ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಹಿಂದು ಮಹಿಳೆಯರ ಸ್ವರಕ್ಷಣೆಗಾಗಿ ನಗರದ ಶ್ರೀ ಶಿವಕೃಷ್ಣ ಮಂದಿರದಲ್ಲಿ ಏ. 18ರಂದು ಬೆಳಗ್ಗೆ 11ಗಂಟೆಗೆ ತ್ರಿಶೂಲ ದೀಕ್ಷೆ ಹಾಗೂ ಲವ್ ಜಿಹಾದ್ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀ ರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಾವಿರ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡಲಾಗುವುದು. ಮಾತಾ ಆಶ್ರಮದ ಮಾತಾ ತೇಜೋಮಯಿ, ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ, ಉಪ ಮೇಯರ್ ದುರ್ಗಮ್ಮ ಬಿಜವಾಡ, ಶ್ರೀ ರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಪಾಲ್ಗೊಳ್ಳುವರು ಎಂದರು.
ಶ್ರೀ ರಾಮ ಸೇನೆ ಹುಬ್ಬಳ್ಳಿ ಧಾರವಾಡ ಜಿಲ್ಲೆ ಘಟಕದ ವತಿಯಿಂದ ಕಾರ್ಯಕ್ರಮ ಸಂಘಟಿಸಲಾಗಿದೆ. ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಏ. 16ರಂದು ಸಂಜೆ 4 ಗಂಟೆಗೆ ಶ್ರೀ ಸಿದ್ಧಾರೂಢ ಮಠದಿಂದ ಮೂರುಸಾವಿರ ಮಠದವರೆಗೆ ಆಟೋ ರಿಕ್ಷಾ ಮತ್ತು ಬೈಕ್ ರ‍್ಯಾಲಿ ಆಯೋಜಿಸಲಾಗಿದೆ. ಲವ್ ಜಿಹಾದ್ವುುಕ್ತ ಕರ್ನಾಟಕ ಆಗಬೇಕು ಎಂಬುದು ನಮ್ಮ ಉದ್ದೇಶ. ರಾಜ್ಯದಲ್ಲಿ 100 ಕಡೆ ತ್ರಿಶೂಲ ದೀಕ್ಷೆ ಕಾರ್ಯಕ್ರಮ ನಡೆಸಲಿದ್ದೇವೆ ಎಂದು ತಿಳಿಸಿದರು.
ಏ. 18ರಂದು ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯಾಗಿ 1 ವರ್ಷವಾಗಲಿದೆ. ಆದರೆ, ಆರೋಪಿಗೆ ಇನ್ನು ಶಿಕ್ಷೆಯಾಗಿಲ್ಲ. ಅಂಜಲಿ ಅಂಬಿಗೇರ ಹತ್ಯೆಗೂ ನ್ಯಾಯ ಸಿಕ್ಕಿಲ್ಲ. ಭಾನುವಾರ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಆರೋಪಿಯನ್ನು ಪೊಲೀಸ್ರು ಎನ್ಕೌಂಟರ್ ಮಾಡಿದ್ದನ್ನು ಸ್ವಾಗತಿಸುತ್ತೇವೆ. ಅತ್ಯಾಚಾರಿಗಳಿಗೆ, ಕೊಲೆಗಡುಕರಿಗೆ ಎನ್ಕೌಂಟರ್ ಉತ್ತರವಾಗಿದೆ ಎಂದರು.
ಹುಬ್ಬಳ್ಳಿ-ಧಾರವಾಡದಲ್ಲಿ ಡ್ರಗ್ಸ್ ಮಾಫಿಯಾ ವ್ಯಾಪಕವಾಗಿದೆ. ಪೊಲೀಸರು, ಮಾರಾಟಗಾರರನ್ನು ಹಿಡಿದು ಕಣ್ಣೊರೆಸುವ ತಂತ್ರ ಮಾಡುವುದು ಬೇಡ. ಕಿಂಗ್ ಪಿನ್ಗಳನ್ನು ಹಿಡಿಯಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಗಿ, ಯಶೋಧಾ ತಾಂಬೆ, ವೀರಯ್ಯ ಸಾಲಿಮಠ, ಇತರರು ಇದ್ದರು.