

ಶಿರಸಿ: ವಾಸ್ತವ್ಯದ ಯಾವುದೇ ದಾಖಲೆಗಳನ್ನು ಹೊಂದಿರದ, ಖಾಸಗಿ ಭೂಮಿಗಳಲ್ಲಿ ವಾಸವಾಗಿರುವ ತಾಂಡಾ, ಹಟ್ಟಿಗಳ ತ್ರಿಶಂಕು ಪರಿಸ್ಥಿತಿಗೆ ಮುಕ್ತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇವುಗಳಿಗೆ ಗ್ರಾಮದ ಅಧಿಕಾರ ನೀಡುವ ಕಾರ್ಯ ಮಾಡಲಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಸರ್ಕಾರಿ ಪಡಾ ಭೂಮಿ ಅತಿಕ್ರಮಣ ಮಾಡಿಕೊಂಡಿದ್ದ ಬಗರ್ ಹುಕುಂ ರೈತರಿಗೆ ನಗರದ ಅಂಬೇಡ್ಕರ್ ಸಭಾಭವನದಲ್ಲಿ ಸಾಗುವಳಿ ಚೀಟಿ, ಪಹಣಿಪತ್ರಿಕೆ ಹಾಗೂ ಪೋಡಿ ದಾಖಲೆಯನ್ನು ಬುಧವಾರ ವಿತರಿಸಿ ಅವರು ಮಾತನಾಡಿದರು.
ತಾಂಡಾ ಮತ್ತು ಹಟ್ಟಿಗಳಲ್ಲಿ ಭೂಮಿಯ ದಾಖಲೆ ತೆಗೆಸಿದರೆ ಯಾವುದೋ ಜಮೀನ್ದಾರನ ಹೆಸರಿರುತ್ತಿದೆ ಹೊರತು ಅಲ್ಲಿಯ ನಿವಾಸಿಗಳ ಹೆಸರಿರುವುದಿಲ್ಲ. ಇದರಿಂದಾಗಿ ಅವರು ನೂರಾರು ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ದಾಖಲೆ ರಹಿತ ಗ್ರಾಮಗಳನ್ನು ದಾಖಲೆ ಸಹಿತ ಗ್ರಾಮವನ್ನಾಗಿ ಸರ್ಕಾರ ಮಾಡುತ್ತಿದೆ. ರಾಜ್ಯದಲ್ಲಿ ಇಂತಹ 3800 ದಾಖಲೆ ರಹಿತ ಗ್ರಾಮಗಳನ್ನು ಗುರುತಿಸಿ, ಇಲ್ಲಿ ವಾಸವಾಗಿರುವ 1.5 ಲಕ್ಷ ಕುಟುಂಬಗಳಿಗೆ ಮುಂದಿನ 6 ತಿಂಗಳ ಒಳಗೆ ಅವರ ಭೂಮಿಯ ಹಕ್ಕು ಪತ್ರ ನೀಡಲಾಗುವುದು. ಉತ್ತರ ಕನ್ನಡದಲ್ಲಿ ಜಿಲ್ಲೆಯಲ್ಲಿ ಮುಂಡಗೋಡ ಮತ್ತು ಹಳಿಯಾಳ ತಾಲೂಕಿನಿಂದ ಒಟ್ಟು 16 ತಾಂಡಾ ಗ್ರಾಮಗಳಿದ್ದು, ಅವರನ್ನು ಈ ಯೋಜನೆಯಡಿ ಪರಿಗಣಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆಯಲ್ಲಿ ಹೆಚ್ಚು ಪ್ರಕರಣ ಬಾಕಿ ಇವೆ. ಆದರೆ, ಸುಪ್ರೀಂ ಕೋರ್ಟ್ ಆದೇಶ, ಕಾನೂನಾತ್ಮಕ ತೊಡಕಿನಿಂದಲೂ ಹಕ್ಕು ಪತ್ರ ವಿತರಣೆಗೆ ಹಿನ್ನಡೆ ಆಗುತ್ತಿದೆ. ಆದಾಗ್ಯೂ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸುತ್ತದೆ. ಕಾನೂನಿನಲ್ಲಿ ಅವಕಾಶ ಇರುವಲ್ಲಿ ನಾವು ಹಕ್ಕು ಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಿದ್ದೇವೆ ಎಂದರು.
