರೇಷ್ಠ ಸಂತರಾಗಿ ಲಕ್ಷಾಂತರ ಮಂದಿಗೆ ವಸತಿ, ಶಿಕ್ಷಣ, ದಾಸೋಹ ನೀಡುವ ಮೂಲಕ ಸಮಾಜಕ್ಕೆ ಬೆಳಕು ನೀಡಿದ್ದಾರೆ ಎಂದು ಕಂಚುಗಲ್ಲು ಬಂಡೇಮಠದ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು.
ತಾಲೂಕಿನ ತಟ್ಟೆಕೆರೆ ಗ್ರಾಮದಲ್ಲಿ ಸೋಮವಾರ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ವಜನಾಂಗ ಅರಾಧಿಸುವ, ಒಪ್ಪುವ ಮಹಾ ಸಂತ ಶಿವಕುಮಾರ ಸ್ವಾಮೀಜಿಯವರು ಬಾಲ್ಯದಲ್ಲಿ ಸಾಕಷ್ಟು ಕಷ್ಟಪಟ್ಟು ಪರಿಸ್ಥಿತಿ ನಿಭಾಯಿಸಿ ಸಿದ್ಧಗಂಗಾ ಮಠದ ಅಶ್ರಯ ಪಡೆದ ನಂತರ ಅವರು ಇಟ್ಟಂತ ಹೆಜ್ಜೆ ಹಿಮಾಲಯದ ಪರ್ವತದಷ್ಟು ಎತ್ತರಕ್ಕೆ ಹೋಗಿದೆ. ಅವರ ಬದುಕನ್ನೆ ಅದರ್ಶವನ್ನಾಗಿಸಿಕೊಂಡು ಸಾಗಿದರೆ ಬದುಕು ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಶ್ರೀಗಳು ಸದಾ ಕಾಲ ಭಕ್ತರ ಶ್ರೇಯಸ್ಸನ್ನು ಬಯಸುತ್ತಿದ್ದರು. ಯಾವುದೇ ಸರ್ಕಾರಗಳು ಮಾಡದಂತಹ ಸಾಧನೆ ಮಾಡಿದ್ದಾರೆ. ಮನುಷ್ಯನಲ್ಲಿ ಧರ್ಮ, ನೀತಿ, ಬಸವ ತತ್ವಗಳನ್ನು ತಿಳಿಸಲು ಗ್ರಾಮೀಣ ಬಸವ ಜಯಂತಿ ಕಾರ್ಯಕ್ರಮಗಳಲ್ಲಿ ನಾಟಕಗಳ ಮೂಲಕ ಅರಿವು ಮೂಡಿಸುತ್ತಿದ್ದರು. ಶ್ರೀಗಳು ನಮ್ಮೆಲ್ಲರ ಮಧ್ಯೆ ಇದ್ದು ಅಶೀರ್ವಾದ ನೀಡುತ್ತಿದ್ದಾರೆ. ಅವರ ಬದುಕಿನ ಕೊನೆಯ ಕ್ಷಣಗಳಲ್ಲಿ ಅವರ ಸೇವೆ ಮಾಡುವ ಅವಕಾಶ ದೊರತಿದ್ದು ಸಂತೋಷವಾಗಿದೆ ಎಂದು ಭಾವುಕರಾದರು.
