ತ್ರಿವಿಧ ದಾಸೋಹಿ ಡಾ.ರಾಜೇಂದ್ರ ಶ್ರೀಗಳು

29 NJD 01
ನಂಜನಗೂಡಿನ ಜೆಎಸ್‌ಎಸ್ ಪದವಿ ಕಾಲೇಜಿನಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಡಾ.ಶಿವರಾತ್ರಿ ರಾಜೇಂದ್ರ ಶ್ರೀಗಳ 108ನೇ ಜಯಂತಿ ಮಹೋತ್ಸವದ ಅಂಗವಾಗಿ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು. ಡಾ.ಸಿ.ಎಸ್.ಹೊನ್ನೇಗೌಡ, ಆರ್.ವಿ.ರೇವಣ್ಣ, ಪ್ರಧಾನ ಯೋಗ ಶಿಕ್ಷಕ ಪ್ರಕಾಶ್ ಜಿ.ಉಡಿಗಾಲ ಸೇರಿದಂತೆ ಇನ್ನಿತರರು ಇದ್ದರು.
Published on

ನಂಜನಗೂಡು: ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು ಅಗಾಧವಾಗಿ ಮಾತೃ ವಾತ್ಸಲ್ಯ ತುಂಬಿಕೊಂಡಿದ್ದರ ಫಲವಾಗಿ ಬಡವರ್ಗದ ಜನರಿಗೆ ತ್ರಿವಿಧ ದಾಸೋಹವನ್ನು ನೀಡುವ ಮೂಲಕ ಸಮಾಜದಲ್ಲಿ ಮುಂಚೂಣಿಗೆ ಬರಲು ಕಾರಣೀಭೂತರಾದ ಪರಿಣಾಮವಾಗಿ ಪ್ರಸ್ತುತ ಎಲ್ಲರಿಗೂ ಪ್ರಾತಃಸ್ಮರಣೀಯರಾಗಿದ್ದಾರೆ ಎಂದು ಲೇಖಕ ನಗರ್ಲೆ ಶಿವಕುಮಾರ್ ಹೇಳಿದರು.

ನಗರದ ಜೆಎಸ್‌ಎಸ್ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಆಯೋಜಿಸಿದ್ದ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 108ನೇ ಜಯಂತಿ ಮಹೋತ್ಸವ, ಕಪಿಲ ಶಾಖೆಯ 8ನೇ ಹಾಗೂ ಮಣಿಕರ್ಣಿಕ ಶಾಖೆಯ ಮೊದಲ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಬಡವರ್ಗದ ಜನರಿಗೆ ಗಗನ ಕುಸುಮವಾಗಿದ್ದ ಶಿಕ್ಷಣವನ್ನು ಗ್ರಾಮೀಣ ಭಾಗಕ್ಕೂ ವಿಸ್ತರಿಸಬೇಕೆಂಬ ಛಲ ತೊಟ್ಟ ಫಲವಾಗಿ ಲಕ್ಷಾಂತರ ಬಡ ಮಕ್ಕಳು ವಿದ್ಯಾವಂತರಾಗಲು ಸಾಧ್ಯವಾಗಿದೆ. ಶಿಕ್ಷಣದ ಜತೆಗೆ ದಾಸೋಹ, ವಸತಿ ವ್ಯವಸ್ಥೆಯನ್ನು ಕಲ್ಪಿಸಿ ವಿದ್ಯಾಥಿಗಳ ವ್ಯಾಸಂಗಕ್ಕೆ ಕಿಂಚಿತ್ತೂ ಚ್ಯುತಿ ಬರದಂತೆ ತಮ್ಮ ತನು ಮನವನ್ನು ಸಮರ್ಪಿಸಿಕೊಳ್ಳುವ ಮೂಲಕ ಎಲ್ಲರಿಗೂ ನಿತ್ಯಸ್ಮರಣೀಯರಾಗಿದ್ದಾರೆ ಎಂದು ಹೇಳಿದರು.

ರಾಜೇಂದ್ರ ಶ್ರೀಗಳಲ್ಲಿ ಮಾತೃ ವಾತ್ಸಲ್ಯ ಅಪರಿಮಿತವಾಗಿತ್ತು ಎಂಬುದಕ್ಕೆ ಅನೇಕ ಸನ್ನಿವೇಶಗಳು ರುಜುವಾತು ಮಾಡುತ್ತವೆ. ಅವರ ಅಂತಃಕರಣ ನಮ್ಮೆಲ್ಲರಿಗೂ ದಾರಿದೀಪವಾಗಿದೆ. ಅವರು ಹಾಕಿಕೊಟ್ಟಿರುವ ಸನ್ಮಾರ್ಗದಲ್ಲಿ ಸಾಗುವಂತಾಗಬೇಕು. ಅವರ ಜಯಂತಿ ಮಹೋತ್ಸವಗಳನ್ನು ಆಚರಿಸುವ ಮೂಲಕ ಅವರನ್ನು ಸ್ಮರಿಸುವ ಜತೆಗೆ ಅವರ ಆಶಯಗಳಿಗೆ ಅನುಗುಣವಾಗಿ ನಾವು ಜೀವನ ರೂಪಿಸಿಕೊಳ್ಳುವ ಮೂಲಕ ಅವರಿಗೆ ನಾವು ಸದಾ ಗೌರವ ಕೊಡಬೇಕು ಎಂದರು.

ನವಿಲೂರು ಹಾಗೂ ಚುಂಚನಹಳ್ಳಿ ಮಠಾಧ್ಯಕ್ಷರಾದ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿ, ಪ್ರತಿಯೊಬ್ಬರೂ ಶಿಕ್ಷಿತರಾಗುವ ಜತೆಗೆ ಸಂಸ್ಕಾರವಂತರಾಗಿ ಶಾಂತಿ, ನೆಮ್ಮದಿ, ಸಹವಾಳ್ವೆಯಿಂದ ಜೀವನ ನಡೆಸುವಂತಾಗಬೇಕು ಎಂಬುದು ರಾಜೇಂದ್ರ ಶ್ರೀಗಳ ಆಶಯವಾಗಿತ್ತು. ಅವರ ಆಶಯದಂತೆ ಸಮಾಜದಲ್ಲಿ ಸಂಸ್ಕಾರವನ್ನು ಬಿತ್ತುತ್ತಾ ಯೋಗ, ಧ್ಯಾನ, ಆಧ್ಯಾತ್ಮವನ್ನು ಪಸರಿಸುತ್ತಿರುವ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಮಾಜಮುಖಿ ಕಾರ್ಯ ನಿಜಕ್ಕೂ ಶ್ಲಾಘನೀಯ. ಸಮಿತಿಯ ಸೇವಾ ಕಾರ್ಯಗಳು ಗ್ರಾಮೀಣ ಭಾಗಕ್ಕೂ ತಲುಪುವಂತಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಎಸ್.ಹೊನ್ನೇಗೌಡ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಆರ್.ವಿ.ರೇವಣ್ಣ, ಕಾರ್ಯದರ್ಶಿ ಎನ್.ಆರ್.ಗಣೇಶಮೂರ್ತಿ, ಪ್ರಧಾನ ಯೋಗ ಶಿಕ್ಷಕ ಪ್ರಕಾಶ್ ಜಿ.ಉಡಿಗಾಲ, ಕಪಿಲ ಶಾಖೆಯ ಪ್ರಮುಖ ಹಂಡುವಿನಹಳ್ಳಿ ರಾಜು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net