ತ್ರಿವೇಣಿ ನಿವಾಸವೀಗ ‘ಬೆಳ್ಳಿಮೋಡ’ ವಸ್ತುಸಂಗ್ರಹಾಲಯ

5 - Copy
Published on

ಮೈಸೂರು: ‘ಬೆಳ್ಳಿಮೋಡ’, ‘ಹಣ್ಣೆಲೆ ಚಿಗುರಿದಾಗ’, ‘ಶರಪಂಜರ’, ‘ಬೆಕ್ಕಿನ ಕಣ್ಣು’ ಸೇರಿದಂತೆ ಅನೇಕ ಕಾದಂಬರಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವ ಖ್ಯಾತ ಕಾದಂಬರಿಗಾರ್ತಿ ತ್ರಿವೇಣಿ ಅವರ ಮೈಸೂರು ಮನೆ ಶೀಘ್ರದಲ್ಲೇ ವಸ್ತುಸಂಗ್ರಹಾಲಯವಾಗಲಿದೆ. ತ್ರಿವೇಣಿ ಅವರ ಬದುಕು, ಬರಹ, ಸಾಹಿತ್ಯ ಕೃಷಿ ಎಲ್ಲವೂ ಇಲ್ಲಿ ಅನಾವರಣಗೊಳ್ಳಲಿದೆ.

ತ್ರಿವೇಣಿ ಎಂಬ ಬರಹನಾಮದಿಂದ ಪ್ರಸಿದ್ಧರಾದವರು ಅನಸೂಯಾ ಶಂಕರ್. ಅವರು ಕನ್ನಡದ ಪ್ರಮುಖ ಮಹಿಳಾ ಕಾದಂಬರಿಕಾರರಲ್ಲೊಬ್ಬರು. ಹಲವಾರು ಜನಪ್ರಿಯ ಕಾದಂಬರಿಗಳ ಮೂಲಕ ಪ್ರಸಿದ್ಧಿಯಾದವರು. ಅವರು ಬಾಳಿ ಬದುಕಿದ ಮನೆಯನ್ನು ಜೀರ್ಣೋದ್ಧಾರ ಮಾಡಿ, ವಸ್ತುಸಂಗ್ರಹಾಲಯವನ್ನಾಗಿ ರೂಪಿಸಿ ಸಾಹಿತ್ಯ ಚಟುವಟಿಕೆಗಳಿಗೆ ವೇದಿಕೆ ಒದಗಿಸಲು ‘ತ್ರಿವೇಣಿ ಶಂಕರ್ ಸಾಹಿತ್ಯ ಪ್ರತಿಷ್ಠಾನ’ ಮುಂದಾಗಿದೆ.

ನಗರದ ಚಾಮರಾಜಪುರಂ ರೈಲ್ವೆ ನಿಲ್ದಾಣದ ಸಮೀಪದಲ್ಲಿರುವ 120 ವರ್ಷ ಹಳೆಯದಾದ ತ್ರಿವೇಣಿ ಅವರ ಮನೆ ಗತಕಾಲದ ವೈಭವದೊಂದಿಗೆ ಹೊಸ ತಲೆಮಾರಿನ ಜನರಿಗೆ ವಸ್ತುಸಂಗ್ರಹಾಲಯವಾಗಿ ಕಾಣಸಿಗಲಿದೆ. ಸಂಪೂರ್ಣ ಶಿಥಿಲವಾಗಿರುವ ಮನೆಯನ್ನು ತ್ರಿವೇಣಿ ಅವರ ಪುತ್ರಿ ಮೀರಾ ಕುಮಾರ್ ದುರಸ್ತಿಗೊಳಿಸಿ, ವಸ್ತುಸಂಗ್ರಹಾಲಯ ಮಾಡಲು ಮುಂದಾಗಿದ್ದು, ಬುಧವಾರ ಬೆಳಗ್ಗೆ ಭೂಮಿಪೂಜೆ ನೆರವೇರಿಸಿದರು.