ರಾಜ್ಯದಲ್ಲಿ ಹಿಂದೆ ಉಳುವವನೇ ಹೊಲದ ಒಡೆಯ ಎಂಬ ಕಾನೂನು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿತ್ತು. ಈಗ ಬಗರ್ ಹುಕುಂ ಕಾಯ್ದೆ ಮೂಲಕ ರೈತರಿಗೆ ಭೂಮಿ ಮಂಜೂರಿಯೂ ಇದೇ ಮಾದರಿಯಲ್ಲಿದೆ. ಭೂಮಿ ರಹಿತರು ಬಗರ್ ಹುಕುಂ ಅಡಿಯಲ್ಲಿ ಅರ್ಜಿ ಸಲ್ಲಿಸುತ್ತಲೇ ಇದ್ದಾರೆ. ಆದರೆ, ಮಂಜೂರಿ ಮಾತ್ರ ಕಾರ್ಯರೂಪಕ್ಕೆ ಬಂದಿರಲಿಲ್ಲ. ಅರ್ಜಿ ಸಲ್ಲಿಸಿದವರಲ್ಲಿ 25 ರಿಂದ 30 ಲಕ್ಷ ಕುಟುಂಬಗಳಿಗೆ ಬಗರ್ ಹುಕುಂನಲ್ಲಿ ಭೂಮಿ ಮಂಜೂರಿಗೆ ಅವಕಾಶ ಇದ್ದರೂ ಇವರಲ್ಲಿ ಶೇ.50 ರಷ್ಟು ಜನಕ್ಕೆ ದಾಖಲೆಯ ಕೊರತೆ ಕಾಡಿದೆ. ಬಗರ್ ಹುಕುಂ ಸಮಿತಿ ನಿರ್ಣಯ, ಸಾಗುವಳಿ ಚೀಟಿ, ಬಗರ್ ಹುಕುಂನಲ್ಲಿ ನೋಂದಣಿಯಾದ ಕಾಗದಪತ್ರಗಳು ಅವರಲ್ಲಿಲ್ಲ. ಕೆಲವರ ಬಳಿ ಕನಿಷ್ಠ ದಾಖಲೆ ಸಹ ಇಲ್ಲ. ನಾವು ಮೊದಲು ಅರ್ಜಿ ಸಲ್ಲಿಸಿದ ವ್ಯಕ್ತಿಗೆ ಜಮೀನಿದೆಯಾ, ಅವರು ಸಾಗುವಳಿ ಮಾಡುತ್ತಿದ್ದಾರಾ ಎಂಬುದನ್ನು ಪರಿಶೀಲಿಸಿಕೊಳ್ಳುತ್ತಿದ್ದೇವೆ. ಪರಿಶೀಲನೆಯನ್ನೂ ಬಿಗಿಗೊಳಿಸಿ, ಲಭ್ಯವಿರುವ ದಾಖಲೆಗಳ ಡಿಜಿಟಲೀಕರಣ ಮಾಡುತ್ತಿದ್ದೇವೆ. ಇಂದು ಶಿರಸಿ, ಸಿದ್ದಾಪುರ ತಹಸೀಲ್ದಾರರು ಬಗರ್ ಹುಕುಂ ಕುರಿತಂತೆ ಅರ್ಜಿ ವಿಲೇವಾರಿ ಮಾಡಿದ್ದರಿಂದ ಭೂಮಿ ನೀಡಲು ಸಾಧ್ಯವಾಗಿದೆ. ಸದ್ಯ ನಾಲ್ವರು ರೈತರಿಗೆ ಪಹಣಿ, ಪೋಡಿ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಕಾರ್ಯ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ ಎಂದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಉತ್ತರ ಕನ್ನಡದಲ್ಲಿ ರೈತರ ಸೊಪ್ಪಿನ ಬೆಟ್ಟ ಭೂಮಿಯನ್ನು ಬ ಖರಾಬ ವ್ಯಾಪ್ತಿಗೆ ಸೃಜಿಸಿರುವುದರಿಂದ ಸಮಸ್ಯೆ ಉಂಟಾಗಿದೆ. ಬೆಟ್ಟ ಭೂಮಿಯ ದಾಖಲೆಗಳಲ್ಲಾದ ದೋಷಗಳನ್ನು ಸರಿಪಡಿಸಿಕೊಡಬೇಕು. ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಜಾಸ್ತಿ ಇದ್ದು, ಸರ್ಕಾರದಿಂದ ಮನೆ ಮಂಜೂರಾದರೂ ಸ್ವಂತ ಭೂಮಿ ಇಲ್ಲದ ಕಾರಣ ನಿರ್ವಿುಸಿಕೊಳ್ಳಲು ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಮಾಗೋಪಾಯ ಕಂಡುಕೊಳ್ಳಬೇಕಿದೆ ಎಂದರು.
ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಶರ್ವಿುಳಾ ಮಾದನಗೇರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಉಪವಿಭಾಗಾಧಿಕಾರಿ ಕೆ. ಕಾವ್ಯಾರಾಣಿ, ತಹಸೀಲ್ದಾರ್ ಶ್ರೀಧರ ಮುಂದಲಮನಿ ಇತರರಿದ್ದರು.
ತಪ್ಪಾಗಿದ್ದರೆ ಸರಿಪಡಿಸುತ್ತೇವೆ
ರೈತರ ಸೊಪ್ಪಿನ ಬೆಟ್ಟದ ಪಹಣಿಯಲ್ಲಿ ಬ ಖರಾಬ್ ಎಂದು ದಾಖಲಾಗಿರುವ ವಿಷಯ ಗಮನಕ್ಕೆ ಬಂದಿದೆ. ನಮ್ಮಿಂದ ಈ ತಪ್ಪಾಗಿದ್ದರೆ ಅದನ್ನು ಸರಿಪಡಿಸುತ್ತೇವೆ. ಈ ಕುರಿತು ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದುಕೊಳ್ಳಲಿದ್ದೇನೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೊಪ್ಪಿನ ಬೆಟ್ಟ ಬ ಖರಾಬ್ ಕಾನೂನಾತ್ಮಕವಾಗಿ ಆಗಿದ್ದರೆ ಅದರ ವಿರುದ್ಧ ನಾವು ಹೋಗಲು ಸಾಧ್ಯವಿಲ್ಲ. ನಮ್ಮ ತಪ್ಪಿನಿಂದಾಗಿದ್ದರೆ ಅದನ್ನು ಸರಿಪಡಿಸುತ್ತೇವೆ ಎಂದರು. ಸರ್ವೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ನಿಜ. ಹೀಗಾಗಿ ಸರ್ವೆಯರ್, ಎಡಿಎಲ್ಆರ್ ಹುದ್ದೆ ತುಂಬಿಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ. 746 ಇಂತಹ ಹುದ್ದೆ ತುಂಬಿಕೊಳ್ಳಲು ಅರ್ಜಿ ಕರೆದಿದ್ದೇವೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದೆ. ಇಲ್ಲಿಯವರೆಗೂ ಸರ್ಕಾರದ ಸಾಧನೆ ಪ್ರಶಂಸನೀಯವಾಗಿದೆ. ಉಪಚುನಾವಣೆಯಲ್ಲಿ ಯಾರೂ ನಿರೀಕ್ಷೆ ಮಾಡದಂತೆ ಮೂರೂ ಕ್ಷೇತ್ರಗಳಲ್ಲಿ ಗೆದ್ದಿದ್ದೇವೆ. ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲಿಯೂ ನಾವು ಗೆದ್ದಿದ್ದೇವೆ. ವಿರೋಧಿಗಳು ನಮ್ಮ ಒಗ್ಗಟ್ಟನ್ನು ಕಂಡು ಪವರ್ ಶೇರಿಂಗ್ ಬಗ್ಗೆ ಮಾತನಾಡುತ್ತಿದ್ದಾರೆ. ಸಮಯದಿಂದ ಸಮಯಕ್ಕೆ ರಾಜಕೀಯ ಬದಲಾವಣೆ ಆಗುತ್ತದೆ. ಆ ಸಂದರ್ಭದಲ್ಲಿ ಚರ್ಚೆ ಮಾಡೋಣ. ಗಾಳಿ ಮಾತುಗಳಿಂದ ಯಾರ ಹೊಟ್ಟೆಯೂ ತುಂಬುವುದಿಲ್ಲ. ಚಾಣಕ್ಯನ ಕಾಲದಿಂದಲೂ ರಾಜಕೀಯ ಇದೆ. ನಾವು ಜನಪರ ಕಾರ್ಯ ಮಾಡುತ್ತಿದ್ದೇವೆ ಎಂದರು.