ಅರಸುಗೆ ಸವಾಲು ಹಾಕಿದ್ದ ಶ್ರೀಗಳು: ಗುಡೇಮಾರನಹಳ್ಳಿ ಜಗಣ್ಣಯ್ಯನ ಮಠದ ಶ್ರೀ ಚನ್ನಬಸವ ಸ್ವಾಮೀಜಿ ಮಾತನಾಡಿ, ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳು ಯಾರೂ ಮಾಡದ ಸಾಧನೆ ಮಾಡಿ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಮಠಕ್ಕೆ ದವಸ, ಧಾನ್ಯ ನೀಡುವುದನ್ನು ನಿಲ್ಲಿಸಿದರೂ, ಅವರಿಗೆ ಸವಾಲು ಹಾಕಿ ದಾಸೋಹ ಮಾಡಿದರು. ಪ್ರತಿದಿನ ಅವರ ಸ್ಮರಣೆ ಮಾಡಿದರೆ ಎಲ್ಲರ ಬಾಳು ಬಂಗಾರವಾಗುತ್ತದೆ. ಮನಸ್ಸು ಶಾಂತವಾಗುತ್ತದೆ ಎಂದು ತಿಳಿಸಿದರು.
ವೀರಶೈವ ಬ್ಯಾಂಕ್ ನಿರ್ದೆಶಕ ಎನ್.ಆರ್.ನಾಗರುದ್ರ ಶರ್ಮ ಮಾತನಾಡಿ, ಶ್ರೀಗಳು ನಮ್ಮ ಗ್ರಾಮದ ಮೇಲೆ ಪ್ರೀತಿ ಉಳ್ಳವರಾಗಿದ್ದರು, ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಕಲ್ಪಿಸಲು ಸೋಲೂರು, ಕುದೂರು ಹೋಬಳಿ ವ್ಯಾಪ್ತಿಯಲ್ಲಿ ಪ್ರೌಢಶಾಲೆ ಪ್ರಾರಂಭಿಸಿ ಶಿಕ್ಷಣ ನೀಡಿ ಸಾವಿರಾರು ಮಂದಿಗೆ ದಾರಿದೀಪವಾಗಿದ್ದಾರೆ ಎಂದರು.
ಚಿಲುಮೆ ಮಠದ ಬಸವಲಿಂಗ ಸ್ವಾಮೀಜಿ, ವೀರಶೈವ ಕೋ-ಅಪರೇಟಿವ್ ಸೊಸೈಟಿ ಉಪಾಧ್ಯಕ್ಷ ಗಂಗಾಧರಯ್ಯ, ನಿರ್ದೇಶಕ ಶಿವಪ್ರಸಾದ್, ಮಾಜಿ ನಿರ್ದೇಶಕ ಗುಣಶೇಖರಯ್ಯ, ತಾಪಂ ಮಾಜಿ ಸದಸ್ಯ ಶಂಕರಪ್ಪ, ಚಿಕ್ಕಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ
ಶ್ರೀನಿವಾಸ ಮೂರ್ತಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗಂಗರಾಜು, ಟಿಎಪಿಸಿಎಂಎಸ್ ನಿರ್ದೇಶಕ ಸಿಂಗ್ರೀಗೌಡ, ವೀರಶೈವ ಮುಖಂಡ ಕಾಗಿಮುಡು ಜಗದೀಶ್, ಹೊನ್ನೇನಹಳ್ಳಿ ಗ್ರಾಪಂ ಉಪಾಧ್ಯಕ್ಷ ಸುರೇಶ್, ಇಂಜಿನಿಯರ್ ರವಿಕುಮಾರ್ ಇತರರು ಇದ್ದರು.
200 ಮನೆ ನಿರ್ಮಾಣ: ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದ ಮನೆ - ಮಠ ಕಳೆದು ಕೊಂಡವರು ಶ್ರೀ ಮಠದ ಸಿದ್ದಲಿಂಗ ಸ್ವಾಮೀಜಿಗೆ ಮನವಿ ಮಾಡಿದ ತಕ್ಷಣ ಮಠದಿಂದ 200 ಮನೆಗಳನ್ನು ನಿರ್ಮಿಸಿಕೊಡಲಾಗಿದೆ ಎಂದು ಕಂಚುಗಲ್ಲು ಬಂಡೇಮಠದ ಶ್ರೀ ಬಸವಲಿಂಗ ಸ್ವಾಮೀಜಿ ತಿಳಿಸಿದರು.