ಸಾಹಿತ್ಯ ಕೃಷಿ ನಡೆದ ತಾಣವಿದು
ತ್ರಿವೇಣಿ ಅವರ 24 ಕತೆ ಹಾಗೂ ಎಲ್ಲ ಕಾದಂಬರಿಗಳೂ ಇದೇ ಮನೆಯಲ್ಲಿ ರಚಿತವಾದವು ಎಂಬುದು ವಿಶೇಷವಾಗಿರುವುದು ಒಂದೆಡೆಯಾದರೆ, ಅವರು ಬದುಕಿದ್ದಷ್ಟೂ ದಿನ ಇದೇ ಮನೆಯಲ್ಲಿದ್ದರು.
‘ಇಂತಹ ಮನೆಯನ್ನು ಮುಂದಿನ ಪೀಳಿಗೆಗೂ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮನೆಗೆ ‘ಬೆಳ್ಳಿಮೋಡ’ ಎಂಬ ಹೆಸರಿಟ್ಟು, ಪಾರಂಪರಿಕ ಶೈಲಿಯಲ್ಲಿಯೇ ಕಟ್ಟಡವನ್ನು ಉಳಿಸಿಕೊಂಡು ಜೀರ್ಣೋದ್ಧಾರ ಮಾಡಲಾಗುವುದು. ಅಮ್ಮ ಬಳಸಿದ್ದ ಎಲ್ಲ ವಸ್ತುಗಳನ್ನು ಜಾಗರೂಕವಾಗಿ ಕಾಪಾಡಿಕೊಂಡಿದ್ದು, ಅವುಗಳನ್ನು ಒಳಗೊಂಡಂತೆ ಇಡೀ ಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಮಾಡಲು ಉದ್ದೇಶಿಸಲಾಗಿದೆ’ ಎಂದು ಮೀರಾ ಕುಮಾರ್ ಹೇಳಿದರು.
‘ಲಂಡನ್ ಪ್ರವಾಸದಲ್ಲಿದ್ದಾಗ ಖ್ಯಾತ ನಾಟಕಕಾರ ವಿಲಿಯಂ ಷೇಕ್ಸ್‌ಪಿಯರ್ ಜೀವಿಸಿದ್ದ ಮನೆಗೆ ಭೇಟಿ ನೀಡಿದ್ದೆ. ಆ ಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿ ರೂಪಿಸಿ ರಕ್ಷಿಸಲಾಗಿದೆ. ಅವರು ಬಳಸಿದ್ದ ವಸ್ತುಗಳು, ಬರೆದ ಪತ್ರಗಳು, ಪಡೆದ ಪ್ರಶಸ್ತಿಗಳು ಎಲ್ಲವೂ ಅಲ್ಲಿದ್ದವು. ಅದರಂತೆ ನಮ್ಮ ತಾಯಿ ತ್ರಿವೇಣಿ ಅವರ ಮನೆಯನ್ನೂ ಸ್ಮಾರಕ ಮಾಡಬೇಕೆಂಬ ಬಯಕೆ ಮೂಡಿತ್ತು. ಆದರೆ ಮನೆ ದುರಸ್ತಿಗೆ ಅಗತ್ಯವಿರುವ ಹಣದ ಕೊರತೆಯಿಂದ ಸುಮ್ಮನಾಗಿದ್ದೆವು. ಸದ್ಯಕ್ಕೆ ತ್ರಿವೇಣಿ ಅವರ ಅಭಿಮಾನಿಯೊಬ್ಬರು ಮನೆಯನ್ನು ಜೀರ್ಣೋದ್ಧಾರ ಮಾಡಿಕೊಡಲು ಮುಂದೆ ಬಂದಿದ್ದಾರೆ’ ಎಂದು ತಿಳಿಸಿದರು.


75*105 ಅಡಿ ಅಳತೆಯ ನಿವೇಶನದಲ್ಲಿ ಎರಡು ಮನೆಗಳಿದ್ದು, ಒಂದು ಮನೆ 120 ವರ್ಷ ಹಳೆಯದಾದರೆ, ಇನ್ನೊಂದು 90 ವರ್ಷಗಳಷ್ಟು ಹಳೆಯದು. ಎರಡನೇ ಮನೆಯನ್ನು ಅಮ್ಮನೇ ತಂದೆಗೆ ಹೇಳಿ ಕಟ್ಟಿಸಿಕೊಂಡಿದ್ದರು. ಈಗ ಎರಡೂ ಮನೆ ಶಿಥಿಲವಾಗಿರುವುದರಿಂದ ಹಳೆಯ ಕಟ್ಟಡ ಶಿಲ್ಪಶಾಸ್ತ್ರಜ್ಞರಾದ ಪಂಕಜ್ ಮೋದಿ, ರಘುನಾಥ್ ತಂಡ ದುರಸ್ತಿ ಕಾರ್ಯ ಆರಂಭಿಸಲಿದೆ ಎಂದು ಮಾಹಿತಿ ನೀಡಿದರು.
ಶಿಲ್ಪಶಾಸ್ತ್ರಜ್ಞ ಪಂಕಜ್ ಮೋದಿ ಮಾತನಾಡಿ, ಕಟ್ಟಡ ಅಲ್ಲಲ್ಲಿ ಶಿಥಿಲವಾಗಿದ್ದು, ಕೆಲ ಭಾಗಗಳನ್ನು ತೆಗೆದು ಮೊದಲಿದ್ದಂತೆಯೇ ನಿರ್ಮಿಸಬೇಕಿದೆ. ಇದಕ್ಕೆ ಒಂದು ವರ್ಷ ಕಾಲಾವಕಾಶ ಅಗತ್ಯ. ಹಿಂದೆ ಕಟ್ಟಡ ನಿರ್ಮಾಣ ಮಾಡುವಾಗ ಬಳಸಿದ್ದ ವಸ್ತುಗಳನ್ನೇ ಬಳಿಸಿ, ದುರಸ್ತಿ ಮಾಡಲಾಗುವುದು ಎಂದರು.

ಮ್ಯೂಸಿಯಂ ವಿಶೇಷ
ತ್ರಿವೇಣಿ ಅವರ ಸೀರೆಗಳು, ಮೇಕಪ್ ಬಾಕ್ಸ್, ಪೆನ್ನುಗಳು, ಡೈರಿ, ಬರೆದ ಪತ್ರಗಳು, ಪಡೆದುಕೊಂಡಿದ್ದ ಪ್ರಶಸ್ತಿಗಳು, ಅಪರೂಪದ ಛಾಯಾಚಿತ್ರಗಳು, ಬಳಸಿದ ಪೀಠೋಪಕರಣಗಳು ಇರಲಿವೆ. ಇನ್ನೊಂದು ಮನೆಯಲ್ಲಿ ಆಪ್ತಸಲಹಾ ಕೇಂದ್ರ ತೆರೆದು ಮಹಿಳೆಯರು, ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರಿಗೆ ಅಗತ್ಯ ಸಲಹೆ ನೀಡಲಾಗುತ್ತದೆ.

ಕನ್ನಡ ಸಾಹಿತ್ಯಕ್ಕೆ ತ್ರಿವೇಣಿ ಅವರು ನೀಡಿರುವ ಕೊಡುಗೆ ಅಪಾರ. ಅವರ 21 ಕಾದಂಬರಿಗಳಲ್ಲಿ 5 ಚಲನಚಿತ್ರಗಳಾದವು. ಅದರಲ್ಲಿ ‘ಬೆಳ್ಳಿಮೋಡ’ ಚಿತ್ರ ಅಮೋಘ ಯಶಸ್ಸು ಕಂಡಿತು. ಹಾಗಾಗಿ ಈ ಮನೆಗೆ ಜೀರ್ಣೋದ್ಧಾರ ಮಾಡಿದ ಬಳಿಕ ‘ಬೆಳ್ಳಿಮೋಡ’ ಎಂಬ ಹೆಸರನ್ನು ಇಡಲಾಗುವುದು. ಒಂದು ವರ್ಷದ ಅವಧಿಯಲ್ಲಿ ಈ ಕೆಲಸ ಪೂರ್ಣಗೊಳ್ಳಲಿದೆ.
ಮೀರಾ ಕುಮಾರ್, ತ್ರಿವೇಣಿ ಪುತ್ರಿ

ಶೀಘ್ರ ಇ-ಬುಕ್
ಖ್ಯಾತ ಕಾದಂಬರಿಗಾರ್ತಿ ತ್ರಿವೇಣಿ ಅವರು ನಿಧನರಾಗಿ ಅನೇಕ ವರ್ಷಗಳಾದರೂ ಅವರ ಕಾದಂಬರಿಗಳ ಬೇಡಿಕೆ ಹಾಗೇ ಇದೆ. ಇಂದಿನ ಪೀಳಿಗೆಗೆ ಅವರ ಕಾದಂಬರಿಗಳು ತಲುಪಬೇಕು ಎನ್ನುವ ಉದ್ದೇಶದಿಂದ ಇದೀಗ ಅವರ ಎಲ್ಲ ಕಾದಂಬರಿಗಳನ್ನು ಆಡಿಯೋ ಮತ್ತು ಇ-ಬುಕ್ ಅವತರಣಿಕೆಯಲ್ಲಿ ಹೊರತರುವ ಸಂಬಂಧ ತಯಾರಿ ಕೆಲಸ ನಡೆಯುತ್ತಿದೆ ಎಂದು ಅವರ ಪುತ್ರಿ ಮೀರಾ ಕುಮಾರ್ ತಿಳಿಸಿದರು.
ಇ-ಬುಕ್ ಅವತರಣಿಕೆ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಮುಂದಿನ ತಿಂಗಳು ಲಭ್ಯವಾಗಲಿದೆ. ಆದಷ್ಟು ಬೇಗ ಆಡಿಯೋ ಅವತರಣಿಕೆಯನ್ನೂ ಬಿಡುಗಡೆ ಮಾಡಲಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net